Advertisement

ಪಾದರಾಯನಪುರದಲ್ಲಿ ಸ್ಥಳೀಯರ ಸಂಪೂರ್ಣ ಪರೀಕ್ಷೆ

08:12 AM May 13, 2020 | Lakshmi GovindaRaj |

ಬೆಂಗಳೂರು: ಪಾದರಾಯನಪುರದಲ್ಲಿ ಸೋಂಕು ದೃಢಪಟ್ಟ ರಸ್ತೆಗಳಲ್ಲಿನ ಎಲ್ಲ ಸ್ಥಳೀಯರನ್ನು ಬುಧವಾರದಿಂದ (ಇಂದಿನಿಂದ) ಸೋಂಕು ಪರೀಕ್ಷೆಗೆ  ಒಳಪಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌  ತಿಳಿಸಿದ್ದಾರೆ. ಪಾದರಾಯನಪುರದಲ್ಲಿ ಇಲ್ಲಿಯವರೆಗೆ 49 ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿರುವ ರಸ್ತೆಗಳಲ್ಲಿನ ಜನರಿಗೆ ಗಂಟಲು ದ್ರವ ಪರೀಕ್ಷೆ ನಡೆಸುವುದಕ್ಕೆ ಸಕಲ ಸಿದತೆ  ಮಾಡಿಕೊಳ್ಳಲಾಗಿದೆ. ಬುಧವಾರದಿಂದ ಈ ಭಾಗದಲ್ಲಿ ಶೇ.100ರಷ್ಟು ಕೊರೊನಾ ಸೋಂಕು ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು.

Advertisement

ಇದಕ್ಕೆ ಬೇಕಾದ ಎಲ್ಲ ಸಿದತೆಗಳನ್ನು ಪಾಲಿಕೆ ಮಾಡಿಕೊಂಡಿದೆ. ಸರ್ಕಾರವೂ ಈ ಭಾಗದಲ್ಲಿ  ಎಲ್ಲರ ಗಂಟಲು ದ್ರವ ಪರೀಕ್ಷೆಗೆ ಅನುಮತಿ ನೀಡಿದ್ದು, ಅಗತ್ಯವಿರುವ ಪಿಪಿಇ ಕಿಟ್‌ಗಳನ್ನು ನೀಡಿದೆ. ಗಂಟಲು ದ್ರವ ಸಂಗ್ರಹ ಮಾಡಿ ಸಂಬಂಧ ಪಟ್ಟ ಲ್ಯಾಬ್‌ಗಳಿಗೆ ಕಳುಹಿಸಿ ಕೊಡಲಾಗುವುದು. ಸೋಮವಾರದಿಂದಲೇ ಗಂಟಲು ದ್ರವ  ಸಂಗ್ರಹ ಪ್ರಾರಂಭವಾಗ ಬೇಕಾಗಿತ್ತು. ಆದರೆ, ಗಂಟಲು ದ್ರವ ಸಂಗ್ರಹಕ್ಕೆ ಬಳಸುವ ಕಿಯೋಸ್ಕ್ಗಳನ್ನು ಬೇರೆಡೆ ಬಳಸುತ್ತಿದ್ದ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಿ ರಲಿಲ್ಲ ಎಂದು ಮಾಹಿತಿ ನೀಡಿದರು.

ಮತ್ತೆ ಮೂವರಲ್ಲಿ ಕೊರೊನಾ ಸೋಂಕು: ಪಾದರಾಯನಪುರದಲ್ಲಿ ಗಲಭೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈತನ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು  ಇರುವುದು ಮಂಗಳವಾರ ದೃಢಪಟ್ಟಿದೆ. ರೋಗಿ ಸಂಖ್ಯೆ 454 ವ್ಯಕ್ತಿಯ ಸಂಪರ್ಕದಲ್ಲಿದ್ದ ಪಕ್ಕದ ಮನೆಯವರನ್ನು ಕ್ವಾರಂಟೈನ್‌ ಮಾಡಲಾಗಿತ್ತು.

ಈಗ ಕ್ವಾರಂಟೈನ್‌ ಮಾಡಲಾಗಿದ್ದ ಮೂವರು ಮಹಿಳೆಯರಲ್ಲೂ ಸೋಂಕು ಇರುವುದು  ದೃಢಪಟ್ಟಿದೆ. ರೋಗಿ ಸಂಖ್ಯೆ 454 ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಹಿನ್ನೆಲೆಯಲ್ಲಿ ಮೂವರು ಮಹಿಳೆಯರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಸದ್ಯ ಕ್ವಾರಂಟೈನ್‌ ನಲ್ಲಿದ್ದವರಿಗೇ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರ ಪ್ರಾಥಮಿಕ ಹಾಗೂ ದ್ವಿತೀಯ  ಸಂಪರ್ಕಿತರನ್ನು ಪತ್ತೆ ಮಾಡುವ ತಲೆನೋವು ತಪ್ಪಿದೆ.

ಹೊಂಗಸಂದ್ರದಲ್ಲಿ ಮತ್ತೂಬ್ಬರಲ್ಲಿ ಸೋಂಕು: ಬೊಮ್ಮನಹಳ್ಳಿಯ ಹೊಂಗಸಂದ್ರದ ವಾರ್ಡ್‌ ನಲ್ಲಿ ಮತ್ತೂಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಭಾಗದಲ್ಲಿ ಮತ್ತೆ ಆತಂಕ ಶುರುವಾಗಿದೆ. ಹೊಂಗಸಂದ್ರ ವಾರ್ಡ್‌ನಲ್ಲಿ  ಬಿಹಾರಿ ಕಾರ್ಮಿಕನೊಬ್ಬನಲ್ಲಿ ಕಾಣಿಸಿಕೊಂಡಿದ್ದ ಸೋಂಕು ಬಳಿಕ 35 ಜನರಿಗೆ ಹರಡಿತ್ತು. ಸದ್ಯ ಮಂಗಮ್ಮನಪಾಳ್ಯದಲ್ಲಿ ಗೂಡ್ಸ್‌ ಆಟೋ ಚಾಲಕನಲ್ಲೂ ಸೋಂಕು ಇರುವುದು ದೃಢಪಟ್ಟಿದೆ.

Advertisement

ಈ ಭಾಗದಲ್ಲಿದ್ದ ಪ್ರಕರಣ   ದೃಢಪಟ್ಟವರ ಸಂಪರ್ಕದಲ್ಲಿ ಈ ವ್ಯಕ್ತಿ ಇರಲಿಲ್ಲ. ಆದರೆ, ಸೋಂಕು ಹೇಗೆ ಬಂತು ಎನ್ನುವ ಬಗ್ಗೆ ಇನ್ನಷ್ಟೇ ತಿಳಿಯಬೇಕು ಎಂದು ಬೊಮ್ಮನಹಳ್ಳಿ ಆರೋಗ್ಯಾಧಿಕಾರಿ ಡಾ.ಸುರೇಶ್‌ ತಿಳಿಸಿದ್ದಾರೆ. ಇನ್ನು ಈತನ ಪ್ರಾಥಮಿಕ ಹಾಗೂ ದ್ವಿತೀಯ  ಸಂಪರ್ಕದಲ್ಲಿದ್ದವರ ಮಾಹಿತಿ ಕಲೆಹಾಕಲಾಗುತ್ತಿದ್ದು, ಸೋಂಕು ದೃಢಪಟ್ಟ ವ್ಯಕ್ತಿಯ ಕುಟುಂಬದವರನ್ನು ಕ್ವಾರಂಟೈನ್‌  ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

25 ಕುಟುಂಬಗಳ 25 ಜನರ ಗಂಟಲು ದ್ರವ ಪರೀಕ್ಷೆ: ಪಾದರಾಯನಪುರದಲ್ಲಿ ಮೊದಲ ಹಂತದಲ್ಲಿ 25 ಕುಟುಂಬಗಳ 25 ಜನರ ಗಂಟಲು ದ್ರವ ಪರೀಕ್ಷೆ ಮಾಡಲು ಪಾಲಿಕೆಯ ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ. ಬುಧವಾರ  ಮೊದಲ ಹಂತ ದಲ್ಲಿ ಕಂಟೈನ್ಮೆಂಟ್‌ ನ ಹೊರ ಭಾಗದಲ್ಲಿ ಪರೀಕ್ಷೆ ಮಾಡಿ ಆ ಭಾಗವನ್ನು ಕಂಟೈನ್ಮೆಂಟ್‌ ಮುಕ್ತ ಮಾಡಲು ಪಾಲಿಕೆ ಮುಂದಾಗಿದೆ. ಯಾವ ಭಾಗದಲ್ಲಿ ಸೋಂಕು ದೃಢಪಡುವುದಿಲ್ಲವೋ ಆ ನಿರ್ದಿಷ್ಟ ಪ್ರದೇಶವನ್ನು  ಕಂಟೈನ್ಮೆಂಟ್‌ ಮುಕ್ತ ಗೊಳಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ.

ಸಿಬ್ಬಂದಿ ಮೇಲೆ ಕ್ರಮ: ಹೊಂಗಸಂದ್ರದಲ್ಲಿ ಮಂಗಳವಾರ ಕೊರೊನಾ ಸೋಂಕು ದೃಢಪಟ್ಟ (ರೋಗಿ ಸಂಖ್ಯೆ 911) ವ್ಯಕ್ತಿಗೆ ಚಿಕಿತ್ಸೆ ನೀಡಿರುವುದರ ಬಗ್ಗೆ ಮಾಹಿತಿ ನೀಡದೆ ಲೋಪವೆಸಗಿದ ಆರೋಪದ ಮೇಲೆ ಹೊಂಗಸಂದ್ರದ ಸೌಮ್ಯ  ಕ್ಲಿನಿಕ್‌ನ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ. ಬೊಮ್ಮನಹಳ್ಳಿ ಆರೋಗ್ಯಾಧಿಕಾರಿ ಡಾ.ಸುರೇಶ್‌ ಮಾತನಾಡಿ, ಮಂಗಳ ವಾರ ಸೋಂಕು ದೃಢಪಟ್ಟ ವ್ಯಕ್ತಿಯು ಇಲ್ಲಿನ ಸೌಮ್ಯ  ಕ್ಲಿನಿಕ್‌ನಲ್ಲಿ ಜ್ವರ ಎಂದು ಎರಡು ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೂ, ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡದೆ ಲೋಪವೆಸಗಿದ್ದಾರೆ. ಈ ಸಂಬಂಧ ಬುಧವಾರ ಶಿಸ್ತು ಕ್ರಮ  ಜರುಗಿಸಲಾಗುವುದು.

ಡಿಸಿಎಂ ಸಂವಾದ ಹೊರ ರಾಜ್ಯದಿಂದ ಬಂದವರಿಗಷ್ಟೇ ಕ್ವಾರಂಟೈನ್‌: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮಂಗಳವಾರ ದುಬೈ ಕನ್ನಡಿಗರೊಂದಿಗೆ ವಿಡಿಯೋ ಸಂವಾದ ನಡೆಸಿ ಅಹವಾಲು ಆಲಿಸಿದರು. ಲಾಕ್‌ಡೌನ್‌  ಬಳಿಕ ಮೊದಲ ಬಾರಿಗೆ ಮಂಗಳವಾರ ಕನ್ನಡಿಗರು ರಾಜ್ಯಕ್ಕೆ ಆಗಮಿಸುತ್ತಿರುವ ಬಗ್ಗೆ ಸ್ವಾಗತಿಸಿದ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸತಿ ಶಾಲೆ, ವಸತಿ ನಿಲಯಗಳಲ್ಲಿ ಕ್ವಾರೆಂಟೈನ್‌ನಲ್ಲಿರುವವರಿಗೆ  ಉಚಿತ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಹೊರ ರಾಜ್ಯ, ಹೊರ ದೇಶಗಳಿಂದ ಆಗಮಿಸುವವರು ಬಯಸಿದರೆ ವಸತಿನಿಲಯಗಳಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next