Advertisement
ಪ್ರತಿ ವರ್ಷ ಪಠ್ಯಪುಸ್ತಕ ವಿತರಣೆ ಪ್ರಕ್ರಿಯೆ ಇದ್ದೇ ಇರುತ್ತದೆ ಎಂಬ ಅರಿವಿದ್ದರೂ ಪಠ್ಯಪುಸ್ತಕ ಖರೀದಿಯ ಇಂಡೆಂಟ್, ಮುದ್ರಣ, ವಿತರಣೆ ಹೀಗೆ ಎಲ್ಲ ಹಂತದಲ್ಲಿಯೂ ಸಾಕಷ್ಟು ಗೋಜಲುಗಳು ನಡೆದು ಶಾಲಾ ಕಾಲೇಜುಗಳು ಪ್ರಾರಂಭಗೊಂಡ ಒಂದೆರಡು ತಿಂಗಳ ಬಳಿಕ ಪಠ್ಯಗಳು ಮಕ್ಕಳ ಕೈಸೇರುತ್ತಿದ್ದವು. ಆದರೆ ಈ ಬಾರಿ ಪಠ್ಯಪುಸ್ತಕ ವಿತರಣೆ ಸಂಬಂಧಿ ಎಲ್ಲ ಪ್ರಕ್ರಿಯೆಗಳನ್ನು ಕಾಲಮಿತಿಯಲ್ಲಿ, ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ನಿರ್ವಹಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಈಗಾಗಲೇ ಶೇ.80ರಷ್ಟು ಪುಸ್ತಕಗಳನ್ನು ವಿತರಿಸಿದೆ.
Related Articles
ಇನ್ನೊಂದು ಮುಖ್ಯ ವಿಷಯವೆಂದರೆ, ಪುಸ್ತಕ ವಿತರಣೆ ರಾಜ್ಯದ ನಾಲ್ಕು ಕಂದಾಯ ವಲಯಗಳಲ್ಲಿಯೂ ತಾರತಮ್ಯವಿಲ್ಲದೇ ಏಕಪ್ರಕಾರವಾಗಿ ಸಾಗಿದೆ. ಬೆಂಗಳೂರು ವಲಯದಿಂದ 2 ಕೋಟಿ ಪುಸ್ತಕಕ್ಕೆ ಬೇಡಿಕೆ ಬಂದಿದ್ದು 1.56 ಕೋಟಿ ಪುಸ್ತಕ ಬಿಇಒ ಕಚೇರಿ ತಲುಪಿ ಶೇ.78.42ರ ಸಾಧನೆಯಾಗಿದೆ. ಬೆಳಗಾವಿ ವಲಯದಿಂದ 1.86 ಕೋಟಿ ಪುಸ್ತಕಕ್ಕೆ ಬೇಡಿಕೆ ಬಂದಿದ್ದು 1.54 ಕೋಟಿ ಪುಸ್ತಕ (ಶೇ. 82.67), ಕಲಬುರಗಿ ವಲಯದಿಂದ 1.48 ಕೋಟಿ ಪುಸ್ತಕಕ್ಕೆ ಬೇಡಿಕೆ ಇದ್ದು,1.18 ಕೋಟಿ ಪುಸ್ತಕ (ಶೇ. 79.40) ಮತ್ತು ಮೈಸೂರು ವಲಯದಿಂದ 1.03 ಕೋಟಿ ಪುಸ್ತಕಕ್ಕೆ ಬೇಡಿಕೆಯಿದ್ದು 81.64 ಲಕ್ಷ ಪುಸ್ತಕ (ಶೇ. 78.51) ಬಿಇಒಗಳ ಕಚೇರಿ ತಲುಪಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
Advertisement
ಬಹುತೇಕ ಎಲ್ಲ ಶಿಕ್ಷಣ ಜಿಲ್ಲೆಗಳಲ್ಲಿಯೂ ಶೇ.75ಕ್ಕೂ ಮೀರಿ ಸಾಧನೆಯಾಗಿದೆ. ರಾಮನಗರ ಶೇ. 73.77, ಉತ್ತರ ಕನ್ನಡ ಶೇ. 74.05 ಮತ್ತು ಕೊಪ್ಪಳ ಶೇ. 74.23 ಕನಿಷ್ಠ ಸಾಧನೆ ಮಾಡಿದ ಜಿಲ್ಲೆಗಳಾಗಿವೆ. ಗದಗದಲ್ಲಿ ಗರಿಷ್ಠ ಶೇ. 88.02, ಚಿಕ್ಕೋಡಿ ಶೇ.85 ಸಾಧನೆ ಮಾಡಿವೆ.
ಸರ್ಕಾರಿ ಶಾಲೆಗಳ ಉಚಿತ ಬೇಡಿಕೆಯ ಶೇ. 77.56ರಷ್ಟು ಮತ್ತು ಮಾರಾಟದ ಬೇಡಿಕೆಯ ಶೇ.84.86ರಷ್ಟು ಈಗಾಗಲೇ ಪೂರೈಕೆಯಾಗಿದೆ. ಆದರೆ ಪಿಯುಸಿಯ ಪಠ್ಯ ಪುಸ್ತಕ ವಿತರಣೆ ಇನ್ನಷ್ಟೇ ವೇಗ ಪಡೆಯಬೇಕಿದ್ದು, ಇನ್ನೆರಡು ವಾರದಲ್ಲಿ ಈ ವಿಭಾಗದ ಪುಸ್ತಕಗಳ ಪೂರೈಕೆ ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಆಯುಕ್ತ ಆರ್. ವಿಶಾಲ್, ಪ್ರತಿ ವರ್ಷವೂ ಪಠ್ಯಪುಸ್ತಕ ವಿತರಣೆ ಪ್ರಕ್ರಿಯೆ ಇದ್ದೇ ಇರುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗದಂತೆ ನೋಡಿಕೊಂಡು ಕಾಲಮಿತಿ ಹಾಕಿಕೊಂಡು ಕೆಲಸ ಮಾಡಿದೆವು. ಮುಂದಿನ ಶೈಕ್ಷಣಿಕ ವರ್ಷ ಆರಂಭಗೊಳ್ಳುವುದಕ್ಕಿಂತ ಮುಂಚಿತವಾಗಿ ಪುಸ್ತಕ ವಿತರಿಸಲೇಬೇಕು ಎಂದು ಪಣತೊಟ್ಟಿದ್ದೆವು. ನಮ್ಮ ಗುರಿ ಸಾಧಿಸಿದ್ದೇವೆ. ಈಗಾಗಲೇ ಶೇ.90ರಷ್ಟು ಪುಸ್ತಕ ನಮ್ಮ ಕೈಸೇರಿದೆ. ಶೇ.80ರಷ್ಟು ಪುಸ್ತಕ ವಿತರಣೆ ಆಗಿದೆ. ಉಳಿದಂತೆ ಇನ್ನುಳಿದಿರುವ ಮೂರ್ನಾಲ್ಕು ದಿನದಲ್ಲೇ ಶೇ.100ರಷ್ಟು ಪುಸ್ತಕ ವಿತರಣೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದಿದ್ದಾರೆ.
ಇದೇ ವೇಳೆ, ಮಕ್ಕಳಿಗೆ ಒಂದು ಜೊತೆ ಸಮವಸ್ತ್ರವನ್ನು ಈ ತಿಂಗಳಾಂತ್ಯದೊಳಗೆ ಪೂರೈಸಬೇಕು ಎಂದು ಶಿಕ್ಷಣ ಇಲಾಖೆ ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.