Advertisement

ಕಾಶ್ಮೀರದಲ್ಲಿ ಎ+++ ಉಗ್ರರ ಹತ್ಯೆ:ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು

10:34 AM Aug 30, 2018 | Team Udayavani |

ಶ್ರೀನಗರ/ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಬುಧವಾರ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ ಮುಜಾಹಿದೀನ್‌ನ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿವೆ. ಈ ಇಬ್ಬರೂ ಎ+++(ಕಟ್ಟಾ ಉಗ್ರ ರು) ಭಯೋತ್ಪಾದಕರ ಪಟ್ಟಿಯಲ್ಲಿದ್ದವರಾಗಿದ್ದು, ಇವರ ಹತ್ಯೆಯು ಭದ್ರತಾಪಡೆಗಳಿಗೆ ಸಿಕ್ಕ ಪ್ರಮುಖ ಯಶಸ್ಸು ಎಂದು ಬಣ್ಣಿಸಲಾಗಿದೆ.

Advertisement

ಮೃತ ಉಗ್ರರ ಪೈಕಿ ಅಲ್ತಾಫ್ ದರ್‌ ಅಲಿಯಾಸ್‌ ಕಚ್ರೂ ಹಿಜ್ಬುಲ್‌ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್‌ ಆಗಿದ್ದು, ರಾಜ್ಯದಲ್ಲಿ ಪೊಲೀಸರು, ನಾಗರಿಕರ ಮೇಲಿನ ಹಲವು ದಾಳಿಗಳಲ್ಲಿ ಪಾಲ್ಗೊಂಡಿದ್ದ. 2007ರಿಂದಲೂ ನಡೆದಿರುವ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಈತನ ಹೆಸರಿತ್ತು. ಈ ಪ್ರದೇಶದಲ್ಲಿ ದೀರ್ಘ‌ಕಾಲ ಉಳಿದ ಭಯೋತ್ಪಾದಕ ಎಂದು ದರ್‌ನನ್ನು ಪರಿಗಣಿಸಲಾಗಿತ್ತು. ಈತನೊಂದಿಗೆ ಹತನಾದ ಮತ್ತೂಬ್ಬ ಉಗ್ರನೆಂದರೆ ಒಮರ್‌ ರಶೀದ್‌ ವಾನಿ. ಕಳೆದ ವರ್ಷದಿಂದೀಚೆಗೆ ಸಕ್ರಿಯನಾಗಿದ್ದ ಈತನೂ ಹಲವು ದಾಳಿಗಳಲ್ಲಿ ಪಾಲ್ಗೊಂಡಿದ್ದ. ಇಬ್ಬರೂ ಕುಲ್ಗಾಂ ನಿವಾಸಿಗಳಾಗಿದ್ದು, ಇವರ ಕೈಯ್ಯಲ್ಲಿದ್ದ ಎಕೆ47 ಮತ್ತು ಇನ್ಸಾಸ್‌ ರೈಫ‌ಲ್‌ಗ‌ಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ನಡೆದಿದ್ದು ಹೇಗೆ?
 ಶ್ರೀನಗರ ದಿಂದ 60ಕಿ.ಮೀ. ದೂರದ ಮುನಿವಾರ್ಡ್‌ ಗ್ರಾಮದಲ್ಲಿ ಉಗ್ರರು ಅಡಗಿರುವ ಖಚಿತ ಸುಳಿವಿನ ಮೇರೆಗೆ ಅಲ್ಲಿ ಶೋಧ ಕಾರ್ಯ ನಡೆಸಲಾಯಿತು. ಅಷ್ಟರಲ್ಲಿ ಉಗ್ರರು ಭದ್ರತಾ ಪಡೆಗಳತ್ತ ಗುಂಡಿನ ಸುರಿಮಳೆಗೈದರು. ಭದ್ರತಾ ಪಡೆಯೂ ಪ್ರತಿದಾಳಿ ನಡೆಸಿ, ಇಬ್ಬರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರ ದಾಳಿ: ನಾಲ್ವರು ಪೊಲೀಸರು ಹುತಾತ್ಮ
ಅನಂತ್‌ನಾಗ್‌ ಜಿಲ್ಲೆಯಲ್ಲಿ ಇಬ್ಬರು ಹಿಜ್ಬುಲ್‌ ಉಗ್ರರನ್ನು ಸದೆಬಡಿದ ಬೆನ್ನಲ್ಲೇ ಶೋಪಿಯಾನ್‌ ಜಿಲ್ಲೆಯಲ್ಲಿ ಪೊಲೀಸರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ. ಅಧಿಕಾರಿಯೊಬ್ಬರ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದ ಪೊಲೀಸರು, ಬುಧವಾರ ಮಧ್ಯಾಹ್ನ ತಮ್ಮ ಜೀಪ್‌ ರಿಪೇರಿ ಮಾಡಿಸಿಕೊಳ್ಳಲೆಂದು ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ, ನಾಲ್ವರು ಪೊಲೀಸರು ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುತಾತ್ಮರನ್ನು ಕಾನ್‌ಸ್ಟೆಬಲ್‌ ಇಶ್ಫಾಕ್‌ ಅಹ್ಮದ್‌ ಮಿರ್‌, ಜಾವೇದ್‌ ಅಹ್ಮದ್‌ ಭಟ್‌, ಮೊಹಮ್ಮದ್‌ ಇಕ್ಬಾಲ್‌ ಮಿರ್‌, ಎಸ್‌ಪಿಒ ಆದಿಲ್‌ ಮಂಜೂರ್‌ ಭಟ್‌ ಎಂದು ಗುರುತಿಸಲಾಗಿದೆ.

ಜೈಲಧಿಕಾರಿ ಪೊಲೀಸ್‌ ವಶಕ್ಕೆ
ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಎನ್‌ಐಎ ಬಂಧಿಸಿದ್ದ ಅಂಫ‌ಲ್ಲಾ ಜೈಲಿನ ಡೆಪ್ಯುಟಿ ಸೂಪರಿಂಟೆಂಡೆಂಟ್‌ ಫಿರೋಜ್‌ ಅಹ್ಮದ್‌ ಲೋನ್‌ ಅವರನ್ನು ಜಮ್ಮುವಿನ ವಿಶೇಷ ಕೋರ್ಟ್‌ 9 ದಿನಗಳ ಕಾಲ ಪೊಲೀಸ್‌ ವಶಕ್ಕೊಪ್ಪಿಸಿದೆ. ಭಾರತದ ವಿರುದ್ಧ ಯುದ್ಧ ಸಾರುವ ಸಲುವಾಗಿ ಶಸ್ತ್ರಾಸ್ತ್ರ ತರಬೇತಿ ಪಡೆಯಲು ಕಾಶ್ಮೀರಿ ಯುವಕರನ್ನು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಕಳುಹಿಸಿಕೊಟ್ಟ ಆರೋಪ ಲೋನ್‌ ಮೇಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next