ಬೆಂಗಳೂರು: ವಿವಾಹ ಆಗುವುದಾಗಿ ನಂಬಿಸಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ವಂಚಿಸಿ ಕೋರ್ಟ್‌ಗೂ ಹಾಜರಾಗದೇ ಅಬುದಾಬಿಯಲ್ಲಿ ತಲೆಮರೆಸಿಕೊಂಡಿದ್ದ ಸಾಫ್ಟ್ ವೇರ್ ಎಂಜಿನಿಯರ್‌ನನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಣ್ಣೂರು ಮೂಲದ ಮಿಧುನ್ ಚಂದ್ರನ್ (32) ಬಂಧಿತ.
ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಸಹ ಜಾರಿಗೊಳಿಸಲಾಗಿತ್ತು. ಮಿಧುನ್ ಚಂದ್ರನ್ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ ವೈಟ್ ಫೀಲ್ಡ್‌ನಲ್ಲಿರುವ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. 2016ರಲ್ಲಿ ಅದೇ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 30 ವರ್ಷದ ಮಹಿಳೆಯನ್ನು ವಿವಾಹವಾಗುವುದಾಗಿ ನಂಬಿಸಿದ್ದ. ಬಿಟಿಎಂ ಲೇಔ ಟ್‌ನಲ್ಲಿದ್ದ ಮನೆಗೆ ಮಹಿಳೆಯನ್ನು ಕರೆ ದೊಯ್ದು ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದ.
ಷರತ್ತು ಬದ್ದ ಜಾಮೀನು ಪಡೆದಿದ್ದ: ಆರೋಪಿಯ ತಾಯಿಯೂ ಮಗನ ಜೊತೆ ಮದುವೆ ಮಾಡಿ ಸುವುದಾಗಿ ದೂರುದಾರ ಮಹಿಳೆಗೆ ಆಶ್ವಾಸನೆ ಕೊಟ್ಟು ಆತನಿಗೆ ಹಣದ ಸಹಾಯ ನೀಡುವಂತೆ ಕೋರಿದ್ದರು. ಬಳಿಕ ವರಸೆ ಬದಲಿಸಿದ ಮಿಧುನ್ ಚಂದ್ರನ್ ಮಹಿಳೆಯನ್ನು ವಿವಾಹವಾಗಲು ಒಪ್ಪದೇ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ, ದೈಹಿಕ ಹಿಂಸೆ ನೀಡಿ ಪ್ರಾಣ ಬೆದರಿಕೆ ಹಾಕಿದ್ದ. 2020 ಫೆಬ್ರುವರಿಯಲ್ಲಿ ಈ ಬಗ್ಗೆ ಮಹದೇವಪುರ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಳು. ಇದರ ಬೆನ್ನಲ್ಲೇ ಆರೋಪಿ ಮಿಧುನ್ ಚಂದ್ರನ್ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು ಪಡೆದಿದ್ದ. ನಂತರ ಅಬುದಾಬಿಗೆ ತೆರಳಿ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ.
ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ ?: ಇತ್ತ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಆಗ ನ್ಯಾಯಾಲಯವು ಆತನಿಗೆ ಸಮನ್ಸ್ ಜಾರಿ ಮಾಡಿತ್ತು. ಇದಕ್ಕೂ ಆರೋಪಿ ಪ್ರತಿಕ್ರಿಯಿಸದಿದ್ದಾಗ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿತ್ತು. ಇಷ್ಟಾದರೂ ನ್ಯಾಯಾಲಯದತ್ತ ಮುಖ ಮಾಡದಿದ್ದಾಗ ಆರೋಪಿಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಆತ ವಿದೇಶಕ್ಕೆ ತೆರಳಿರುವುದನ್ನು ಅರಿತ ಮಹದೇವಪುರ ಪೊಲೀಸರು ಸಿಬಿಐ ಮೂಲಕ ಇಂಟರ್‌ಪೋಲ್‌ಗೆ ಮಾಹಿತಿ ನೀಡಿದ್ದರು. 20 ದಿನಗಳ ಹಿಂದೆ ಆರೋಪಿಯು ಯಾವುದೋ ದಾಖಲೆಗಾಗಿ ಅಬುದಾಬಿಯ ರಾಯಭಾರ ಕಚೇರಿಗೆ ಹೋಗಿದ್ದ. ಆ ವೇಳೆ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಇರುವುದು ಪತ್ತೆಯಾಗಿತ್ತು. ಕೂಡಲೇ ಇಂಟರ್‌ಪೋಲ್ ಅಧಿಕಾರಿಗಳು ಮಿಧುನ್ ಚಂದ್ರನ್‌ನನ್ನು ವಶಕ್ಕೆ ಪಡೆದು ಮಹದೇವಪುರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಬುದಾಬಿಯಿಂದ ಕರೆ ತಂದ ಪೊಲೀಸರು: ಮಹದೇವಪುರ್ ಇನ್‌ಸ್ಪೆಕ್ಟರ್ ಸೇರಿ ಮೂವರು ಪೊಲೀಸ್ ಅಧಿಕಾರಿಗಳು ದುಬೈ ಪೊಲೀಸರ ಜೊತೆಗೆ ಸಂಪರ್ಕ ಸಾಧಿಸಿ ಅಬುದಾಬಿಗೆ ತೆರಳಿದ್ದರು. ನಂತರ ಅಬುದಾಬಿಯಲ್ಲಿ ಕೆಲವೊಂದು ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಶುಕ್ರವಾರ ವಿಮಾನದಲ್ಲಿ ಮಿಧುನ್ ಚಂದ್ರನ್‌ನನ್ನು ಬೆಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಮಿದುನ್ ಚಂದ್ರನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಏನಿದು ರೆಡ್ ಕಾರ್ನರ್ ನೋಟಿಸ್ ?: ರೆಡ್‌ಕಾರ್ನರ್ ನೋಟಿಸ್ ಹೊರಡಿಸಿದರೆ ಎಲ್ಲ ವಿಮಾನ ನಿಲ್ದಾಣಗಳಿಗೂ ಆರೋಪಿಯ ಬಗ್ಗೆ ಮಾಹಿತಿ ಹೋಗುತ್ತದೆ. ಆ್ಯಂಬಸಿಗಳಿಗೂ ಮಾಹಿತಿ ನೀಡಲಾಗುತ್ತದೆ. ಪಾಸ್‌ಪೋರ್ಟ್ ನವೀಕರಿಸಲು, ವೀಸಾ ಪಡೆಯಲು, ವಿದೇಶಕ್ಕೆ ಪ್ರಯಾಣಿಸಲು ಆರೋಪಿಗಳು ಮುಂದಾದರೆ ರಾಯಭಾರ ಕಚೇರಿ, ವಿಮಾನ ನಿಲ್ದಾಣದ ಕಂಪ್ಯೂಟರ್ ದಾಖಲೆಗಳಲ್ಲಿ ಇವರ ಮಾಹಿತಿ ಬರುತ್ತದೆ. ನಂತರ ಇಂಟರ್‌ಪೋಲ್ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈ ಗೊಳ್ಳಲಾಗುತ್ತದೆ.