ಕಾರಟಗಿ: ಸಮುದಾಯ ಆರೋಗ್ಯ ಕೇಂದ್ರಗಳ ಕಡೆ ಸರ್ಕಾರ ಹೆಚ್ಚಿನ ಗಮನಹರಿಸಬೇಕಾಗಿದೆ. ಆರೋಗ್ಯ ಕೇಂದ್ರಕ್ಕೆ ಸರ್ಕಾರದ ನಿಯಮಾವಳಿ ಪ್ರಕಾರ ವೈದ್ಯರು ಹಾಗೂ ಸಿಬ್ಬಂದಿಗಳ ಸೇವೆ ಇಲ್ಲವಾಗಿದೆ ಎಂದು ಉಪ ನಿರ್ದೇಶಕ ಡಾ| ವಿಜಯಕುಮಾರ ಬೆಂಗಳೂರ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ಯೋಜನೆಯಡಿ ಮಂಗಳವಾರ ಬೆಂಗಳೂರಿನ ಆರೋಗ್ಯ ಇಲಾಖೆ ಹಿರಿಯ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಕಾಯಕಲ್ಪ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಪ್ರತಿ ಕಾರ್ಯಗಳ ಮತ್ತು ಅಲ್ಲಿನ ವಸ್ತು ಸ್ಥಿತಿ ಪರಿಶೀಲಿಸಿ ಅವುಗಳಿಗನುಗುಣವಾಗಿ ಅಂಕ ನೀಡುವುದು ನಮ್ಮ ತಂಡದ ಕಾರ್ಯ. ಇಂತಹ ಕಾರ್ಯ ರಾಜ್ಯದ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲೂ ನಡೆಯುತ್ತಿದೆ. ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪರಿಶೀಲನೆ ನಂತರ ಇಲ್ಲಿನ ವ್ಯವಸ್ಥೆಗನುಗುಣವಾಗಿ ಹೆಚ್ಚಿನ ಅಂಕ ಪಡೆದಿದೆ ಎಂದೆನಿಸುತ್ತಿದೆ. ಫಾಸ್ಟ್ ಚೆಕ್ಕಿಂಗ್ ತಂಡದಿಂದ ಹೆಚ್ಚು ಅಂಕ ಪಡೆದಲ್ಲಿ ಕಾರಟಗಿ ಸಮುದಾಯ ಆರೋಗ್ಯ ಕೇಂದ್ರ ರಾಜ್ಯಮಟ್ಟದ ಅವಾರ್ಡ್ ಪಡೆಯುವ ಅರ್ಹತೆ ಹೊಂದಲಿದೆ ಎಂದರು.
ಇದಕ್ಕೂ ಮೊದಲು ವೈದ್ಯರ ತಂಡದ ಡಾ| ಗಿರಿಯಣ್ಣಗೌಡ, ಡಾ| ವಿಜಯಕುಮಾರ ಆಸ್ಪತ್ರೆಯ ಎಕ್ಸರೇ, ಶಸ್ತ್ರ ಚಿಕಿತ್ಸಾ ಕೊಠಡಿ, ರಕ್ತ ಪರೀಕ್ಷಾ ಕೇಂದ್ರ, ಹೊರ-ಒಳ ರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ಕೊಠಡಿ, ಔಷ ಧಿ ಶೇಖರಣಾ ಕೊಠಡಿ, ತ್ಯಾಜ್ಯ ಸಂಗ್ರಹಣಾ ಕೊಠಡಿ, ಆರೋಗ್ಯ ಕೇಂದ್ರದ ಸುತ್ತಲಿನ ಒಳಾಂಗಣ-ಹೊರಾಂಗಣ, ಆಸ್ಪತ್ರೆ ಪರಿಸರ, ಲೆಕ್ಕ ಪತ್ರದ ಕೊಠಡಿ ಸೇರಿದಂತೆ ಶವಾಗಾರ ವೀಕ್ಷಿಸಿ ವಸ್ತು ಸ್ಥಿತಿ ಪರಿಶೀಲಿಸಿ ರೋಗಿಗಳೊಂದಿಗೆ ಚರ್ಚಿಸಿದರು.
ನಂತರ ಅಂಬ್ಯುಲೆನ್ಸ್ ವಾಹನಗಳ ನಿರ್ವಹಣೆ ಮಾಡುವ ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಿದರು. ಶೌಚಾಲಯಗಳ ವೀಕ್ಷಣೆ ಮಾಡಿದರು. ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಸಭೆ ನಡೆಸಿ, ಅವರು ನಿರ್ವಹಿಸುವ ಕಾರ್ಯಗಳ ಮಾಹಿತಿ ಪಡೆದರು. ನಂತರ ಅವರು ಕಾರ್ಯದಲ್ಲಿ ಬಳಸುವ ಸಾಮಗ್ರಿಗಳ ಮಾಹಿತಿ ನೀಡಿ, ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ತಿಳಿ ಹೇಳಿದರು. ನಂತರ ಶುಶ್ರೂಷಕರೊಂದಿಗೆ ಚರ್ಚಿಸಿ ಆರೋಗ್ಯ ಕೇಂದ್ರದಲ್ಲಿ ಆಗಮಿಸುವ ರೋಗಿ ಕುರಿತು ಪ್ರತಿ ಕ್ಷಣದ ಮಾಹಿತಿ ವೈದ್ಯರಿಗೆ ತಲುಪಿಸಬೇಕು. ರೋಗಿಗಳ ಆರೋಗ್ಯಕರ ಬೆಳವಣಿಗೆಗೆ ಸಹಾಯಕವಾಗುವ ರೀತಿಯಲ್ಲಿ ವರ್ತಿಸಬೇಕು ಎಂದರು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಶಕುಂತಲಾ ಪಾಟೀಲ, ಡಾ| ಪ್ರಿಯಾಂಕಾ, ಡಾ| ಪರಿಮಳಾ, ಡಾ| ನಾಗರಾಜ ಸೇರಿದಂತೆ ಇತರರು ಇದ್ದರು.