ಕಟಪಾಡಿ: ಬೆಂಗಳೂರಿನಿಂದ ಆಗಮಿಸಿದ್ದ ಹೇಸರಘಟ್ಟದ ಐಐಹೆಚ್ಆರ್ ಕೃಷಿ ವಿಜ್ಞಾನಿ ಡಾ|ಡಿ. ಕಲೈವಣ್ಣನ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಲ್. ಹೇಮಂತ್ ಕುಮಾರ್, ಸಹಾಯಕ ತೋಟಗಾರಿಕಾ ಅಧಿಕಾರಿ ಅಮಿತ್ ಸಿಂಪಿ ಅವರು ಅಕಾಲಿಕ ಮಳೆಯಿಂದ ತತ್ತರಿಸಿದ್ದ ಪ್ರಾಪಂಚಿಕವಾಗಿ ಗುರುತಿಸಲ್ಪಟ್ಟ ಶಂಕರಪುರ ಮಲ್ಲಿಗೆ ಬೆಳೆಗಾರರನ್ನು, ಮಲ್ಲಿಗೆ ಗಿಡಗಳನ್ನು ಭೇಟಿ ನೀಡಿ ಪರಿಶೀಲನೆ ನಡೆಸಿ ಬೆಳೆಗಾರರೊಂದಿಗೆ ಸಮಾಲೋಚನೆಯನ್ನು ನಡೆಸಿದರು
ಕೃಷಿ ವಿಜ್ಞಾನಿ ಡಾ|ಡಿ. ಕಲೈವಣ್ಣನ್ ಸಮಾಲೋಚಿಸಿ ಶಂಕರಪುರ ಮಲ್ಲಿಗೆ ಗಿಡಗಳ ಬೇರು, ಎಲೆ, ಗೆಲ್ಲುಗಳು, ಮೊಗ್ಗುಗಳು ಬಾತವಾಗಿದೆ. ಭೂಮಿಯನ್ನು ಸ್ಪರ್ಶಿಸುವ ಗೆಲ್ಲು, ಎಲೆಗಳನ್ನು ತುಂಡರಿಸಬೇಕಿದೆ. ಎರೆಹುಳ ಗೊಬ್ಬರ, ಹೊಸದಾದ ಸೆಗಣಿ ಗೊಬ್ಬರವನ್ನು ಬಳಸಬಹುದು. ಎಲೆ ಚುಕ್ಕೆ ರೋಗಕ್ಕೆ ಲೀಟರ್ ನೀರಿಗೆ ಎರಡು ಗ್ರಾಂ ಮ್ಯಾಕೊಂಜೆಬ್ ಬೆರೆಸಿ ಸಿಂಪಡಿಸಬೇಕು. ಪ್ರತೀ ಗಿಡಕ್ಕೆ ಅರ್ಧ ಕಿಲೋ ಎರೆಹುಳು ಗೊಬ್ಬರ ಬಳಸಬೇಕು. ಕಾರ್ಬನ್ಡಜೆಮ್ ಲೀಟರ್ ನೀರಿಗೆ ಎರಡು ಗ್ರಾಂ ಬೆರೆಸಿ ಬಳಸಬೇಕು. ಸೊರಗು ರೋಗಕ್ಕೆ ಹೇಕ್ಸಾಕೋನಜೋಲ್ ಅಥವಾ ಕಾಪರ್ ಆಪ್ರೆ ಕ್ಲೋರೈಡ್ ಸೂಕ್ತ ಪ್ರಮಾಣದಲ್ಲಿ ಮಳೆ ಇಲ್ಲದ ಸಂದರ್ಭದಲ್ಲಿ ಬಳಸಬೇಕಿದೆ ಎಂದು ಮಾಹಿತಿ ನೀಡಿದರು.
ಉಡುಪಿ ತೋಟಗಾರಿಕಾ ಇಲಾಖೆ ಯ ಹಿರಿಯ ಸಹಾಯಕ ನಿರ್ದೇಶಕ ಎಲ್. ಹೇಮಂತ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ ಉಡುಪಿ ಮಲ್ಲಿಗೆ ಬೆಳೆಗಾರರ ಒಂದು ಸಾವಿರ ಜನರ ಗುಂಪು ಇದೆ. ಮಹಿಳೆಯರದ್ದೇ ಒಂದು ಗುಂಪು ಇದೆ. ಅವರು ನಿಯಂತ್ರಣ ಕ್ರಮವನ್ನು ಅಳವಡಿಸಿಕೊಂಡಲ್ಲಿ ರೋಗಗಳ ನಿಯಂತ್ರಣ ಸಹಾಯವಾಗಲಿದೆ. ತಂಡಕ್ಕೆ ತರಬೇತಿಯನ್ನು ಕೊಡಲೂ ಸಿದ್ಧರಿದ್ದು, ಉಡುಪಿ ಮಲ್ಲಿಗೆ ಬೆಳೆಯ ಉತ್ಪಾದನೆ, ಪ್ರದೇಶ ವಿಸ್ತರಣೆಗೆ ಉದ್ಯೋಗ ಖಾತರಿ ಯೋಜನೆಯಡಿಯೂ ಆಸಕ್ತರಿಗೆ ಪ್ರೋತ್ಸಾಹಿಸುತ್ತಿರುವುದಾಗಿ ತಿಳಿಸಿದರು.