Advertisement

ಉತ್ತಮ ಸಂಸ್ಕಾರ ನೀಡುವ ಶಿಕ್ಷಕ ಅರಿವಿನ ಸಂಕೇತ

05:44 PM Sep 09, 2017 | Team Udayavani |

ಶಹಾಪುರ: ವಿದ್ಯಾರ್ಥಿಗಳ ಆಲೋಚನಾಕ್ರಮ, ಸಾರ್ವಜನಿಕ ನಡವಳಿಕೆ, ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸುವ, ಜ್ಞಾನವನ್ನು ನೀಡುವುದರ ಮೂಲಕ ಉತ್ತಮ ಬದುಕನ್ನು ರೂಪಿಸುವ ಶಿಕ್ಷಕ ಅರಿವಿನ ಸಂಕೇತವಾಗಿದ್ದಾರೆ ಎಂದು ಸಾಯಿ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೇಖು ಚವ್ಹಾಣ ಹೇಳಿದರು.

Advertisement

ನಗರದ ಬಾಪುಗೌಡ ದರ್ಶನಾಪೂರ ಸ್ಮಾರಕ ಮಹಿಳಾ ಪದವಿ ಕಾಲೇಜಿನಲ್ಲಿ ಶಿಕ್ಷಕರ ದಿನ ನಿಮಿತ್ತ ಹಮ್ಮಿಕೊಂಡ ಗುರು ವಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ, ಶಿಕ್ಷಕ ವಿದ್ಯಾರ್ಥಿಗಳ ನಡುವಿನ ಅವಿನಾಭಾವ ಸಂಬಂಧ ದೇಶದ ಉನ್ನತಿಗೆ, ವಿದ್ಯಾರ್ಥಿಗಳ ಭವಿಷ್ಯದ ನಿರ್ಮಾಣಕ್ಕೆ ನಾಂದಿ ಆಗುತ್ತದೆ. ಆದ್ದರಿಂದ ಶಿಕ್ಷಕ, ಶಿಕ್ಷಣ, ವಿದ್ಯಾರ್ಥಿ ಈ ಮೂರು ಕೋನಗಳ ಸಮತೋಲನ ಸುಧಾರಣೆ ಅಗತ್ಯವಾಗಿದೆ ಎಂದರು.

ಗುರು ವಂದನಾ ನುಡಿಗಳನ್ನಾಡಿದ ವಿದ್ಯಾರ್ಥಿನಿ ಪ್ರತಿಭಾ ಮದ್ರಿಕಿ, ಒಂದು ದೇಶದ ಹಣೆ ಬರಹವನ್ನು ಬರೆಯುವುದರಲ್ಲಿ ಶಿಕ್ಷಕ ಮಹತ್ವದ ಪಾತ್ರ ವಹಿಸುತ್ತಾರೆ. ಸಮಾಜದ ಎಲ್ಲಾ ವ್ಯವಸ್ಥೆಗಳು ಶಿಕ್ಷಣದ ಬುನಾದಿಯನ್ನೇ ಆಧರಿಸಿವೆ. ಅಂತಹ ಮಹತ್ವದ ಶಿಕ್ಷಣ ನೀಡುವುವರು ಶಿಕ್ಷಕರೇ ಆಗಿರುವುದರಿಂದ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದರು. 

ಇದೇ ಸಂದರ್ಭದಲ್ಲಿ ಚರಬಸವೇಶ್ವರ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ನಾನಾಗೌಡ ಬಿರಾದಾರ ಅವರಿಗೆ ಸನ್ಮಾನಿಸಲಾಯಿತು. ಪ್ರಾಚಾರ್ಯ ಶಿವಲಿಂಗಣ್ಣ ಸಾಹು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕ ಸೈಯದ್‌ ಚಾಂದಪಾಶ, ಸಿ.ಬಿ. ಪ್ರೌಢಶಾಲೆಯ ಮುಖ್ಯಗುರು ಮತ್ತು ಕಾಲೇಜಿನ ಎಲ್ಲಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next