ಬೆಂಗಳೂರು: ಕೋವಿಡ್ -19 ತಡೆಗಟ್ಟುವ ಕಾರ್ಯದಲ್ಲಿ ಸರಕಾರದ ಆದೇಶದಂತೆ ಶಿಕ್ಷಕರು, ಪ್ರಾಧ್ಯಾಪಕರು ಸೇವೆ ಸಲ್ಲಿಸುತ್ತಿದ್ದಾರೆ. ಈಗ ಶಾಲಾ, ಕಾಲೇಜುಗಳಲ್ಲಿ ಆಡಳಿತಾತ್ಮಕ ಕಾರ್ಯ ಆರಂಭವಾಗಿದೆ. ಶಾಲಾ ಕಾಲೇಜಿಗೆ ನಿತ್ಯ ಹೋಗಬೇಕಾ ಅಥವಾ ಕೋವಿಡ್ -19 ಜಾಗೃತಿ ಕಾರ್ಯದಲ್ಲಿಯೇ ಮುಂದುವರಿಯಬೇಕೆ ಎಂಬ ಬಗ್ಗೆ ಶಿಕ್ಷಕ, ಪ್ರಾಧ್ಯಾಪಕರಲ್ಲಿ ಗೊಂದಲ ಉಂಟಾಗಿದೆ.
ಬೆಂಗಳೂರು ಸಹಿತವಾಗಿ ಕೆಲವು ನಗರಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸಂಪರ್ಕ ತಂಡ, ಗ್ರಾಮೀಣ ಭಾಗದಲ್ಲಿ ಕೋವಿಡ್ -19 ಜಾಗೃತಿ ಅಭಿಯಾನ, ಕೋವಿಡ್ -19 ಶಂಕಿತರಿಗೆ ಮತ್ತು ಕ್ವಾರಂಟೈನ್‌ನಲ್ಲಿ ಇರಬೇಕಾದವರಿಗೆ ಸೀಲ್ ಹಾಕುವುದು, ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆ ಸಹಿತ ಹಲವು ರೀತಿಯ ಕೋವಿಡ್ -19 ಜಾಗೃತಿ ಕಾರ್ಯಕ್ರಮಗಳಲ್ಲಿ ಶಿಕ್ಷಕರು, ಉಪನ್ಯಾಸಕರು ಮತ್ತು ಪ್ರಾಧ್ಯಾಪಕರು ಸೇವೆ ಸಲ್ಲಿಸುತ್ತಿದ್ದಾರೆ.
ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣ ಸಂಸ್ಥೆಗಳು, ವಿವಿಗಳು ಆಡಳಿತಾತ್ಮಕ ಸೇವೆ ಆರಂಭಿಸಿವೆ. ಕೆಲವೊಂದು ಜಿಲ್ಲೆಗಳಲ್ಲಿ ಶೇ.30ರಷ್ಟು ಸಿಬಂದಿಯೊಂದಿಗೆ ಕಾರ್ಯ ಚುರುಕುಗೊಂಡಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಶೇ.100 ಸಿಬಂದಿ ಸಹಿತವಾಗಿ ಕಾರ್ಯಾರಂಭಗೊಂಡಿದೆ. ಬೋಧಕರು ಆನ್‌ಲೈನ್ ತರಗತಿ ನಡೆಸುವ ಜತೆಗೆ ಪಠ್ಯ ಬೋಧನೆಯ ವೀಡಿಯೋ ಮಾಡಿ ಅಪ್‌ಲೋಡ್ ಮಾಡುತ್ತಿದ್ದಾರೆ. ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕರು, ಪ್ರಾಧ್ಯಾಪಕರು ಏನೇನು ಕೆಲಸ ಮಾಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯೇ ಸೂಚನೆ ನೀಡಿದೆ. ಹಾಗೆಯೇ ಖಾಸಗಿ ಶಿಕ್ಷಣ ಸಂಸ್ಥೆಗಳ ಕಾರ್ಯಾರಂಭಕ್ಕೂ ಸೂಚನೆ ನೀಡಲಾಗಿದೆ. ಈ ಎಲ್ಲದರ ಮಧ್ಯೆ ಶಿಕ್ಷಕರು, ಉಪನ್ಯಾಸಕರು ಮತ್ತು ಪ್ರಾಧ್ಯಾಪಕರು ಕೋವಿಡ್ -19ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೇ ಅಥವಾ ಶಾಲಾ ಕಾಲೇಜಿಗೆ ಹೋಗಿ ಆಡಳಿತಾತ್ಮಕ ಕಾರ್ಯ ನಡೆಸಬೇಕೇ ಎಂದು ಬೋಧಕ, ಬೋಧಕೇತರ ಶಿಕ್ಷಕರು ಪ್ರಶ್ನಿಸಿದ್ದಾರೆ.
ಹತ್ತು ಸಾವಿರ ಶಿಕ್ಷಕರಿಗೆ ವೇತನ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 10 ಸಾವಿರ ಶಿಕ್ಷಕರಿಗೆ ಮಾರ್ಚ್ – ಎಪ್ರಿಲ್ ತಿಂಗಳ ವೇತನ ನೀಡಿಲ್ಲ ಎಂಬ ದೂರುಗಳು ಬಂದಿವೆ. ಜಿಲ್ಲಾ ಉಪನಿರ್ದೇಶಕರು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಂಡು ವೇತನ ಪಾವತಿಯಾಗುವಂತೆ ನೋಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಉಪನಿರ್ದೇಶಕರಿಗೆ ಸೂಚಿಸಿದ್ದಾರೆ.