ಪುತ್ತೂರು: ಗೋವಾದಲ್ಲಿ ಅಡ್ಡಬೋರು ಕೊರೆಸಿದ್ದು, ಕೃಷಿಗೆ ಬಳಸುವಷ್ಟು ಜಲ ಸಿಕ್ಕಿದೆ. ಸುಮಾರು 300 ಅಡ್ಡ ಬೋರುಗಳನ್ನು ಬಾವಿಯ ಒಳಗೆ ಕೊರೆಯಲಾಗಿದೆ. ರಾಜಸ್ಥಾನದಲ್ಲಿ ಈ ತಂತ್ರಜ್ಞಾನವು ಮೂರು ದಶಕಗಳಿಂದ ಬಳಕೆಯಾಗುತ್ತಿದೆ. ಹೆಚ್ಚು ಮಳೆ ಬೀಳುವ ಮಲೆನಾಡಿನ ಪ್ರದೇಶಕ್ಕೂ ಈ ತಂತ್ರಜ್ಞಾನದ ಬಳಕೆಯ ಸಾಧ್ಯತೆಯಿದೆ ಎಂದು ರಾಜಸ್ಥಾನದ ಅಡ್ಡ ಬೋರು ತಂತ್ರಜ್ಞ ಗೋವಿಂದ ರಾಮ್ ಭಾಯಿ ಹೇಳಿದರು.
ಅಡಿಕೆ ಪತ್ರಿಕೆಯ ಆಯೋಜನೆಯಲ್ಲಿ ಪುತ್ತೂರು ದರ್ಬೆಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರಿ ಸಂಘದ ಸಭಾ ಭವನ ದಲ್ಲಿ ನಡೆದ ‘ಅಡ್ಡ ಬೋರು ಅರಿಯ ಬನ್ನಿ’ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ರಾಜಸ್ಥಾನದಲ್ಲಿ 300 ಅಡಿ ತನಕವೂ ಯಾಂತ್ರಿಕವಾಗಿ ಅಡ್ಡಬೋರು ಕೊರೆತ ಯಶಸ್ವಿಯಾಗಿದೆ. ಕೊರೆಯುವಾಗ ಕೆಂಪು ಕಲ್ಲು ಸಿಕ್ಕಿದರೆ ತೊಂದರೆಯಿಲ್ಲ. ಆದರೆ ಶಿಲೆಕಲ್ಲು ಇದ್ದಲ್ಲಿ ಕೊರೆಯಲು ತ್ರಾಸ. ಲಂಬವಾಗಿ ಕೊರೆಯುವ ಕೊಳವೆ ಬಾವಿಗಿಂತ ಇದು ಸುಸ್ಥಿರ ವಿಧಾನ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಶಕದ ಹಿಂದೆಯೇ ಕೈ ಚಾಲಿತ ಅಡ್ಡಬೋರು ತಂತ್ರಜ್ಞಾನವನ್ನು ಪರಿಚಯಿಸಿದ ವಿಟ್ಲದ ಮಹಮ್ಮದ್ ಉಪಸ್ಥಿತರಿದ್ದು, ಅಡ್ಡ ಬೋರಿನ ಯಶಸ್ಸನ್ನು ಪ್ರಸ್ತುತ ಪಡಿಸಿದರು. ಇಬ್ಬರು ತಂತ್ರಜ್ಞರನ್ನು ರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್ ವಹಿಸಿದ್ದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಫಾರ್ಮರ್ ಫಸ್ಟ್ ಟ್ರಸ್ಟ್, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಗಿಡ ಗೆಳೆತನ ಸಂಘ ಸಮೃದ್ಧಿ, ಅರೆಕಾನಟ್ ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್ ಬಳಗ ಮತ್ತು ಅಡಿಕೆ ಪತ್ರಿಕೆ ವಾಟ್ಸ್‌ಆ್ಯಪ್ ಬಳಗದ ಸಹಯೋಗದೊಂದಿಗೆ ಸಂವಾದ ಕಲಾಪ ನಡೆಯಿತು.
ಎಂ.ಜಿ. ಸತ್ಯನಾರಾಯಣ, ಡಾ| ಶ್ರೀಧರ ಭಟ್, ಬಿ.ಟಿ. ನಾರಾಯಣ ಭಟ್, ರಾಮ ಚಂದ್ರ ನೆಕ್ಕಿಲ, ರಾಮ್‌ಪ್ರತೀಕ್ ಕರಿಯಾಲ, ಡಾ| ಕೇಶವ ಭಟ್, ಮಣಿಲ ಶ್ರೀರಂಗ ಶಾಸ್ತ್ರಿ ಮೊದಲಾದ ಕೃಷಿಕರು ಉಪಸ್ಥಿತರಿದ್ದರು. ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ ಅವರು ಸಂವಾದಕ್ಕೆ ಚಾಲನೆ ನೀಡಿದರು. ಗಿಡ ಗೆಳೆತನ ಸಂಘ ಸಮೃದ್ಧಿಯ ಅಧ್ಯಕ್ಷ ಭಾಸ್ಕರ ಬಾಳಿಲ ಅವರು ವಂದಿಸಿದರು.