Advertisement

ಉಸಿರಾಡುವ ಮೂಢನಂಬಿಕೆ…

05:10 PM Mar 03, 2021 | Team Udayavani |

ಕೆಲವು ದಿನಗಳ ಹಿಂದೆ ಊರಿನ ಶ್ರೀಮಂತರ ಮನೆಗಳಿಗೆ ಭೇಟಿ ನೀಡಿ ಅವರ ಹಣೆಬರಹ ಪಾಪ-ಪುಣ್ಯಗಳ ಲೆಕ್ಕಾಚಾರಗಳನ್ನು ವಿಮರ್ಶೆಗೊಳಪಡಿಸಿ, ವಿಜ್ಞಾನದ ಬೆಳಕಿಗೆ ಮಸಿ ಚೆಲ್ಲಿ ಬುರುಡೆ ಜ್ಯೋತಿಷ್ಯ ಹೇಳಲು ಬೆಂಗಳೂರಿನ ಯಾವುದೋ ಮೂಲೆಯಿಂದ ಒಬ್ಟಾತ ಬಂದಿದ್ದ.

Advertisement

ಇದರಿಂದ ಪ್ರಭಾವಕ್ಕೊಳಗಾಗಿ ಆತನ ಪೂರ್ವಾಪರ ವಿಚಾರಿಸದೆ ಬರೀ ಹೇಳಿಕೆ ಮಾತು ಕೇಳಿ ನನ್ನ ತಂದೆಯವರು ಯಾವುದೋ ನಂಬಿಕೆಯಲ್ಲಿ ಆತನನ್ನು ಮನೆಗೆ ಕರೆಯಿಸಿಬಿಟ್ಟರು. ಕರೆಸುವ ಮುನ್ನ ಭೇಟಿ ಮಾಡಿ ಮನೆಯವರ ಹೆಸರು, ಹುಟ್ಟಿದ ದಿನಾಂಕ, ಸಮಯ, ದಿನ, ವಾರ ಎಲ್ಲವನ್ನೂ ಬರೆದ ಚೀಟಿಯನ್ನು ಆತನ ಕೈಗಿಟ್ಟು ನಮ್ಮೆಲ್ಲರ ಭವಿಷ್ಯವನ್ನು ಬರುವಾಗ ತರಬೇಕೆಂದು ಹೇಳಿದ್ದರು.

ಕಂಪ್ಯೂಟರ್‌ ಜೆನರೇಟೆಡ್‌ ಹೋರೋಸ್ಕೋಪ್‌ನೊಂದಿಗೆ ಮನೆಗೆ ಬಂದವ ಯಾರ ಪರಿಚಯವನ್ನು ಮಾಡಿಕೊಳ್ಳದೆ ಸೋಫಾ ಎಳೆದುಕೊಂಡು ಕೂತು ಕಸುಬನ್ನು ಶುರು ಮಾಡಿಕೊಂಡ. ಸುಮಾರು 6 ಗಂಟೆ ನಮ್ಮೆಲ್ಲರ ಪೂರ್ವಾಪರಗಳ ಸಮಾಲೋಚನೆಗಳು ನಡೆದವು. ಇದರ ಒಟ್ಟಾರೆ ಸಾರಾಂಶ ಇಂತಿತ್ತು. ಕಮ್ಮಿಯೆಂದರೂ 13ರಿಂದ 15 ದೇವಸ್ಥಾನಗಳಿಗೆ ಏಳೇಳು ಬಾರಿ ಭೇಟಿ ನೀಡುವುದು. ಅವೆಲ್ಲವೂ ತಮಿಳುನಾಡಿನ ಹೆಸರಾಂತ ದೇವರಗುಡಿಗಳಾಗಿದ್ದು, ಹೊರಡುವ ಮುನ್ನ ಈತನಿಗೆ ಕರೆ ಮಾಡಬೇಕಾಗಿ, ದೇವರಿಗೆ ಅರ್ಪಿಸಲು ಕೊಂಡೊಯ್ಯುವ ಸಾಮಗ್ರಿಗಳ ಪಟ್ಟಿ ನೀಡುವುದಾಗಿಯೂ ಮತ್ತು ಹೋದನಂತರ ಪ್ರಧಾನ ಅರ್ಚಕರಿಗೆ ನಾವು ಇಂಥವರ ಕಡೆಯವರು ಎಂಬ ವರದಿ ಮಾಡಿ ಈತನಿಗೆ ಕರೆ ಮಾಡಿಕೊಡಬೇಕಾಗಿ ತಾಕೀತು ಮಾಡಿದ.

ಆತ ಹೇಳಿದ ಎಲ್ಲದರಲ್ಲೂ ಖರ್ಚಿನ ಬಾಬತ್ತು ಏರಿತೆ ಹೊರತು ಅದರಿಂದ ನಾಲ್ಕು ಜನ ಹಸಿದವರಿಗೆ ಉಪಯೋಗವಾಗುವ ಯಾವುದೇ ಅಂಶವಿರಲಿಲ್ಲ. ಭಗವದ್ಗೀತೆಯ ತಾತ್ಪರ್ಯ, ಇತರರಲ್ಲಿ ನನ್ನನ್ನು ಕಾಣು, ಸತ್ಯವನ್ನೇ ನುಡಿ. ಸಹಾಯ ಮಾಡು ಎಂಬುದು. ಈತನ ಮಾತುಗಳು ಕೇಳಿದ ಬಳಿಕ ಸತ್ಯವನ್ನು ಬಿಟ್ಟು ಬೇರೆಲ್ಲವನ್ನೂ ಹೇಳಿದಂತಿತ್ತು. ನಮ್ಮನ್ನೇ ಪ್ರಶ್ನಿಸಿ ನಮ್ಮಲ್ಲೇ ಉತ್ತರ ಪಡೆದು, ಅದೇ ಉತ್ತರವನ್ನು ತಿರುಗಿಸಿ ಹೇಳಿ ನಿಮ್ಮ ಪೂರ್ವ ಹೇಗೆ ಹೇಳಿದೆ ನೋಡಿ ಎಂಬ ಹೆಮ್ಮೆ ಆತನಲ್ಲಿ ಎದ್ದು ಕಂಡಿತು. ದೇವರಲ್ಲಿ ಭಕ್ತಿಯ ಬದಲು ಭಯಹುಟ್ಟಿಸುವ ವಿಷಯಗಳನ್ನು ಚರ್ಚೆ ಮಾಡಿ ಅದರಿಂದ ಲಾಭ ಪಡೆಯುವ ಇಂಥವರಿಗೆ ಹೊಟ್ಟೆ ತುಂಬುವುದು ಇಂತಹ ಬುರುಡೆ ಜ್ಯೋತಿಷ್ಯದಲ್ಲೆ ಎಂಬ ಅರಿವು ಮೂಡಿತು. ನಮ್ಮೆಲ್ಲರ ಭವಿಷ್ಯವಿದ್ದ ಹೋರೋಸ್ಕೋಪ್‌ ಪುಸ್ತಕದ ಬೆಲೆ ಒಂದಕ್ಕೆ 150 ರೂ. ಕೇವಲ ಎರಡು ಪುಟದ ಪುಸ್ತಕವದು.

ಖರ್ಚಿನ ರೈಲುಗಾಡಿಯನ್ನು ಹೊಡೆದ ಆತನಿಗೆ 3,000 ರೂ. ಫೀಸ್‌ ನೆಪದಲ್ಲಿ ದಂಡವು ತೆರಬೇಕಾಯಿತು. ಮುಗ್ಧ ಜನರ ಅಥವಾ ನಂಬುವವರ ತಲೆ ಕೆಡಿಸಿ ಭಯ ಹುಟ್ಟಿಸಿ ಸುಲಿಗೆ ಮಾಡಿ ಸುಳ್ಳಾಡಿ ಬದುಕಿದರೂ ಆತನ ಮುಖದಲ್ಲಿ ತೇಜಸ್ಸು ಕಡಿಮೆಯಾಗಿರಲಿಲ್ಲ. ಇನ್ನಷ್ಟು ಜನಕ್ಕೆ ನಾ ಕಲಿತಿದ್ದನ್ನು ಪಸರಿಸುವ ಪ್ರಕಾಶವಿತ್ತು. ಜ್ಯೋತಿಷ್ಯ ಶಾಸ್ತ್ರದ ಮೂಲ ಕಸುಬುದಾರರಿಗಿಂತ, ಸಂಪಾದಿಸಲು ಬಂದವರೇ ಹೆಚ್ಚು. ತಿಂಗಳ ಸಂಬಳ ನೆಚ್ಚಿಕೊಂಡು ಬದುಕುವುದಕ್ಕಿಂತ ದಿಕ್ಕು ತಪ್ಪಿಸಿ ದುಡ್ಡು ಮಾಡುವ ದಾರಿಯಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ. ಬುರುಡೆ ಜ್ಯೋತಿಷ್ಯ ಕೆಳುವವರಿರುವುದರಿಂದಲೇ ಇಂಥವರ ಸಂಖ್ಯೆ ಗಗನಕ್ಕೇರಿದೆ. ಅನೇಕ ಜ್ಯೋತಿಷಿಗಳ ಪೂರ್ವ ತಿಳಿದರೆ, ಅವರ ಪರ ವಹಿಸಿಕೊಂಡು ನಾವ್ಯಾರು ಮಾತಾಡುವುದಿಲ್ಲ. ಅಷ್ಟಕ್ಕೂ ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ.

Advertisement

ಭವಿಷ್ಯ ಬಲ್ಲವರೆಂದು ಸುಳ್ಳಾಡುವ ಇವರ ಮಾತು ಕೇಳಿ ಭವಿಷ್ಯ ಬದಲಾಗುವ ಹಾಗಿದ್ದರೆ ಗಿಣಿ ಶಾಸ್ತ್ರದವ ಗಣಿಯ ದಣಿಯಾಗಬೇಕಿತ್ತು. ವಿಜ್ಞಾನ ಮುಂದುವರಿದಿದೆ. ಎಲ್ಲದಕ್ಕೂ ವಿಜ್ಞಾನದಲ್ಲಿ ಉತ್ತರವಿದೆ. ನಂಬಿಕೆಯಿರಲಿ, ಇತರರ ಮೇಲಲ್ಲ. ಭಕ್ತಿಯಿರಲಿ, ಭಯದ ನೆರಳಲ್ಲ. ದೇವರಿದ್ದಾನೆ, ನಮ್ಮ ಅರಿವನ್ನು ಹೆಚ್ಚಿಸುವುದಕ್ಕಾಗಿ ಮತ್ತು ಎಚ್ಚರಿಸುವುದಕ್ಕಾಗಿ ಎಂಬ ನಂಬಿಕೆ ಇದ್ದರೆ ಸಾಕು. ಜ್ಯೋತಿಷ್ಯ ಹೇಳುವವರ ಭವಿಷ್ಯ ಉದ್ಧಾರವಾಗುವುದು ಕೇಳುವವರ ಜೇಬಿನಿಂದಲೆ ಹೊರತು ನಮ್ಮೆಲ್ಲರ ಬದುಕು ಹಸಿರಾಗುವುದು ಅವರು ಹೇಳುವ ಬಣ್ಣದ ಮಾತಿನಿಂದಲ್ಲ. ಮನೆಗೆ ಬಂದು ನಮ್ಮೆಲ್ಲರ ಜೀವನವನ್ನು ಬದಲಾವಣೆ ಮಾಡಲು ಬಯಸಿದ ಜ್ಯೋತಿಷಿಯ ಆತ್ಮವಿಶ್ವಾಸದ ವಂಚನೆ ಎದುರು ಕೆಲವು ಹಿರಿಯರ ಮನಸ್ಸು ಹದಗೆಟ್ಟಿದಂತೂ ನಿಜ.

ಈ ಸಮಸ್ಯೆ ಶತಮಾನಗಳಿಂದಲೂ ಇದೆ. ವಿಜ್ಞಾನದಲ್ಲಿ ಉತ್ತರ ಸಿಗದಿದ್ದರೆ, ಮೂಢನಂಬಿಕೆಯ ಮೌಡ್ಯತೆಯಲ್ಲಿ ಉತ್ತರ ಹುಡುಕುವುದು ಶೋಚನೀಯ ಸಂಗತಿ. ಕಣ್ಣುಗಳಿದ್ದರೂ ಕುರುಡರಾಗಿ ಯಾರೋ ಹೇಳಿದ ಮಾತುಗಳನ್ನು ನಂಬಿ ಮೋಸ ಹೋಗುವುದು ಎಷ್ಟು ಸರಿ? ಸುಳ್ಳನ್ನೇ ಸತ್ಯವೆಂದು ಪ್ರತಿಪಾದಿಸುವ ಜ್ಯೋತಿಷಿಗಳ ಹಾಗೂ ಇವರ ಬೆನ್ನಹಿಂದೆ ನಿಂತಿರುವ ಕಾಣದ ಕೈಗಳನ್ನು ಬದಲಾಯಿಸುವ ಪ್ರಯತ್ನ ಮಾಡುವುದಾದರೂ ಹೇಗೆ? ಹಕ್ಕಿ ಕುರುವ ಸಮಯಕ್ಕೂ, ರೆಂಬೆ ಮುರಿಯುವ ಸಮಯಕ್ಕೂ ಉತ್ತರ ಜ್ಯೋತಿಷಿಗಳನ್ನೇ ಕೇಳಬೇಕೆನೋ. ಸತ್ಯವನ್ನೇ ಹೇಳಬೇಕು, ಪ್ರಿಯವಾದುದನ್ನೇ ಹೇಳಬೇಕು. ಸತ್ಯವನ್ನು ಅಪ್ರಿಯವಾಗಿ ಹೇಳಬಾರದು. ಪ್ರಿಯವಾದ ಸುಳ್ಳನಂತೂ ಹೇಳಲೇಬಾರದು.


 ಸಹನಾ ವಿ., ಕಲಾ ಕಾಲೇಜು, ತುಮಕೂರು 

Advertisement

Udayavani is now on Telegram. Click here to join our channel and stay updated with the latest news.

Next