ಅರಸೀಕೆರೆ: ರಸ್ತೆ ಅಪಘಾತದಲ್ಲಿ ಕಾಲಿಗೆ ಪೆಟ್ಟಾಗಿ ನೋವಿನಿಂದ ನರಳುತ್ತಿದ್ದ ಹಸುವಿಗೆ ಪಶು ವೈದ್ಯ ಸಮೂಹವೇ ಉಚಿತ ಶಸ್ತ್ರ ಚಿಕಿತ್ಸೆ ಮಾಡಿ ಕಾಲಿಗೆ ರಾಡ್ ಅಳವಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಗರದ ಮೈಸೂರು ರಸ್ತೆಯಲ್ಲಿನ ಕಸ್ತೂರ ಬಾ ಗಾಂಧಿ ಗೋ ಶಾಲೆಯಲ್ಲಿ ರಸ್ತೆ ಅಪಘಾತದಲ್ಲಿ ಕಾಲಿಗೆ ಪೆಟ್ಟಾಗಿ ವಾರದಿಂದ ನೋವಿನಲ್ಲಿದ್ದ ಹಸುವಿಗೆ ರಾಜ್ಯದ ಪಶು ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಸರಿಪಡಿಸುವ ಕಾರ್ಯವನ್ನು ಮಾಡಿರುವುದು ಗೋ ಪ್ರೇಮಿಗಳ ಪ್ರಸಂಶೆಗೆ ಕಾರಣವಾಗಿದೆ.
ಮೂರು ಬಗೆಯ ಚಿಕಿತ್ಸೆ: ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ನೇತೃತ್ವ ವಹಿಸಿದ್ದ ವಿಜ್ಞಾನಿ ಹಾಗೂ ಹಿರಿಯ ವೈದ್ಯರಾದ ಡಾ. ಹರಿಪ್ರಸಾದ್ ಹೈತಾಳ್ ಅವರು ಮಾತನಾಡಿ, ರಾಜ್ಯ ಸೇರಿದಂತೆ ಅಂತಾರಾಜ್ಯಗಳಲ್ಲಿ ಪಶುಗಳು ಅಪಘಾತದಿಂದ ಕಾಲಿಗೆ ಪೆಟ್ಟಾದಾಗ ಅದನ್ನು ಉಳಿಸುವ ನಿಟ್ಟಿನಲ್ಲಿ ಹಲವು ಶಸ್ತ್ರ ಚಿಕಿತ್ಸೆಗಳನ್ನು ಮಾಡಿ ಕಾಲನ್ನು ಶಾಶ್ವತವಾಗಿ ಉಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇಲ್ಲಿ ರಾಜ್ಯದ 30ಕ್ಕೂ ಹೆಚ್ಚಿನ ಪಶು ವೈದ್ಯರು ಆಗಮಿಸಿದ್ದಾರೆ.
ಹಸುಗಳು 200 ಕೆ.ಜಿ.ಗೂ ಹೆಚ್ಚು ತೂಕ ಹೊಂದಿದ್ದು ಅವುಗಳ ಕಾಲಿಗೆ ಪೆಟ್ಟಾದಾಗ ಮೂರು ರೀತಿಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಅದರಲ್ಲಿ ಫೈಬರ್ ಕ್ಯಾಸ್ಟ್, ಎಪಾಕ್ಷಿ ಫಿನ್ನಿಂಗ್, ಸರ್ಕ್ನೂಲರ್ ಫಿಕ್ಸೇಟರ್ ರೀತಿಯಲ್ಲಿ ಇರುತ್ತದೆ ಎಂದು ಮಾಹಿತಿ ನೀಡಿದರು.
ಚಿಕಿತ್ಸಾ ವೆಚ್ಚ: ಹಲವು ಸಂಶೋಧನೆಗಳ ಪ್ರಕಾರ ಸರ್ಕ್ನೂಲರ್ ಫಿಕ್ಸೇಟರ್ ಚಿಕಿತ್ಸೆ ಸಂದರ್ಭದಲ್ಲಿ ಹಸು ಗಳಿಗೆ ಅರವಳಿಕೆ ಮದ್ದನ್ನು ನೀಡಿ ಕಾಲಿಗೆ ರಿಂಗ್ಸ್‌ನ ಮೂಲಕ ಕಾಲಿಗೆ ಜೋಡಣೆ ಮಾಡಲಾಗು ತ್ತದೆ. ನಂತರ 90 ದಿನಗಳವರೆಗೆ ನೋವಿನ ಇಂಜೆಕ್ಷನ್ ಹಾಗೂ ಪೆಟ್ಟಾದ ಜಾಗಕ್ಕೆ ಬ್ಯಾಂಡೆಡ್ ಮಾಡಿ ಚಿಕಿತ್ಸೆ ನೀಡುವ ಮೂಲಕ ಕಾಲು ಸರಿಹೋಗುವಂತೆ ಮಾಡಬಹುದು. ಇದಕ್ಕೆ ಸುಮಾ ರು 10 ಸಾವಿರದವರೆಗೆ ವೆಚ್ಚವಾಗಲಿದೆ. ಉಳಿದಂತೆ ಫೈಬರ್ ಕ್ಯಾಸ್ಟ್, ಎಪಾಕ್ಷಿ ಫಿನ್ನಿಂಗ್ ಚಿಕಿತ್ಸೆ ಯು 1 ಸಾವಿರದಿಂದ ಒಂದುವರೆ ಸಾವಿರದವರೆಗೆ ವೆಚ್ಚವಾಗಲಿದೆ ಎಂದು ತಿಳಿಸಿದರು.
ಗೋವಿನ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಡಾ. ಮಂಜುನಾಥ್ ಎಸ್.ಪಿ., ಪ್ರಮೋದ್ ಜೆ.ಕೆ., ಡಾ. ಬಾಳಪ್ಪ, ಡಾ.ಲಿಖೀತ್, ಡಾ.ವಿಶ್ವನಾಥ್, ಡಾ.ಅಮಿತ್, ಡಾ.ಚೇತನ್. ಡಾ.ಶ್ರೀಕಂಠೇಶ್ವರ ಭಾಗವಹಿಸಿದ್ದರು.