ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯ ವೈದ್ಯರು ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ನಾಲ್ಕು ವರ್ಷ ಮಗುವಿಗೆ ಯಶಸ್ವಿ ಹೃದಯ ಕಸಿ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ಚಹಲ್ ಪಟ್ವಾರಿ ಎಂಬ ನಾಲ್ಕು ವರ್ಷದ ಬಾಲಕ ಡಿಲೇಟೆಡ್ ಕಾರ್ಡಿ ಯೊಮಿಯೋಪಥಿ ಎಂಬ ಹೃದಯ ಸಮಸ್ಯೆ ಎರಡು ವರ್ಷ ಕಾಲದಿಂದ ಬಳಲುತ್ತಿದ್ದು, ಹೃದಯದ ಪಂಪಿಂಗ್ ಸಾಮರ್ಥ್ಯ ಕುಗ್ಗಿಹೋಗಿತ್ತು.
ಬಾಲಕನನ್ನು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ವೈದ್ಯರು ಪರೀಕ್ಷಿಸಿ ಹೃದಯ ಕಸಿ ಅಗತ್ಯವೆಂದು ಪೋಷಕರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ 2019ರ ಫೆಬ್ರವರಿಯಲ್ಲಿ ಜೀವಸಾರ್ಥಕತೆ ಸಂಘಟನೆಯಲ್ಲಿ ನೋಂದಾ ಯಿಸಿಕೊಂಡರು. 11 ತಿಂಗಳ ಬಳಿಕ ಮೆದುಳು ಸ್ರಾವದಿಂದ ಬಳಲುತ್ತಿದ್ದ 45 ವರ್ಷದ ವ್ಯಕ್ತಿಯ ಹೃದಯವನ್ನು ಕಸಿ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಹೃದಯ ಕಸಿ ವೈದ್ಯ ಡಾ.ಶಶಿರಾಜ್ ಸುಬ್ರಹ್ಮಣ್ಯ, ಬಾಲಕ ಆಸ್ಪತ್ರೆ ಸೇರಿದಾಗಿನಿಂದ ಅಂಗಾಂಗ ಸಿಗುವವರೆಗೂ ಜೀವರಕ್ಷಕ ಔಷಧಿಗಳ ನೆರವಿನಲ್ಲಿದ್ದನು. ಈ ಹೃದಯಕಸಿ ಶಸ್ತ್ರಚಿಕಿತ್ಸೆಯು ನಾಲ್ಕು ಗಂಟೆಗಳ ಕಾಲ ನಡೆಯಿತು. ಶಸ್ತ್ರಚಿಕಿತ್ಸೆ ಬಳಿಕ ಮಗುವನ್ನು 15 ದಿನಗಳ ಒಳಗಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ದಾನಿಯ ಹೃದಯವನ್ನು ಹೆಬ್ಟಾಳದ ಆಸ್ತೆರ್ ಸಿಎಂಐ ಆಸ್ಪತ್ರೆಯಿಂದ ನಾರಾಯಣ ಹೆಲ್ತ್ ಸಿಟಿಗೆ ಸಂಚಾರ ವಿಭಾಗದ ಪೊಲೀಸರು ವ್ಯವಸ್ಥೆ ಮಾಡಿಕೊಟ್ಟ ಹಸಿರು ಪಥ ಸಂಚಾರದ ಮೂಲಕ ರವಾನಿಸಲಾಯಿತು.
35 ಕಿಲೋಮೀಟರ್ ಅಂತರವನ್ನು ಕೇವಲ 29 ನಿಮಿಷಗಳಲ್ಲಿ ಕ್ರಮಿಸಲಾಯಿತು ಎಂದು ತಿಳಿಸಿದರು. ಜೀವಸಾರ್ಥಕತೆ ಟ್ರಸ್ಟ್‌ನ ಸಂಚಾಲಕ ಡಾ.ಕಿಶೋರ್ ಫಡೆ, ಅಂಗಾಂಗ ದಾನ ಮಾಡುವವರ ಸಂಖ್ಯೆ ಏರುತ್ತಿದ್ದರೂ, ಅಪೇಕ್ಷಿತರ ಸಂಖ್ಯೆ ಇನ್ನೂ ಅಧಿಕವಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಹೃದಯ ಕಸಿ ಎರಡು ಪಟ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷ ರಾಜ್ಯದಲ್ಲಿ 30ಕ್ಕೂ ಹೆಚ್ಚು ಹೃದಯ ಕಸಿ ಮಾಡಲಾಗಿದೆ ಎಂದು ತಿಳಿಸಿದರು.
ಜೀವ ಉಳಿಸುವ ಕೆಲಸದಲ್ಲಿ ಪೊಲೀಸರು: ಸಂಚಾರಿ ಪೊಲೀಸ್ ಹೆಚ್ಚುವರಿ ಆಯುಕ್ತ ರವಿಕಾಂತೇ ಗೌಡ ಮಾತನಾಡಿ, ಪೊಲೀಸ್ ಎಂದರೆ ಅಪರಾಧ ಅಥವಾ ಹಾನಿ ಆದ ಮೇಲೆ ಬರುತ್ತಾರೆ ಎಂಬ ಮನೋಭಾವ ಇದೆ. ಆದರೆ, ಜೀವ ಉಳಿಸುವ ಹೃದಯ ಕಸಿ ಕಾರ್ಯದಲ್ಲಿ ಹೃದಯವನ್ನು ಒಂದು ಆಸ್ಪತ್ರೆಯಿಂದ ಮತ್ತೂಂದು ಆಸ್ಪತ್ರೆಗೆ ಸಾಗಿಸಲು ಪೊಲೀಸ್ ಇಲಾಖೆಯು ಅಗತ್ಯ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡುತ್ತಿದೆ. ಈ ಮೂಲಕ ಸಂಚಾರಿ ಪೊಲೀಸ್ ಇಲಾಖೆಯು ಜೀವ ಉಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದೆ. ಸಮಾಜದಲ್ಲಿ ಅಂಗವೈಫಲ್ಯದಿಂದ ಬಳಲುತ್ತಿದ್ದವವರು ಹೆಚ್ಚಿದ್ದು, ಕಸಿ ಅವಶ್ಯಕತೆ ಹೆಚ್ಚಿದೆ. ಹೀಗಾಗಿ, ಸಮಾಜದಲ್ಲಿ ಅಂಗಾಂಗ ದಾನದ ಅರಿವು ಇನ್ನಷ್ಟು ಮೂಡಬೇಕು ಎಂದರು.
ಮಣಿಪಾಲ್ ವೈದ್ಯರಿಂದ ಯಶಸ್ವಿ ಬೆಂಟಾಲ್ ಶಸ್ತ್ರಚಿಕಿತ್ಸೆ
ಬೆಂಗಳೂರು: ಹೃದಯ ಹಿಗ್ಗುವಿಕೆ ಸಮಸ್ಯೆ ಯಿಂದ ಬಳಲುತ್ತಿದ್ದ ನೈಜೀರಿಯಾ ಮೂಲದ 43 ವರ್ಷದ ಉವೆನ್ ಎಂಬುವ ವರಿಗೆ ಯಶಸ್ವಿಯಾಗಿ ಬೆಂಟಾಲ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಹೃದಯ ಕಸಿ ವಿಭಾಗದ ಮುಖ್ಯಸ್ಥ ಡಾ.ಎನ್.ಎಸ್. ದೇವಾನಂದ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಭೌತವಿಜ್ಞಾನ ತಜ್ಞರಾಗಿರುವ ಉವೆನ್ ಅವರಿಗೆ ಹೃದಯದ ಅಯೋರ್ಟಿಕ್ ವಾಲ್ ಸೋರಿಕೆ ಉಂಟಾಗಿತ್ತು. ಇದರಿಂದಾಗಿ ಶುದ್ಧ ರಕ್ತನಾಳದ ಆರಂಭದ ಹಂತದಲ್ಲಿ ಮತ್ತು ಅಯೋರ್ಟಿಕ್ ರೂಟ್ ಭಾಗದಲ್ಲಿ ಹಿಗ್ಗುವಿಕೆ ಕಂಡು ಬಂದಿತ್ತು ಎಂದು ತಿಳಿಸಿದರು.
ಇಂತಹ ಸಮಸ್ಯೆ ಉಳ್ಳವರಿಗೆ ಅಯೋ ರ್ಟಿಕ್ ರೂಟ್ ಬದಲಾಯಿಸಬೇಕಾಗುತ್ತದೆ. ಈ ಶಸ್ತ್ರ ಚಿಕಿತ್ಸೆಗೆ ಬೆಂಟಾಲ್ ಶಸ್ತ್ರಕ್ರಿಯೆ ಎನ್ನುತ್ತಾರೆ. ಹತ್ತು ದಿನಗಳಲ್ಲಿ ಈ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಚಿಕಿತ್ಸೆ ನಂತರ ರೋಗಿ ಕೂಡ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಉವೆನ್, ನಾನು ಸಂಪೂರ್ಣವಾಗಿ ಚೇತರಿಸಿ ಕೊಳ್ಳುತ್ತಿದ್ದೇನೆ. ನನ್ನ ಯಶಸ್ವಿ ಶಸ್ತ್ರ ಚಿಕಿತ್ಸೆಗೆ ಕಾರಣರಾದ ಮಣಿಪಾಲ್ ವೈದ್ಯರ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.