Advertisement
ಇವರೇ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಮಹದೇವಪ್ಪ ಭಾಗಣ್ಣವರ. ಸುತ್ತಲಿನ ಗ್ರಾಮಸ್ಥರಿಗೆ ಇವರು ಚಿರಪರಿಚಿತರು. ಎಂತಹ ಕುದುರೆಯನ್ನಾದರೂ ಪಳಗಿಸಬಲ್ಲ ಛಾತಿ ಇವರದ್ದು. ಹುಟ್ಟಿನಿಂದಲೇ ಕುದುರೆಯ ಒಡನಾಡಿಯಾಗಿರುವ ಇವರ ಕೃಷಿ ಬದುಕಿಗೆ ಕುದುರೆಯೇ ದೊಡ್ಡ ಆಸರೆ. ತಮ್ಮ ಜಮೀನು ಅಲ್ಲದೆ ಇತರರ ಜಮೀನು ಲಾವಣಿ ಪಡೆದಿದ್ದಾರೆ. ಬಿಎ ಪದವೀಧರರಾಗಿರುವ ಇವರು ಸರಕಾರಿ ಕೆಲಸಕ್ಕೆ ಅಲೆದಾಡಿ ಸಾಕಾಗಿ ಕೊನೆಯಲ್ಲಿ ಕೃಷಿಯಲ್ಲಿ ಜೀವನ ಕಂಡುಕೊಂಡಿದ್ದಾರೆ. ಕೃಷಿ ಜತೆ ಟಗರು ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ.
Related Articles
Advertisement
ಕುದುರೆ ಹೂಡಲು ಬೇಕಾದ ಮಾದರಿಯಲ್ಲಿ ಕೃಷಿ ಪರಿಕರಗಳನ್ನು ಸ್ನೇಹಿತರೊಂದಿಗೆ ಸಿದ್ಧಪಡಿಸಿಕೊಂಡು ಯಶಸ್ವಿಯಾಗಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಹೊಲದಲ್ಲಿ ಓಡಾಡಿಕೊಂಡು ಕೆಲಸ ಮಾಡಲು ಆಗಲ್ಲ ಎನ್ನುವ ಕಾರಣಕ್ಕೆ ಕುಂಟೆ, ರಂಟೆ ಹೀಗೆ ಪ್ರತಿಯೊಂದು ಸಲಕರಣೆಗಳನ್ನು ಚಕ್ಕಡಿ ಮಾದರಿಯಲ್ಲಿ ಸಿದ್ಧಪಡಿಸಿಕೊಂಡಿದ್ದಾರೆ. ಇದರಲ್ಲಿ ಕುಳಿತುಕೊಂಡು ಎಲ್ಲಾ ಕಾರ್ಯ ಮಾಡುತ್ತಾರೆ. ಈ ಚಕ್ಕಡಿ ಕುಂಟೆ, ರಂಟೆ, ಸಣ್ಣ ಕುಂಟೆಗೆ ಹೊಂದಾಣಿಕೆಯಾಗವಂತೆ ಕೆಲಸ ತಂತ್ರಗಳನ್ನು ಅಳವಡಿಸಿದ್ದಾರೆ. ಬೆಳೆ ಸಾಲುಗಳ ಆಧಾರದ ಮೇಲೆ ಗಾಲಿಗಳನ್ನು ಅಗಲ ಹಾಗೂ ಕಿರಿದಾಗಿ ಮಾಡಿಕೊಳ್ಳಬಹುದಾಗಿದೆ.
ಹೆಗಲಾಗಿರುವ ಅರ್ಧಾಂಗಿ
ಪತ್ನಿ ದೀಪಾ ಪ್ರತಿಯೊಂದು ಕಾರ್ಯಕ್ಕೂ ಆಸರೆಯಾಗಿದ್ದಾರೆ. ಪತಿ ಸಂಪೂರ್ಣ ಕೃಷಿ ಕಾರ್ಯದಲ್ಲಿ ತೊಡಗುತ್ತಿದ್ದಂತೆ ಇವರು ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಪತಿ ಕುದುರೆ ಮೇಲೆ ಕುಳಿತು ಒಂದು ಪಂಪ್ ಮೂಲಕ ಔಷಧಿ ಸಿಂಪರಿಸಿದರೆ, ಪತ್ನಿ ನಡೆದುಕೊಂಡು ಇನ್ನೊಂದು ಪಂಪ್ ಮೂಲಕ ಔಷಧಿ ಸಿಂಪರಿಸುತ್ತಾರೆ. ಪ್ರತಿಯೊಂದು ಕೃಷಿ ಕಾರ್ಯಕ್ಕೂ ಪತ್ನಿ ಹೆಗಲಾಗಿ ದುಡಿಯುತ್ತಾರೆ. ಮನೆಯಲ್ಲಿ ತಾಯಿ ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿ ಕೈ ಜೋಡಿಸುತ್ತಾರೆ. ಹೀಗಾಗಿ ಕೃಷಿ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಮಹದೇವಪ್ಪ.
ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇದ್ದ ಜಮೀನಿನಲ್ಲಿ ಬಾಡಿಗೆ ಎತ್ತು, ಕೂಲಿಗಳ ಮೂಲಕ ಕೆಲಸ ಮಾಡಿಸುತ್ತಿದ್ದೆವು. ಬಾಡಿಗೆ ಹೆಚ್ಚು, ಸಕಾಲಕ್ಕೆ ಸಿಗುತ್ತಿರಲಿಲ್ಲ. ಇದರಿಂದ ಬರುವ ಆದಾಯ ಬಾಡಿಗೆಗೆ ಕೊಡಬೇಕಾಗುತ್ತದೆ ಎಂದು ಸ್ವಂತ ಮಾಡಲು ನಿರ್ಧರಿಸಿದೆ. ಚಿಕ್ಕಂದಿನಿನಂಲೂ ಕುದುರೆಯೊಂದಿಗೆ ಹೆಚ್ಚು ಒಡನಾಟವಿದ್ದ ಕಾರಣ ಅದನ್ನ ಬಳಸಿ, ಅದಕ್ಕೆ ಪೂರಕವಾಗಿ ಸ್ನೇಹಿತರೊಬ್ಬರು ಕಡಿಮೆ ಖರ್ಚಿನಲ್ಲಿ ಕೃಷಿ ಪರಿಕರ ಮಾಡಿಕೊಟ್ಟರು. ಕಳೆದ ನಾಲ್ಕು ವರ್ಷದಿಂದ ಬಿತ್ತನೆ ಕಾರ್ಯವೊಂದನ್ನು ಬಿಟ್ಟು ಉಳಿದೆಲ್ಲ ಕಾರ್ಯವನ್ನು ನಾನು ಹಾಗೂ ಪತ್ನಿ ಮಾಡಿಕೊಂಡು ಹೋಗುತ್ತಿದ್ದೇವೆ. –ಮಹದೇವಪ್ಪ ಭಾಗಣ್ಣವರ, ಚಾಕಲಬ್ಬಿ
ಎಲ್ಲಾ ಅಂಗಾಂಗಗಳು ಚೆನ್ನಾಗಿದ್ದು, ಕೆಲಸ ಮಾಡಲು ಸೋಮಾರಿತನ ತೋರುವ ಯುವಕರಿಗೆ ಇವರು ಮಾದರಿಯಾಗಿದ್ದಾರೆ. ಅಂಗವಿಕಲತೆಯನ್ನು ಮೆಟ್ಟಿ ನಿಂತು ಕೃಷಿ ಕಾರ್ಯ ಮಾಡುತ್ತಿದ್ದಾರೆ. ತಮ್ಮ ಜಮೀನು ಜತೆಗೆ ಇತರೆ ಜಮೀನು ಲಾವಣಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಕೃಷಿ ಕಾರ್ಯವಷ್ಟೇ ಅಲ್ಲ ಗ್ರಾಮದಲ್ಲಿ ಬ್ಯಾಂಕ್ ಮಿತ್ರನಾಗಿ ಹಾಗೂ ಇತರೆ ಕಾರ್ಯಗಳನ್ನು ಮಾಡಿಕೊಡುತ್ತಿದ್ದಾರೆ. –ಡಾ| ಮಂಜುನಾಥ ಬಾರಕೇರ, ಗ್ರಾಮಸ್ಥ
-ಹೇಮರಡ್ಡಿ ಸೈದಾಪುರ