ರಾಮನಗರ: ಕಾಡುಪ್ರಾಣಿಗಳ ಹಾವಳಿ, ತೀವ್ರ ಬಿಸಿಲು, ಕೂಲಿಕಾರ್ಮಿಕರ ಸಮಸ್ಯೆ, ನೀರು ಮತ್ತು ವಿದ್ಯುತ್ ಅಭಾವ ಹೀಗೆ ಸಾಲು ಸಾಲು ಸಮಸ್ಯೆಗಳ ನಡುವೆಯೂ ಬೇಸಿಗೆಯಲ್ಲಿ ಬಂಪರ್ ರಾಗಿ ಬೆಳೆ ಬೆಳೆದು ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ತಾಲೂಕಿನ ಜವಳಗೆರೆ ದೊಡ್ಡಿ ಗ್ರಾಮದ ರೈತ ರಾಮಯ್ಯ. ಪ್ರತಿ ಎಕರೆ ಭೂಮಿಯಲ್ಲಿ 12 ರಿಂದ 16 ಕ್ವಿಂಟಲ್‌ವರೆಗೆ ರಾಗಿ ಬೆಳೆದರೆ ಹೆಚ್ಚು. ಆದರೆ, ರಾಮಯ್ಯ ಅವರು ರಾಗಿಯನ್ನು ನಾಟಿಮಾಡಿದ್ದು ಒಳ್ಳೆ ಫಸಲು ಬಂದಿದೆ. ಈ ಬಾರಿ 20 ರಿಂದ 22 ಕ್ವಿಂಟಲ್ ರಾಗಿ ಬರಲಿದೆ ಎಂದು ಅನುಭವಿ ರೈತರು ಮತ್ತು ಕೃಷಿ ಅಧಿಕಾರಿಗಳು ಅಂದಾಜಿಸಿದ್ದಾರೆ.
ಸವಾಲುಗಳ ನಡುವೆ ಬೇಸಾಯ: ರಾಗಿ ಫಸಲು ಬೆಳೆಯಲು ರಾಮಯ್ಯ ಸಾಕಷ್ಟು ಸವಾಲು ಎದುರಿಸಿದ್ದಾರೆ. ಗುಡ್ಡದಂಚಿನಲ್ಲಿರುವ ಇವರ 1 ಎಕರೆ ಭೂಮಿಗೆ ಕಾಡುಪ್ರಾಣಿಗಳ ಹಾವಳಿ ನಿತ್ಯ ನಿರಂತರ. ಒಂದು ಕಡೆ ಕಾಡುಪ್ರಾಣಿಗಳ ಹಾವಳಿಯಾದರೆ ಮತ್ತೂಂದು ಕಡೆ ಕೃಷಿ ಪಂಪ್‌ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಕಾಡುತ್ತಿದೆ. ರಾತ್ರಿಯಿಡೀ ಬೆಂಕಿ ಹಾಕಿಕೊಂಡು ಹೊಲದಲ್ಲಿ ಕಾವಲು ಕಾಯುತ್ತಿದ್ದ ರಾಮಯ್ಯ, ಆಗಾಗ್ಗೆ ಪಟಾಕಿ ಸಿಡಿಸಿ ಕಾಡುಹಂದಿ ಮತ್ತು ಕಾಡಾನೆ ಜಮೀನಿಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಿದ್ದಾರೆ. ಇದೀಗ ರಾಗಿ ಉತ್ತಮ ಫಸಲು ನೀಡಿದ್ದು, ಕಟಾವು ಆರಂಭಿಸಿದ್ದಾರೆ.
ಹೊಸ ತಳಿ: ಸುಧಾರಿತ ರಾಗಿ ತಳಿ ಎಂಎಲ್ 365 ರಾಗಿಯನ್ನು ಮಂಡ್ಯ ರೈತಸೇವಾ ಸಂಘದಲ್ಲಿ ಖರೀದಿಸಿದ್ದಾರೆ. ಬೇಸಿಗೆ ಸಮಯದಲ್ಲಿ ಈ ತಳಿ ಹೆಚ್ಚಿನ ಬಿಸಿಲನ್ನು ತಡೆದುಕೊಂಡು ಉತ್ತಮವಾಗಿ ಬೆಳೆಯುತ್ತದೆ ಎಂಬ ಕೃಷಿ ಅಧಿಕಾರಿಗಳ ಸಲಹೆ ಮೇರೆಗೆ ಈ ರಾಗಿಯನ್ನು ಒಟ್ಟಲು ಪಾತಿ ಮಾಡಿ, ಕೊಟ್ಟಿಗೆಗೊಬ್ಬರ ಹಾಗೂ ಶಿಫಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರದಿಂದ ಒಟ್ಟಲು ಪಾತಿಯಲ್ಲಿ ಪೋಷಿಸಿ ನಿಗದಿತ ಅವಧಿಯಲ್ಲಿ ಇವರು ಬೆಳೆ ಬೆಳೆದ ಪರಿಣಾಮ ಉತ್ತಮ ಇಳುವರಿ ಪಡೆಯಲು ಕಾರಣವಾಗಿದೆ. ಯಾವುದೇ ರೋಗರುಜಿನಗಳಿಗೆ ಒಳಗಾಗದೆ ಬೆಳೆಯುವ ಈ ಬೆಳೆ ಉತ್ತಮ ಇಳುವರಿ ಜತೆಗೆ ರಾಗಿಹುಲ್ಲು ಸಹ ಸಮರ್ಪಕವಾಗಿ ಸಿಗುವುದರಿಂದ ರಾಸುಗಳ ಮೇವಿಗೂ ಅನುಕೂಲವಾಗುತ್ತದೆ ಎಂಬುದು ರೈತ ರಾಮಯ್ಯ ಅವರ ಅಭಿಪ್ರಾಯ.
ಕೈ ಬೋರಿನಿಂದ ನೀರು: ಬೇಸಿಗೆ ಬೆಳೆಯಾದ ರಾಗಿ ಬೆಳೆಗೆ ನೀರುಣಿಸಲು ರೈತ ರಾಮಯ್ಯ ಕೈ ಬೋರನ್ನು ಅವಲಂಬಿಸಿದ್ದಾರೆ. ಯಾವುದೇ ದೊಡ್ಡ ಯಂತ್ರ ಹಾಗೂ ರಿಗ್ಗಿಂಗ್ ಮಿಷನ್ ಬಳಸದೆ, ಸಣ್ಣಪುಟ್ಟ ಸಲಕರಣೆಗಳ ಸಹಾಯದಿಂದ ರೈತರೇ ಸ್ವಂತವಾಗಿ ಮಾನವ ಶ್ರಮದಿಂದ ತೋಡುವ ಈ ಬೋರ್‌ವೆಲ್ ರಾಮಯ್ಯ ಅವರ ಜಮೀನಿಗೆ ಬೇಕಾದಷ್ಟು ನೀರುಣಿಸುತ್ತಿದೆ. ಮಳೆಗಾಲದಲ್ಲಿ ಭತ್ತದ ಬೆಳೆ ಹಾಗೂ ಬೇಸಿಗೆಯಲ್ಲಿ ರಾಗಿ ಬೆಳೆಯುವ ಮೂಲಕ ನೀರಿನ ಸದ್ಬಳಕೆ ಮಾಡುತ್ತಿರುವುದು ವಿಶೇಷ. ಪ್ರತಿವರ್ಷ ಬೇಸಿಗೆಯಲ್ಲಿ ರಾಗಿ ಬೆಳೆಯುತ್ತಿದ್ದ ಅವರು 16 ರಿಂದ 18 ಕ್ವಿಂಟಲ್ ವರೆಗೆ ಬೆಳೆ ಬೆಳೆದಿದ್ದಾರೆ. ಇದೇ ಮೊದಲ ಬಾರಿಗೆ 22 ಕ್ವಿಂಟಲ್‌ವರೆಗೆ ಇಳುವರಿ ನಿರೀಕ್ಷೆ ಹೊಂದಿದ್ದಾರೆ.
ಮಂಡ್ಯದ ವ್ಯವಸಾಯ ಸೇವಾ ಸಂಘದಿಂದ ರಾಗಿ ಖರೀದಿಸಿದ್ದು, ಬಿತ್ತನೆ ಬೀಜ ನೀಡಿದವರು ಶಿಫಾರಸು ಮಾಡಿದಂತೆ ರಾಗಿ ಬೆಳೆದಿದ್ದೇನೆ. ಹಿಂದೆಂದೂ ಬೆಳೆಯದಷ್ಟು ಉತ್ತಮ ಫಸಲು ಬಂದಿದೆ. ನನ್ನ ಶ್ರಮ ಸಾರ್ಥಕವೆನಿಸುತ್ತಿದೆ. ರಾಗಿಗೆ ಒಳ್ಳೆ ಬೇಡಿಕೆ ಇದ್ದು, ಈ ಬಾರಿ ಒಳ್ಳೆಯ ಆದಾಯ ಗಳಿಸುವ ನಿರೀಕ್ಷೆ ಇದೆ.
-ರಾಮಯ್ಯ ಜವಳಗೆರೆ ದೊಡ್ಡಿ, ರಾಗಿ ಬೆಳೆದ ರೈತ