ಮೈಸೂರು: ಮೈಸೂರು ನಗರ ಸಾರಿಗೆ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಯೋರ್ವ ಕಾಲು ಕಳೆದುಕೊಂಡು ಅಂಗವಿಕಲನಾಗಬೇಕಾದ ಪರಿಸ್ಥಿತಿ ಎದುರಾಗಿದೆ. ನಗರದ ಸದ್ವಿದ್ಯಾ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಬನ್ನೂರಿನ ಉಲ್ಲೇಖ್ (14) ಎಡಗಾಲು ಕಳೆದುಕೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇಬಲ್ ವ್ಯವಹಾರ ನಡೆಸುವ ಪುಟ್ಟಸ್ವಾಮಿ ಅವರ ಮಗ ಉಲ್ಲೇಖ್, ಬನ್ನೂರಿನಿಂದ ನಗರದ ಶಾಲೆಗೆ ಪ್ರತಿನಿತ್ಯ ಬಸ್‌ನಲ್ಲಿ ಬಂದು ಹೋಗುತ್ತಿದ್ದ. ಸೋಮವಾರ ಎಂದಿನಂತೆ ಶಾಲೆ ಮುಗಿಸಿ ಊರಿಗೆ ವಾಪಸ್ಸಾಗಲು ನಗರ ಬಸ್ ನಿಲ್ದಾಣಕ್ಕೆ ತೆರಳಿದ್ದಾನೆ. ಬನ್ನೂರಿಗೆ ನಗರ ಸಾರಿಗೆ ಬಸ್ ವ್ಯವಸ್ಥೆ ಇಲ್ಲದಿರುವ ಕಾರಣ, ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಹೋಗಲು ವಿಜಯನಗರ ಡಿಪೋಗೆ ಸೇರಿದ ನಗರ ಸಾರಿಗೆ ಬಸ್ ಹತ್ತಲು ಯತ್ನಿಸಿದ್ದಾನೆ.
ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದರಿಂದ ಚಾಲಕ ವೆಂಕಟಪ್ಪ, ನಿರ್ವಾಹಕ ಪಾಟೀಲ್, ಪಾಸ್ ಇದ್ದವರನ್ನು ಹತ್ತಿಸಿಕೊಳ್ಳದೆ ಮುಂದೆ ಸಾಗಿದ್ದಾರೆ. ಈ ವೇಳೆ ಬಸ್ ಹತ್ತುವ ಯತ್ನದಲ್ಲಿದ್ದ ಉಲ್ಲೇಖ್ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆತನ ಎಡಗಾಲಿನ ಮೇಲೆ ಬಸ್‌ನ ಹಿಂಬದಿ ಚಕ್ರ ಹರಿದಿದೆ.
ಬಸ್ ಮೇಲೆ ಹರಿದಿದ್ದರಿಂದ ಮುಂಗಾಲುವರೆಗೂ ಮೂಳೆಗಳು ಜಖಂಗೊಂಡಿದೆ. ಆದರೂ, ಬಸ್ ನಿಲ್ಲಿಸದೆ ಮುಂದೆ ಸಾಗುತ್ತಿದ್ದ ಚಾಲಕನನ್ನು ತಡೆದ ಸಾರ್ವಜನಿಕರು ಚಾಲಕ, ನಿರ್ವಾಹಕರಿಗೆ ಛೀಮಾರಿ ಹಾಕಿ ಗಾಯಾಳು ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಈ ಬಗ್ಗೆ ದೇವರಾಜ ಸಂಚಾರಿ ಠಾಣೆಯಲ್ಲಿ ಚಾಲಕ, ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೇರೆಯವರಿಗೆ ಈ ಸ್ಥಿತಿ ಬೇಡ: ಸರ್ಕಾರವೇ ರಿಯಾಯ್ತಿ ದರದಲ್ಲಿ ಪಾಸ್ ನೀಡುವುದರಿಂದ ಒಂದು ವರ್ಷದ ಹಣವನ್ನು ಮೊದಲೇ ಪಾವತಿಸಿ ವಿದ್ಯಾರ್ಥಿಗಳು ಪಾಸ್ ಪಡೆಯುತ್ತಾರೆ. ಆದರೆ, ಬಸ್ ಕಂಡಕ್ಟರ್‌ಗಳು, ಚಾಲಕರು ಪಾಸ್ ಇರುವ ವಿದ್ಯಾರ್ಥಿಗಳನ್ನು ಅಸಡ್ಡೆಯಿಂದ ಕಾಣುತ್ತಿದ್ದಾರೆ. ಬಸ್‌ಗೆ ಹತ್ತಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ ತನ್ನ ಮಗನಿಗೆ ಆದ ಸ್ಥಿತಿ ಬೇರೆ ವಿದ್ಯಾರ್ಥಿಗಳಿಗೆ ಆಗದಂತೆ ತಡೆಯಲು ಸರ್ಕಾರ, ಪಾಸ್ ಇದ್ದವರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಿ ಎಂದು ಉಲ್ಲೇಖ್ ತಂದೆ ಪುಟ್ಟಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.
ತನಿಖೆಗೆ ಸೂಚನೆ: ವಿದ್ಯಾರ್ಥಿ ಕಾಲು ಕಳೆದುಕೊಂಡ ಸುದ್ದಿ ತಿಳಿದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ಘಟನೆ ಕುರಿತು ತನಿಖೆ ನಡೆಸಿ ವರದಿ ನೀಡುವ ಜತೆಗೆ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಶಾಲೆ ಮುಗಿಸಿ ಮನೆಗೆ ಮರಳಲು ಬಸ್ ಹತ್ತುತ್ತಿದ್ದಾಗ ಪಾಸ್ ಇದ್ದವರು ಹತ್ತಬೇಡಿ ಎಂದು ಕಂಡಕ್ಟರ್ ಬಸ್ ಮುಂದೆ ಹೋಗಲು ಸೀಟಿ ಹಾಕಿದರು. ಈ ವೇಳೆ ನಾನು ಬಸ್‌ನ ಮಧ್ಯದ ಡೋರ್‌ನಲ್ಲಿ ಹತ್ತುತ್ತಿದ್ದಾಗ ಕೂಡಲೇ ಸ್ವಯಂಚಾಲಿತ ಡೋರ್ ಮುಚ್ಚಲಾಯಿತು. ಇದರಿಂದ ಆಯತಪ್ಪಿ ಕೆಳಗೆ ಬಿದ್ದ ನನ್ನ ಕಾಲ ಮೇಲೆ ಬಸ್‌ನ ಚಕ್ರ ಹರಿಯಿತು.(ಕಣ್ಣೀರಿಡುತ್ತಾ)
-ಉಲ್ಲೇಖ್, ಗಾಯಗೊಂಡ ವಿದ್ಯಾರ್ಥಿ