Advertisement

ಕೂಡಿಟ್ಟ ಹಣದಿಂದ “ಡ್ರೋನ್‌’ತಯಾರಿಸಿದ ವಿದ್ಯಾರ್ಥಿ; ಕಿರಿಯ ವಯಸ್ಸಿನಲ್ಲಿಯೇ ಸಾಧನೆ !

03:08 PM Jul 25, 2020 | mahesh |

ಮಹಾನಗರ: ಕ್ಯಾಟರಿಂಗ್‌ ಕೆಲಸಕ್ಕೆ ತೆರಳಿ ಸಂಪಾದಿಸಿದ ಹಣದಿಂದ ಮಂಗಳೂರಿನ ವಿದ್ಯಾರ್ಥಿಯೊಬ್ಬ ಡ್ರೋನ್‌ ತಯಾರಿಸಿ ಗಮನಸೆಳೆದಿದ್ದಾನೆ. ಮಂಗಳೂರಿನ ರಥಬೀದಿಯ ಎಸ್‌.ಜೆ. ಶಮಂತ್‌ ಆಚಾರ್ಯ ಕಿರಿಯ ವಯಸ್ಸಿನಲ್ಲಿಯೇ ಸಾಧನೆ ಮಾಡಿರುವ ವಿದ್ಯಾರ್ಥಿ. ಮದುವೆ ಸಮಾರಂಭದ ಚಿತ್ರೀಕರಣದಲ್ಲಿ ಆಕಾಶದೆತ್ತರ ಹಾರುವ ಡ್ರೋನ್‌ ನೋಡಿ ಆಕರ್ಷಿತರಾಗಿದ್ದ ಅವರು, ತಾನು ಕೂಡ ಇದೇ ರೀತಿಯ ಡ್ರೋನ್‌ ತಯಾರಿಸಬೇಕು ಎನ್ನುವ ಆಸಕ್ತಿ-ಕುತೂಹಲ ಬೆಳೆಸಿಕೊಂಡಿದ್ದರು.

Advertisement

ರಥಬೀದಿಯ ನಿವಾಸಿ ಜಗದೀಶ್‌ ಆಚಾರ್ಯ, ಶ್ಯಾಮಲಾ ಆಚಾರ್ಯ ದಂಪತಿ ಪುತ್ರ ಶಮಂತ್‌ ಆಚಾರ್ಯ ಸದ್ಯ ಡೊಂಗರಕೇರಿಯ ಕೆನರಾ ಹೈಸ್ಕೂಲ್‌ನ ಹತ್ತನೇ ತರಗತಿ ಪೂರ್ಣಗೊಳಿಸಿ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಡ್ರೋನ್‌ ತಯಾರು ಮಾಡಬೇಕು ಎಂಬ ಆಸಕ್ತಿಯಿಂದ ಹಣ ಸಂಪಾದಿಸಲು ತಾನು 9ನೇ ತರಗತಿಯ ರಜೆಯಲ್ಲಿದ್ದಾಗ ಮದುವೆ ಸಮಾರಂಭಗಳಿಗೆ ಕ್ಯಾಟರಿಂಗ್‌ ಕೆಲಸಕ್ಕೆ ತೆರಳುತ್ತಿದ್ದರು. ಒಂದು ತಿಂಗಳಿನಲ್ಲಿ ಸುಮಾರು 8,000 ರೂ. ಸಂಪಾದಿಸಿದ್ದು, ಆ ಹಣವನ್ನು ಕೂಡಿಟ್ಟು ಅದರಲ್ಲಿ ಡ್ರೋನ್‌ ತಯಾರಿಕೆಗೆ ಬೇಕಾಗುವ ಕೆಲ ವೊಂದು ಉಪಕರಣಗಳನ್ನು ಆನ್‌ಲೈನ್‌ ಮುಖೇನ ತರಿಸಿ ಕೊಂಡರು. ಆದರೆ ಹೆಚ್ಚಿನ ಹಣದ ಕೊರತೆ ಬಂದಾಗ ಸ್ನೇಹಿತರು ಮತ್ತು ಕುಟುಂಬದವರು ಶಮಂತ್‌ ಪ್ರಯತ್ನಕ್ಕೆ ಸ್ಫೂರ್ತಿ ನೀಡುವ ಜತೆಗೆ ಆರ್ಥಿಕವಾಗಿಯೂ ಬೆಂಬಲ ನೀಡಿದರು.

ಶಮಂತ್‌ ಕೆಲವೊಂದು ವೆಬ್‌ಸೈಟ್‌, ಯೂಟ್ಯೂಬ್‌ ಸಹಾಯ ದಿಂದ ಡ್ರೋನ್‌ ತಯಾರಿಸುವುದು ಹೇಗೆ ಎನ್ನುವುದನ್ನು ಕಲಿತು ನಿರಂತರ ಪರಿಶ್ರಮದಿಂದ ಸದ್ಯ ಬೇಸಿಕ್‌ ಡ್ರೋನ್‌ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದ ಹಾಗೆ ಈ ಡ್ರೋನ್‌ ಸುಮಾರು 1 ಕಿ.ಮೀ. ದೂರ ಹೋಗಬಲ್ಲದು. 60 ಅಡಿ ಎತ್ತರಕ್ಕೆ ಹಾರುತ್ತದೆ. 4,000 ಕೆ.ಡಬ್ಲ್ಯು. ಮೋಟರ್‌, ಎಫ್‌-450 ಫ್ರೇಮ್‌ ಅನ್ನು ಈ ಡ್ರೋನ್‌ ಹೊಂದಿದೆ. ಶಮಂತ್‌ ಈಗಾಗಲೇ ಶಾಲಾ ಹಂತದಲ್ಲಿ ವಿಜ್ಞಾನ ಸ್ಪರ್ಧೆಗಳಲ್ಲಿ ಪ್ರದರ್ಶನ ನಡೆಸಿ ಪ್ರಶಸ್ತಿ ಪಡೆದಿದ್ದಾರೆ. ಬೆಸೆಂಟ್‌ ಕಾಲೇಜು, ಸುರತ್ಕಲ್‌ನ ಎನ್‌ಐಟಿಕೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯ ಮಟ್ಟದ ವಿಜ್ಞಾನ ಇನ್‌ಸ್ಪಯರ್‌ ಅವಾರ್ಡ್‌ ಸ್ಪರ್ಧೆಯಲ್ಲಿ ಭಾಗವಹಿಸಿ 10 ಸಾವಿರ ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ವರ್ಷದ ಕೇಂದ್ರ ಮೈದಾನದಲ್ಲಿ ಜರಗಿದ್ದ ಚೌತಿ ಹಬ್ಬದ ಮೆರವಣಿಗೆ ದಿನ ಗಣೇಶನ ಮೂರ್ತಿಗೆ ಡ್ರೋನ್‌ ಮೂಲಕ ಪುಷ್ಪಾರ್ಚನೆ ಮಾಡಿಸಿ ಗಮನಸೆಳೆದಿದ್ದ.

ಡ್ರೋನ್‌ ಮತ್ತಷ್ಟು ಅಭಿವೃದ್ಧಿ
ಮದುವೆ ಸಮಾರಂಭದಲ್ಲಿ ಡ್ರೋನ್‌ ಚಿತ್ರೀಕರಣ ನೋಡುತ್ತಿದ್ದಾಗ ನಾನು ಕೂಡ ಇದೇ ರೀತಿ ಡ್ರೋನ್‌ ತಯಾರಿಸಬೇಕೆಂಬ ಆಸಕ್ತಿ ಹುಟ್ಟಿತ್ತು. ಕ್ಯಾಟರಿಂಗ್‌ ಕೆಲಸಕ್ಕೆ ತೆರಳಿ ಹಣ ಸಂಪಾದಿಸಿದೆ. ಸದ್ಯ ಬೇಸಿಕ್‌ ಡ್ರೋನ್‌ ತಯಾರಿಸಿದ್ದು, ಮುಂದಿನ ದಿನಗಳಲ್ಲಿ ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತೇನೆ. ಕೃಷಿ, ಆರೋಗ್ಯ ಸೇವೆಯಲ್ಲಿಯೂ ಡ್ರೋನ್‌ ಬಳಕೆ ಕುರಿತು ಯೋಚಿಸುತ್ತಿದ್ದೇನೆ.
– ಶಮಂತ್‌ ಆಚಾರ್ಯ, ಡ್ರೋನ್‌ ತಯಾರಿಸಿದ ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next