Advertisement

ಡಿಸಿಎಂಗೆ ಸಮಸ್ಯೆಗಳ ಪರಿಚಯಿಸಿದ ವಿದ್ಯಾರ್ಥಿನಿಯರು

09:15 PM Sep 20, 2019 | Team Udayavani |

ಮೈಸೂರು: ಕಾಲೇಜಿನಲ್ಲಿ ಗ್ರಂಥಾಲಯವಿದೆ, ಆದರೆ ಗ್ರಂಥಪಾಲಕರಿಲ್ಲದೇ, ಗ್ರಂಥಾಲಯ ಮುಚ್ಚಲಾಗಿದೆ. ಕಾಲೇಜಿಗೆ ಕಾಂಪೌಂಡ್‌ ಇಲ್ಲದೇ ದನ, ನಾಯಿ ಹಾಗೂ ಪುಂಡರ ಕಾಟ ಹೆಚ್ಚಿದೆ. ಶೌಚಾಲಯ ಸಮಸ್ಯೆಗೆ ಕೊನೆಯಿಲ್ಲದಂತಾಗಿದೆ ಎಂಬ ಹಲವು ಸಮಸ್ಯೆಗಳನ್ನು ಮಹಾರಾಣಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಸಚಿವರ ಮುಂದೆ ತೆರೆದಿಟ್ಟರು.

Advertisement

ಉನ್ನತ ಶಿಕ್ಷಣ ಹಾಗೂ ಐಟಿ ಬಿಟಿ ಸಚಿವ ಸಿ.ಎನ್‌.ಆಶ್ವತ್ಥನಾರಾಯಣ ಶುಕ್ರವಾರ ನಗರದ ಮಹಾರಾಣಿ ಕಲಾ ಕಾಲೇಜಿಗೆ ಭೇಟಿ ನೀಡಿದ ಸಂದರ್ಭ ವಿದ್ಯಾರ್ಥಿನಿಯರು ಕಾಲೇಜಿನ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಸಮಸ್ಯೆ ಆಲಿಸಿದ ಸಚಿವರು ಶೀಘ್ರವೇ ಬಗೆಹರಿಸುವುದಾಗಿ ಭರವಸೆ ನೀಡಿದರು.

ಕಾಲೇಜಿನ ಗ್ರಂಥಪಾಲಕರು ನಿವೃತ್ತಿ ಹೊಂದಿದ ನಂತರ ಗ್ರಂಥಾಲಯಕ್ಕೆ ಬೀಗ ಹಾಕಲಾಗಿದೆ. ಇದರಿಂದ ಹಲವು ದಿನಗಳಿಂದ ನಮಗೆ ಪುಸ್ತಕ ಸಿಗುತ್ತಿಲ್ಲ. ಪಠ್ಯ ಪ್ರವಚನಗಳು ನಿರಂತರವಾಗಿ ನಡೆಯುತ್ತಿವೆ. ಆದರೆ, ಇದಕ್ಕೆ ಪೂರಕವಾಗಿ ಅಧ್ಯಯನ ಮಾಡಲು ಆಗುತ್ತಿಲ್ಲ. ಪಠ್ಯಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ಪುಸ್ತಕಗಳು ಗ್ರಂಥಾಲಯದ್ದು, ಪುಸ್ತಕಗಳಿಂದ ವಂಚಿತರಾಗಿದ್ದೇವೆ ಎಂದು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಬಿ.ಪಲ್ಲವಿ ಅಳಲು ತೊಡಿಕೊಂಡರು. ಸಮಸ್ಯೆ ಆಲಿಸಿದ ಆಶ್ವತ್ಥನಾರಾಯಣ ಅವರು ಶೀಘ್ರವೇ ಗ್ರಂಥಾಲಯ ತೆರೆಯುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು.

ತಡೆಗೋಡೆ ಇಲ್ಲದೆ ಕಾರಣ ದನ ನಾಯಿಗಳು ಕಾಲೇಜು ಆವರಣಕ್ಕೆ ನುಗುತ್ತವೆ. ಅವುಗಳನ್ನು ನಾವೇ ಓಡಿಸಬೇಕು. ಅದಕ್ಕಿಂತ ಪುಂಡರ ಹಾವಳಿ ಹೆಚ್ಚು, ಆದ್ದರಿಂದ ಶೀಘ್ರ ತಡೆ ಗೋಡೆ ನಿರ್ಮಿಸಬೇಕು. 3,000ಕ್ಕೂ ಹೆಚ್ಚಿ ವಿದ್ಯಾರ್ಥಿನಿಯರಿರುವ ಕಾಲೇಜಿನ ಕನಿಷ್ಠ ಶೌಚಾಲಯವಿದೆ. ಅದರಲ್ಲೂ ಸರಿಯಾಗಿ ನೀರು ಬರುವುದಿಲ್ಲ, ಸ್ವಚ್ಛತೆಯು ಇಲ್ಲ ಎಂದು ದೂರಿದರು.

ಹಿಂದಿನ ಸರ್ಕಾರದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಲಾಗಿತ್ತು. ಈ ಬಾರಿ ಲ್ಯಾಪಟಾಪ್‌ ನೀಡಿಲ್ಲ. ನಾವೆಲ್ಲ ಗ್ರಾಮಾಂತರ ಪ್ರದೇಶದ ಬಡ ಕುಟಂಬದ ವಿದ್ಯಾರ್ಥಿಗಳು ಈಗ ಅಂತಿಮ ಬಿಎ ವ್ಯಾಸಂಗ ಮಾಡುತ್ತಿದ್ದೇವೆ. ನಮ್ಮ ಕೋರ್ಸ್‌ ಮುಗಿಯವರೆಗೆ ನಿಮ್ಮ ಅಧಿಕಾರ ಅವಧಿಯಲ್ಲಿ ನಮಗೆ ಲ್ಯಾಪಟಾಪ್‌ ಕೊಡಸಿ ಇದರಿಂದ ನಮ್ಮ ವೃತ್ತಿಜೀವನಕ್ಕೆ ಸಹಕಾರಿಯಾಗಲಿದೆ ಎಂದು ಮನವಿ ಮಾಡಿದರು.

Advertisement

ಕಾಂಪೌಂಡ್‌ ನಿರ್ಮಾಣಕ್ಕೆ ಇಂದು ಸ್ಥಳ ಪರಿಶೀಲನೆ ಮಾಡಲಾಗಿದೆ. ಶೀಘ್ರ ಕೌಂಪೌಂಡ್‌ ನಿರ್ಮಿಸಲು ಕ್ರಮ ವಹಿಸಲಾಗುವುದು. ಲ್ಯಾಪ್‌ಟಾಪ್‌ ಸಹ ನೀಡಲಾಗುವುದು ಎಂದು ಭರವಸೆ ನೀಡಿದರು. ಕಾಲೇಜು ವಿಕ್ಷಣೆ ಬಳಿಕ ಕಾಲೇಜಿನ ಸಭಾಂಗಣದಲ್ಲಿ ಮಾತನಾಡಿದ ಆಶ್ವತ್ಥನಾರಾಯಣ, ನಮ್ಮ ಸರಕಾರದ ಮೊದಲ ಆದ್ಯತೆ ಶಿಕ್ಷಣ. ರಾಜ್ಯದಲ್ಲಿರುವ 400ಕ್ಕೂ ಹೆಚ್ಚು ಕಾಲೇಜುಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ.

ಶೌಚಾಲಯವಿಲ್ಲ, ಕಾಂಪೌಂಡ್‌ ಇಲ್ಲ, ಕಟ್ಟಡ ಇದ್ದರೆ, ಉಪನ್ಯಾಸಕರಿಲ್ಲ, ಉಪನ್ಯಾಸಕರಿದ್ದರೆ, ಕಾಲೇಜಿಗೆ ಕಟ್ಟಡವಿರುವುದಿಲ್ಲ ಇಂಥ ತುಂಬಾ ಸಮಸ್ಯೆಗಳು ಸವಾಲಾಗಿದೆ. ಇವುಗಳನ್ನು ಮೊದಲು ಬಗೆಹರಿಸಬೇಕು. ಇದಕ್ಕಾಗಿ ಪ್ರಾಧ್ಯಾಪಕರು, ಶಿಕ್ಷಕರು ಹಾಗೂ ಉದ್ಯಮಿಗಳು ಸಹಕಾರಿಸಬೇಕಿದೆ ಎಂದು ಮನವಿ ಮಾಡಿದರು. ಶಾಸಕ ಎಲ್‌.ನಾಗೇಂದ್ರ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಮೂಗೇಶಪ್ಪ, ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲ ಬಿ.ಟಿ.ವಿಜಯ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next