ಬೆಳ್ಮಣ್: ಮುಂಡ್ಕೂರು ಗ್ರಾ.ಪಂ. ಸುತ್ತ ಮುತ್ತ ಬೀದಿ ನಾಯಿಗಳ ಕಾಟ ಆರಂಭವಾಗಿದ್ದು ಜನ ಆತಂಕಿತರಾಗಿದ್ದಾರೆ. ಶಾಲೆಗೆ ಹೋಗುವ ಮಕ್ಕಳೂ ಭಯಭೀತರಾಗಿದ್ದಾರೆ. ಮುಂಡ್ಕೂರು, ಕಜೆ, ಜಾರಿಗೆಕಟ್ಟೆ, ಸಂಕಲಕರಿಯ ಪರಿಸರದ ರಸ್ತೆಗಳಲ್ಲಿಯೇ ಬೀದಿ ನಾಯಿಗಳು ರಂಪಾಟ ನಡೆಸುತ್ತಿದ್ದು ಇವುಗಳಲ್ಲಿ ಹುಚ್ಚು ನಾಯಿಗಳಿರಬಹು ದೆಂಬ ಸಂಶಯವೂ ವ್ಯಾಪಕ ವಾಗಿದೆ.
ಪಂಚಾಯತ್‌ಗೆ ಆಗ್ರಹ
ಈ ಬೀದಿ ನಾಯಿಗಳು ಎಲ್ಲೆಂದರಲ್ಲಿ ಓಡಾಟ ನಡೆಸಿ ಭೀತಿ ಹುಟ್ಟಿಸುವ ಹಿನ್ನೆಲೆಯಲ್ಲಿ ಆತಂಕಿತರಾಗಿರುವ ಗ್ರಾಮಸ್ಥರು ಇವುಗಳನ್ನು ಹಿಡಿದು ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅನ್ನು ಆಗ್ರಹಿಸಿದ್ದಾರೆ. ಈ ಹಿಂದೆ ಮಳೆಗಾಲ ಮುಗಿಯುವ ಹೊತ್ತಿಗೆ ಬೀದಿ ನಾಯಿಗಳ ರಂಪಾಟ ಪ್ರಾರಂಭವಾಗುತ್ತಿತ್ತು. ಆದರೆ ಇದೀಗ ವರ್ಷಪೂರ್ತಿ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪಂಚಾಯತ್ ವ್ಯಾಪ್ತಿಯ ಮನೆಗಳ ಪ್ರತಿಯೋರ್ವ ನಾಗರಿಕರೂ ಅವರವರ ಸಾಕು ನಾಯಿಗಳನ್ನು ಕಟ್ಟಿ ಹಾಕಿ ಬೀದಿಯಲ್ಲಿ ಅಲೆದಾಡದಂತೆ ಜಾಗ್ರತೆ ವಹಿಸುವಂತೆ ಪಂಚಾಯತ್ ಕೂಡ ವಿನಂತಿಸಿದ್ದು, ಬೀದಿ ನಾಯಿಗಳ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.
ರಸ್ತೆ ತುಂಬ ಓಡಾಡಿಕೊಂಡಿರುವ ಈ ನಾಯಿಗಳ ಪೈಕಿ ಹುಚ್ಚು ನಾಯಿಗಳೂ ಇವೆ ಎಂಬ ವದಂತಿ ಈಗಾಗಲೇ ಹರಿದಾಡುತ್ತಿದೆ.
ರೇಬಿಸ್ ಚುಚ್ಚು ಮದ್ದು ಲಭ್ಯ
ಆಕಸ್ಮಿಕವಾಗಿ ಹುಚ್ಚು ನಾಯಿ ಕಡಿತ ಹಾಗೂ ಸಾಮಾನ್ಯ ನಾಯಿಗಳ ಕಡಿತಕ್ಕೊಳಗಾದರೆ ಜನರು ಮುಂಡ್ಕೂರು ಗ್ರಾ.ಪಂ.ನ ಸಚ್ಚೇರಿಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಲ್ಲಿ ರೇಬಿಸ್ ನಿರೋಧಕ ಚುಚ್ಚು ಮದ್ದು ಲಭ್ಯ ಇದೆ ಎಂದು ಕೇಂದ್ರದ ವೈದ್ಯಾಧಿಕಾರಿ ಡಾ| ಫೌಜಿಯಾ ತಿಳಿಸಿದ್ದಾರೆ.
– ಶರತ್ ಶೆಟ್ಟಿ ಮುಂಡ್ಕೂರು