ಮೂಡುಬಿದಿರೆ: ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಬಳಿ ಇಂಜೆಕ್ಷನ್‌ಗಾಗಿ ಕುರ್ಚಿಯಲ್ಲಿ ಕುಳಿತಿದ್ದ ಕೋಟೆಬಾಗಿಲಿನ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಶುಕ್ರವಾರ ಸಂಭವಿಸಿದೆ.
ತಂದೆ ಮಹಮ್ಮದ್ ಅಕ್ಬರ್ ಮತ್ತು ತಾಯಿ ಜತೆಗೆ ಇರುವಾಗಲೇ ಹಠಾತ್‌ಆಗಿ ಅಸ್ಪತ್ರೆಯ ಸುತ್ತ ಓಡಾಡುತ್ತಿದ್ದ ನಾಯಿಯೊಂದು ಏಕಾಏಕಿ ದಾಳಿ ನಡೆಸಿ, ಮಗುವಿನ ಕೆನ್ನೆ ಹಾಗೂ ಮುಖದ ಇತರ ಕಡೆ ಗಾಯಗೊಳಿಸಿದ್ದು ಘಟನೆಯಿಂದ ತಂದೆ ತಾಯಿ ಸಹಿತ ಹತ್ತಿರದಲ್ಲಿದ್ದವರೆಲ್ಲ ಗಾಬರಿಗೊಂಡಿದ್ದಾರೆ.
ಪೇಟೆಯಲ್ಲಿ ಇದಕ್ಕೂ ಮೊದಲು ಈ ಬೀದಿನಾಯಿ ಇಬ್ಬರಿಗೆ ಕಚ್ಚಿದೆ ಎನ್ನಲಾಗಿದೆ. ನಾಯಿ ಕಚ್ಚಿದಕ್ಕೆ ಒಂದು ಇಂಜೆಕ್ಷ ನನ್ನು ಸರಕಾರಿ ಆಸ್ಪತ್ರೆಯಲ್ಲಿ ನೀಡಿದ್ದರೆ ಇನ್ನೊಂದು ಇಂಜೆಕ್ಷನ್ ಮೂಡುಬಿದಿರೆ ಆರೋಗ್ಯ ಕೇಂದ್ರಕ್ಕೆ ಪೂರೈಕೆ ಇಲ್ಲದಿರುವುದರಿಂದ ಮಗುವಿನ ಮನೆಯವರು ಖಾಸಗಿ ಆಸ್ಪತ್ರೆಯಿಂದ ತರಿಸಿ ಸರಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ಪೇಟೆಯಲ್ಲಿ ಈ ನಾಯಿ ಒಂದು ಮಗು ಸಹಿತ ಮೂವರ ಮೇಲೆ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ಮೂಡುಬಿದಿರೆಯಲ್ಲಿ ಕೊರೊನಾ ಸಮಯದಿಂದಲೂ ಬೀದಿ ನಾಯಿಗಳ ಕಾಟ ವಿಪರೀತ ಹೆಚ್ಚಾಗಿದ್ದು ಕಾರ್ಯಾರ್ಥ ತಡವಾಗಿ ನಡೆದುಕೊಂಡು ಹೋಗುವ ಪತ್ರಕರ್ತರೂ ಸೇರಿದಂತೆ ಸಾರ್ವಜನಿಕರು ಈ ಬೀದಿ ನಾಯಿಗಳ ಕಾಟದಿಂದ ಸಮಸ್ಯೆ ಎದುರಿಸುತ್ತಿದ್ದು ಇಂಥ ಬೀದಿ ನಾಯಿಗಳಿಗೆ ಆನ್ನ ಹಾಕಿ ಸಲಹುವವರಿಗೂ ಪುರಸಭೆಯವರಿಗೂ ಮಾಹಿತಿ ನೀಡಲಾಗಿದ್ದರೂ `ಪ್ರಾಣಿದಯೆ’ಗೆ ಸಂಬಧಿಸಿದ ಕಾನೂನಿನ ತೊಡಕುಗಳಿಂದ ಕ್ರಮ ಜರಗಿಸಲು ಕೈಕಟ್ಟಿ ಹಾಕಿದಂತಾಗಿದೆ ಎಂದೂ ತಿಳಿದುಬಂದಿದೆ.