ಕಳೆದ ವರ್ಷದ ಬಹುಭಾಗ ಕೋವಿಡ್ ಅನ್ನು ತೀವ್ರವಾಗಿ ಎದುರಿಸುವುದರಲ್ಲೇ ಕಳೆಯಬೇಕಾಗಿ ಬಂದ ಬ್ರಿಟನ್ ತನ್ನ ಹೋರಾಟವನ್ನು ಮುಂದುವರಿಸುತ್ತಲೇ 2021ರ ಒಳ ಹೊಕ್ಕಿತ್ತು. ಇವೆಲ್ಲ ಶುರು ಆದಾಗಿನಿಂದ ಇಲ್ಲಿಯ ತನಕ ಸುಖ, ದುಃಖದ ಅನೇಕಾನೇಕ ಕತೆಗಳು ಇಲ್ಲಿ ಹುಟ್ಟಿಕೊಂಡಿವೆ.
ಮತ್ತೆ ಅವುಗಳಲ್ಲಿ ಸೆರಾ ಮತ್ತು ಗ್ಯಾರಿ ಎಂಬ ದಂಪತಿಯ ಕತೆಯೂ ಸೇರಿ ಕೊಂಡಿದೆ. ಸೆರಾ ಇಂಗ್ಲೆಂಡ್‌ನ ಮಧ್ಯಭಾಗದಲ್ಲಿರುವ ಬರ್ಮಿಂಗ್‌ಹ್ಯಾಮ್ ಹತ್ತಿರದ ಆಸ್ಪತ್ರೆಯಲ್ಲಿ ನರ್ಸ್. ಅವಳ ಪತಿ ಗ್ಯಾರಿ, ಮೀನು ಮಾರಾಟಗಾರ. ಇವರ ಮನೆಯಲ್ಲಿ ಸೆರಾಳ 84 ವರ್ಷದ ವೃದ್ಧ ತಾಯಿಯೂ ವಾಸವಾಗಿದ್ದಾರೆ.
2020ರ ಮಾರ್ಚ್‌ನಲ್ಲಿ ಕೋವಿಡ್‌ನ ಪರಿಚಯ ಹಾಗೂ ಪರಿಣಾಮ ಸ್ಪಷ್ಟವಾಗಲಾರಂಭಿಸಿದಾಗ ಅನಾರೋಗ್ಯ ಇರುವ ತಾಯಿಯನ್ನು ನಿತ್ಯವೂ ಬಗೆಬಗೆಯ ರೋಗಿಗಳ ಸಂಪರ್ಕಕ್ಕೆ ಬರುವ ಸೆರಾ ಮತ್ತು ವೃತ್ತಿ ನಿಮಿತ್ತ ಜನ ಸಂಪರ್ಕದಲ್ಲಿ ಇರುವ ಗ್ಯಾರಿ, ಇಬ್ಬರೂ ತಮ್ಮಿಂದ ಹೇಗೆ ದೂರ ಮತ್ತು ಸುರಕ್ಷಿತವಾಗಿ ಇಡಬಹುದು ಎನ್ನುವ ಯೋಚನೆಯಲ್ಲಿ ಇದ್ದರು. ವೃದ್ಧರನ್ನು ಮತ್ತು ಈಗಾಗಲೇ ಅನಾರೋಗ್ಯ ಇರುವವರನ್ನು ಹೆಚ್ಚು ಸತಾಯಿಸುವ ಹಾಗೂ ಮತ್ತೆ ಅಂತಹವರಿಗೆ ಸುಲಭವಾಗಿ ಮಾರಣಾಂತಿಕವೂ ಆಗಬಲ್ಲ ಕೊರೊನವನ್ನು ತಾಯಿಯ ಆಸುಪಾಸಿಗೆ ಬಾರದಂತೆ ಮಾಡಬೇಕಿದ್ದರೆ ಆಕೆಯಿಂದ ತಾವಿಬ್ಬರೂ ತಾತ್ಕಾಲಿಕವಾಗಿ ದೂರ ಇರಬೇಕು ಎಂದೂ ನಿರ್ಧರಿಸಿದರು.
ತಾವಿದ್ದ ಮನೆಯಿಂದ ತುಂಬಾ ದೂರ ಹೋಗಿ ವಾಸಿಸಲು ಬಯಸದ ಅವರು ತಮ್ಮ ಮನೆಯ ಹೊರಗಿನ ರಸ್ತೆಯ ಬದಿಗೆ ಒಂದು ಕ್ಯಾರವನ್ ಖರೀದಿಸಿ ತಂದು ಮನೆಯ ಎದುರಿನ ರಸ್ತೆ ಬದಿಯಲ್ಲಿ ತಂದು ನಿಲ್ಲಿಸಿ, ಅದರಲ್ಲೇ ವಾಸ್ತವ್ಯ ಹೂಡಿ ದರು. ಮನೆ ದೊಡ್ಡ ದಾಗಿರಲಿ ಅಥವಾ ಸಣ್ಣದಿರಲಿ ಅಲ್ಲಿರುವ ಕೋಣೆಗಳು, ಆಸನ ಉಪಕರಣಗಳು, ಇನ್ನು ಮಂಚ ಹಾಸಿಗೆ, ಬಿಸಿ ನೀರು, ಅಡುಗೆ ಸೌಕರ್ಯಗಳನ್ನು ಅನುಭವಿಸಿದವರಿಗೆ ದೀರ್ಘ ಅವಧಿಗೆ ಕ್ಯಾರವಾನ್‌ನಂತಹ ವ್ಯವಸ್ಥೆಯಲ್ಲಿ ವಾಸಿಸುವುದು ಸುಲಭವಾಗಿರಲಿಕ್ಕಿಲ್ಲ. ಮಳೆ, ಬಿಸಿಲು, ಗಾಳಿಗಳನ್ನು ತಡೆಯಬಲ್ಲ ಗೋಡೆ ಮಾಡುಗಳ ದೃಷ್ಟಿಯಿಂದ, ಮನೆಗೂ ಈ ತಗಡಿನ ಡಬ್ಬಿಗೂ ಬಹಳ ವ್ಯತ್ಯಾಸ ಇಲ್ಲದಿದ್ದರೂ ಮನೆಯೊಳಗೆ ಮಾತ್ರ ಇರಬಹುದಾದ ಕೆಲವು ಸೌಕರ್ಯ ಸೌಲಭ್ಯಗಳು ಕ್ಯಾರವಾನ್‌ನಲ್ಲಿ ಇರುವುದು ಸಾಧ್ಯವಿಲ್ಲವಾದ್ದರಿಂದ ದೀರ್ಘ ಅವಧಿಯ ವಾಸ್ತವ್ಯಕ್ಕೆ ತೀರಾ ಹಿತಕರವಾದ ವ್ಯವಸ್ಥೆ ಅದಲ್ಲ. ಆದರೆ ತಾಯಿಯನ್ನು ಸುರಕ್ಷಿತವಾಗಿಡಲು ಹೀಗೆ ಪ್ರತ್ಯೇಕ ವಸತಿಯ ಜತೆ ಅನಿರ್ದಿಷ್ಟಾವಧಿಯವರೆಗೆ ಹೊಂದಾಣಿಕೆ ರಾಜಿ ಮಾಡಿಕೊಳ್ಳುವುದು ಸೆರಾ ಗ್ಯಾರಿಯರ ಆಯ್ಕೆಯಾಗಿತ್ತು.
ಕಳೆದ ವರ್ಷ ಇಲ್ಲಿ ಬಿಸಿಲು ಚೆಲ್ಲಿ, ಹೂ ಬಿರಿದು, ಮರದ ಟೊಂಗೆ ಟಿಸಿಲುಗಳಲ್ಲಿ ಹಸುರು ಮುಡಿದ ವಸಂತಕಾಲದಲ್ಲಿ ಶುರುವಾದ ಕೊರೊನಾ ವೈಶಾಖ ಮಾಸ, ಶರಧೃತುಗಳನ್ನು ನುಂಗಿ ಹಾಕುತ್ತ ಡಿಸೆಂಬರ್ ಅನ್ನೂ ತಲುಪಿತು.ಈ ಹೊತ್ತಿಗೆ ಎರಡನೇ ಅಲೆ ಎಂದು ಕರೆಸಿಕೊಳ್ಳುತ್ತಿದ್ದ ಕೊರೊನಾ ಸೋಂಕು ಸೆರಾ ಹಾಗೂ ಗ್ಯಾರಿಯರಿಗೂ ತಗಲಿತು. ಒಂದು ವೇಳೆ ಇವರು ತಾಯಿಯ ಜತೆಗೆ ಆಗ ಒಂದೇ ಮನೆಯಲ್ಲಿ ಇದ್ದಿದ್ದರೆ ತಾಯಿಗೂ ಖಂಡಿತವಾಗಿ ಸೋಂಕು ಹಬ್ಬುತ್ತಿತ್ತು. ಯು.ಕೆ.ಯಲ್ಲಿ ನಿತ್ಯವೂ ಕೆಲವು ದಿನ ನೂರು, ಮತ್ತೆ ಕೆಲವು ದಿನ ಸಾವಿರಕ್ಕಿಂತ ಹೆಚ್ಚು ಸೋಂಕಿತರನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೃದ್ಧ ತಾಯಿಯ ಸಂಪರ್ಕಕ್ಕೆ ಬಂದಿದ್ದರೆ ಪರಿಣಾಮ ಏನಾಗುತ್ತಿತ್ತು ಎಂದು ಊಹಿಸುವುದು ಕಷ್ಟ.
ಹಾಗಂತ ಸೋಂಕಿತರಾದ ಸೆರಾ, ಗ್ಯಾರಿಯರ ಆರೋಗ್ಯ ಹಾಗೂ ವಯಸ್ಸು ಬೆಂಬಲ ನೀಡಿದ್ದರಿಂದ ಅವರು ಶೀಘ್ರವಾಗಿ ಗುಣಮುಖರಾದರು.ಕೊರೊನಾ ಹಬ್ಬುವಿಕೆ ಹೆಚ್ಚುವುದಕ್ಕೋ, ಕ್ರಿಸ್ಮಸ್ ಆಸುಪಾಸಿನ ತೀವ್ರ ನಿರ್ಬಂಧಕ್ಕೋ ಕಳೆದ ವರ್ಷದ ಡಿಸೆಂಬರ್ ಅನ್ನು ನೆನಪಿಡಬಹುದಾದರೂ ಯು.ಕೆ.ಯ ಕೋವಿಡ್ ಕಥನದಲ್ಲಿ ಚಾರಿತ್ರಿಕ ಎಂದು ಗುರುತಿಸಲ್ಪಡುವ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾದದ್ದು ಡಿಸೆಂಬರ್‌ನಲ್ಲಿಯೇ. ವೃದ್ಧರಿಗೂ ಇನ್ನೊಂದು ಕಾಯಿಲೆಯನ್ನು ಇಟ್ಟುಕೊಂಡು ಕೊರೊ ನಾಗೆ ಸುಲಭವಾಗಿ ಬಲಿಯಾಗುವ ಸಾಧ್ಯತೆ ಇರುವವರಿಗೂ ಆದ್ಯತೆಯಲ್ಲಿ ಲಸಿಕೆ ಲಭ್ಯವಾಯಿತು. ಮತ್ತೆ ಅಂತಹ ಗುಂಪಿನಲ್ಲಿ ಸೆರಾಳ ತಾಯಿಯೂ ಇದ್ದುದರಿಂದ ಆಕೆ ಡಿಸೆಂಬರಿನಲ್ಲಿಯೇ ವ್ಯಾಕ್ಸಿನ್ ಪಡೆಯುವಂತಾಯಿತು.
ಲಸಿಕೆ ಪಡೆದ ಕಾರಣಕ್ಕೆ ಸುರಕ್ಷಿತಳಾಗಿರುವ ತಾಯಿಯನ್ನು ಸೆರಾ, ಗ್ಯಾರಿಯರು ಮತ್ತೆ ಕೂಡಿದರು. ಒಂಬತ್ತು ತಿಂಗಳುಗಳ ಕ್ಯಾರವನ್ ವಾಸ ಮುಗಿಸಿದರು. ಒಂಬತ್ತು ತಿಂಗಳುಗಳ ಅನಂತರ ತಾಯಿಯನ್ನು ಮತ್ತೆ ಅಪ್ಪಿಕೊಳ್ಳುವುದು ಸಾಧ್ಯ ಆದದ್ದು ಮತ್ತು ತನ್ನ ಮನೆಯಲ್ಲಿ ಎಂದಿನ ಮೆತ್ತಗಿನ ಹಾಸಿಗೆಯಲ್ಲಿ ವಿರಮಿಸುವುದು ಸಾಧ್ಯವಾದದ್ದು 2021ರ ಅತ್ಯಂತ ಬೆಲೆಬಾಳುವ ಉಡುಗೊರೆ ಎಂದು ಸೆರಾ ತಿಳಿಯುತ್ತಾಳೆ.ವೃದ್ಧ ತಂದೆತಾಯಿಯರು ತಮ್ಮದೇ ಮನೆಯಲ್ಲಿ ಒಂಟಿಯಾಗಿ ಇರುವುದು ಅಥವಾ ವೃದ್ಧಾಶ್ರಮಕ್ಕೆ ವಾಸ್ತವ್ಯ ಬದಲಿಸಿರುವುದು, ಮಕ್ಕಳು ವಿದ್ಯಾಭ್ಯಾಸ ಹಾಗೂ ದುಡಿಮೆಗೆ ಬೇರೆ ಊರು ಮನೆಗಳಲ್ಲಿ ಇರುವುದು , ವರ್ಷದಲ್ಲಿ ಕೆಲವು ಸಲ ಹೆತ್ತವರನ್ನು ಭೇಟಿಯಾಗುವುದು ಅಥವಾ ಆಗದಿರುವುದು ಮತ್ತೆ ಕ್ರಿಸ್ಮಸ್ ಸಮಯಕ್ಕೆ ಇವರೆಲ್ಲ ಬೆರೆಯುವುದು ಇಲ್ಲಿ ಸಾಮಾನ್ಯವಾದ ವಿಷಯ. ಆದರೆ ವೃದ್ಧ ತಂದೆ ತಾಯಿಯರ ಜತೆಗೆ ಆಸರೆಯಾಗಿ ಮಕ್ಕಳು ಇರುವುದು ಮತ್ತೆ ಆ ಮಕ್ಕಳು ಹೆತ್ತವರ ಆರೋಗ್ಯ ಆಯುಷ್ಯವನ್ನು ಗಮನದಲ್ಲಿಟ್ಟು ಇಂತಹ ಅಪೂರ್ವ ವಿಶಿಷ್ಟ ನಿರ್ಧಾರ ತೆಗೆದುಕೊಳ್ಳುವುದು ಪಾಲಿಸುವುದು, ಇಲ್ಲಿ ಎಂದರೇನು, ಎಲ್ಲಿಯೇ ನಡೆದರೂ ಯಾವ ಕಾಲದಲ್ಲಿಯೇ ಆದರೂ ಆಪ್ತ ಆದ್ರì ಭಾವನಾತ್ಮಕ ಸಂಗತಿಯೇ.
ಕೋವಿಡ್ ಕಾಲದಲ್ಲಿ ಹುಟ್ಟಿಕೊಂಡ ಕೊನೆಯಾದ ಇನ್ನೂ ನಡೆಯುತ್ತಿರುವ, ನಗು ಸಮಾಧಾನಗಳ ಅಂತ್ಯವನ್ನು ಹುಡುಕುತ್ತ ಹೋರಾಡುತ್ತಿರುವ ಸಾವಿರ ಲಕ್ಷ ಕತೆಗಳು ಇಲ್ಲಿವೆ. ಮತ್ತೆ ಅಂತಹ ಕತೆಗಳ ಕಂತೆಯಲ್ಲಿ ಸೆರಾ ಗ್ಯಾರಿಯರದೂ ಈಗ ಸೇರಿಕೊಂಡಿದೆ.