Advertisement

ಒಂದು ಟೂರಿನ ಕತೆ

06:45 AM Sep 29, 2017 | |

ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡಿದೆ….’ ಈ ಸಾಲುಗಳನ್ನು ಕೇಳಿದಾಗಲೆಲ್ಲ ನಮಗೆಲ್ಲರಿಗೂ ನೆನಪಿಗೆ ಬರುವುದೇ ಕರ್ನಾಟಕದ ಚಿತ್ರದುರ್ಗದ ಕಲ್ಲಿನ ಕೋಟೆ. ಒಮ್ಮೆ ಅಲ್ಲಿಗೆ ಭೇಟಿ ಇತ್ತವರು ನಿಜಕ್ಕೂ ಪುಣ್ಯವಂತರು. ಅಷ್ಟು ಅದ್ಭುತವಾಗಿದೆ ಆ ಕೋಟೆ. ಸುಮಾರು 2500 ಎಕರೆ ಪ್ರದೇಶದಲ್ಲಿರುವ ಈ ಕೋಟೆ ಬಹಳ ವಿಶಾಲ ಮತ್ತು ಅತೀ ಸುಂದರವಾದುದು. ಅಂತಹ ಕೋಟೆಗೆ ನಾನೊಮ್ಮೆ ಭೇಟಿಯನ್ನಿತ್ತೆ ಎಂದರೆ ಅದು ನನ್ನ ಭಾಗ್ಯವೇ ಸರಿ.
 
ಚಿತ್ರದುರ್ಗ ಬಳಿಯ ಸಾಣೇಹಳ್ಳಿ ಇರುವ ಶ್ರೀಶ್ಯಾಮನೂರು ಶಿವಶಂಕರಪ್ಪ ರಂಗಮಂದಿರದಲ್ಲಿ ನಾಟಕ ಪ್ರದರ್ಶನಕ್ಕಾಗಿ ತೆರಳಿದ್ದ ನಮ್ಮ ಮೂವತ್ತು ಮಂದಿಯ ಆಕರಂ ತಂಡ ಅಲ್ಲಿಂದ ಪ್ರಯಾಣ ಬೆಳೆಸಿದ್ದೇ ಅಲ್ಲಿಂದ ಸುಮಾರು ಒಂದೂವರೆ ಗಂಟೆ ದೂರದ ಚಿತ್ರದುರ್ಗದ ಕಲ್ಲಿನ ಕೋಟೆಯತ್ತ. ಅಲ್ಲಿಗೆ ಮೊದಲು ಕಾಲಿಟ್ಟಾಗಲೇ ಕಾಣುವುದು ಅತೀ ಎತ್ತರದ ಕಲ್ಲಿನ ಗೋಡೆ. ಅದರಲ್ಲಿ ಕೆಲವೊಂದು ಚಿತ್ರಬರಹಗಳು ಆಗ ಶತ್ರು ಸೈನಿಕರ ದಾರಿ ತಪ್ಪಿಸಲು ಅವುಗಳನ್ನು ಬಿಡಿಸಲಾಗಿತ್ತಂತೆ. ಅದರ ಪಕ್ಕದಲ್ಲಿರುವುದೇ ಬಾವಿ. ಎಂಥದೇ ಬರಗಾಲ ಬಂದರೂ ಆ ಬಾವಿಯಲ್ಲಿ ನೀರು ಸದಾ ಇರುತ್ತಿತ್ತಂತೆ.ಎದುರಲ್ಲೆ ದೊಡ್ಡ ಕಲ್ಲಿನಿಂದ ನಿರ್ಮಿಸಿದ ಒಂದು ದೊಡ್ಡ ಹೊಂಡ. ಅದನ್ನು ಅಲ್ಲಿದ್ದ ಆನೆಗಳಿಗೆ ನೀರು ಕುಡಿಯಲು ನಿರ್ಮಿಸಿದ್ದರಂತೆ. ನಂತರ ಅಲ್ಲಿಂದ ಮುಂದೆ ಹೋದಂತೆಲ್ಲ ಬರೀ ಕಲ್ಲಿನ ಗೋಡೆ. ಎಂತಹ ಬಿಸಿಲೇ ಇದ್ದರು ಕೂಡ ಒಮ್ಮೆ ಆ ಕಲ್ಲಿಗೆ ಒರಗಿ ನಿಂತರೆ ಬಹಳ ತಂಪಾದ ಅನುಭವ. ಹಾಗೆಯೇ ಆ ಕಲ್ಲುಗಳಿಗೆ ಎಂತಹ ಬಂದೂಕು, ತೋಪುಗಳಿಂದ ಹೊಡೆದರೂ ಯಾವುದೇ ತೊಂದರೆ ಆಗುವುದಿಲ್ಲವಂತೆ. ಅದಕ್ಕಾಗಿಯೇ ಅದನ್ನು “ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ’ ಎನ್ನುತ್ತಾರೆ. ಹತ್ತುತ್ತಾ ಹೋದಂತೆ ಅಲ್ಲಿ ಬೇರೆ ಬೇರೆ ವಿಶೇಷತೆಗಳು ಕಣ್ಣಿಗೆ ಸಿಗುತ್ತಿತ್ತು. ನಾಲ್ಕು ದೊಡ್ಡ ಮದ್ದು ಅರೆಯುವ ಕಲ್ಲುಗಳು. ಶಸ್ತ್ರಾಸ್ತ್ರಗಳಿಗೆ ಬೇಕಾದ ಗುಂಡಿನ ಮದ್ದನ್ನು ಕೋಣಗಳನ್ನು ಬಳಸಿ ಗಾಣದ ಮೂಲಕ ಅರೆಯುತ್ತಿದ್ದರಂತೆ. ಅದರ ಪಕ್ಕದಲ್ಲೇ ಇರುವ ಮಣ್ಣಿನ ಗೋಡೆಗಳು. ಅವು ಅಷ್ಟು ಹಳೆಯದಾದರೂ ಇನ್ನೂ ಪೂರ್ಣವಾಗಿ ಧ್ವಂಸವಾಗದೆ ಹಾಗೇ ಉಳಿದಿವೆ. ಅದಕ್ಕೆ ಕಾರಣವೆಂದರೆ, ಅವುಗಳನ್ನು ಕಟ್ಟಲು ಬಳಸಿರುವ ವಸ್ತುಗಳು. ಬಗೆಬಗೆ ರೀತಿಯ ಮಣ್ಣು, ಸೆಗಣಿ, ಬೆಲ್ಲ ಹೀಗೆ ನಾನಾ ವಸ್ತುಗಳನ್ನು ಬಳಸಿ ಕಟ್ಟಿದ್ದರಿಂದ ಅದು ಇನ್ನೂ ಧ್ವಂಸವಾಗದೆ ಹಾಗೆಯೇ ಉಳಿದಿರುವುದು.

Advertisement

ಅಲ್ಲಿಂದ ಇನ್ನೂ ಮುಂದೆ ಹೋದಂತೆ ಹಲವಾರು ದೇವಸ್ಥಾನಗಳು ಕೂಡ ಕಾಣಸಿಗುತ್ತದೆ. ಆ ಕೋಟೆ ಒಳಭಾಗದಲ್ಲಿ ಹಲವಾರು ದೇವಸ್ಥಾನಗಳಿದ್ದು ಅಲ್ಲಿ ಪೂಜಾ ಕೈಂಕರ್ಯಗಳು ಯಾವಾಗಲೂ ನಡೆಯುತ್ತದೆ. ಹಬ್ಬ ಹರಿದಿನಗಳಲ್ಲಿ ಎಲ್ಲಾ ದೇವಸ್ಥಾನಗಳನ್ನು ಸುಂದರವಾಗಿ ಅಲಂಕರಿಸಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಾಗೆಯೇ ನಾವು ಇನ್ನೊಂದು ವಿಶೇಷತೆಯನ್ನೂ ಕಂಡೆವು. ಅದೆಂದರೆ, ಅಲ್ಲಿ ಇರುವ ಒಂದು ಕಲ್ಲಿನ ಕೋಟೆಯನ್ನು ಈಗ ಅಲ್ಲಿಗೆ ಬರುವ ಪ್ರವಾಸಿಗರಿಗಾಗಿ ಕ್ಯಾಂಟೀನ್‌ ಆಗಿ ಮಾರ್ಪಡಿಸಲಾಗಿದೆ.

ಚಿತ್ರದುರ್ಗವನ್ನು ಬೇರೆ ಬೇರೆ ರಾಜರ ಆಳ್ವಿಕೆಯ ಸಮಯದಲ್ಲಿ ಅದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಿದ್ದರಂತೆ. ಕೋಟೆಯ ಸುತ್ತ ಬಹಳಷ್ಟು ಕೆರೆಗಳಿದ್ದು ಯಾವುದೇ ರೀತಿಯ ಬರಗಾಲ ಇದ್ದರೂ ಈ ಕೆರೆಗಳಲ್ಲಿ ಇದ್ದ ನೀರು ಎಲ್ಲೆಡೆ ಪೂರೈಕೆಗೊಳ್ಳುತ್ತಿತ್ತು. ಆಗಿನ ಕಾಲದಲ್ಲಿಯೇ ಅಂದಿನ ರಾಜರು ಇಂಗು ಗುಂಡಿಯ ಬಗ್ಗೆ ಯೋಚಿಸಿ ಅಂತಹ ಗುಂಡಿಗಳನ್ನೂ ಕೂಡ ನಿರ್ಮಿಸಿದ್ದರಂತೆ. ಅದರಲ್ಲಿ ಮುಖ್ಯವಾದ ಕೆರೆಗಳೆಂದರೆ  ಕೆರೆ, ಅಕ್ಕ ತಂಗಿ ಕೆರೆ, ಸಿಹಿ ನೀರಿನ ಕೆರೆ ಇತ್ಯಾದಿ. ಇದರ ವಿಶೇಷತೆ ಏನೆಂದರೆ,ಕೆರೆಯಿಂದ ಹಿಡಿದು ಸಿಹಿನೀರಿನ ಕೆರೆಗಳ ಮೂಲಕವೂ ನೀರು ಶುದ್ಧಗೊಂಡು ಕೊನೆಗೆ ಅದನ್ನು ನಗರಕ್ಕೆ ಪೂರೈಸುತ್ತಿದ್ದರು. ಅಲ್ಲಿಯ ಒಂದು ಕೆರೆಗೆ ಅಕ್ಕ ತಂಗಿ ಕೆರೆ ಎಂದು ಯಾಕೆ ಕರೆಯುತ್ತಾರೆ ಎಂದರೆ ಅಲ್ಲಿ ಆಳ್ವಿಕೆ ನಡೆಸುತ್ತಿದ್ದ ಒಬ್ಬ ರಾಜನನ್ನು ಶತ್ರು ಸೈನಿಕರು ಮೋಸದಿಂದ ಸೋಲಿಸಿ ಕೊಂದರಂತೆ. ಆ ರಾಜರ ಇಬ್ಬರು ಹೆಂಡತಿಯರೂ ಕೂಡ ಮನನೊಂದು ಕೆರೆ ಹಾರಿ ಪ್ರಾಣ ಬಿಟ್ಟರಂತೆ. ಅದಕ್ಕಾಗಿಯೇ ಅದನ್ನು ಅಕ್ಕ ತಂಗಿ ಕೆರೆ ಎನ್ನುತ್ತಾರೆ. ನಂತರ ಆ ನೀರನ್ನು ಯಾರೂ ಬಳಸಲಿಲ್ಲ. ಅಲ್ಲಿ ಕಲ್ಲಿನಿಂದ ನಿರ್ಮಿಸಿದ ಇನ್ನೊಂದು ದೊಡ್ಡ ಹೊಂಡದಲ್ಲಿ ಸಾವಿರಾರು ಲೀಟರ್‌ಗಳಷ್ಟು ತುಪ್ಪ ತುಂಬಿಸಿ ಇಟ್ಟಿದ್ದರಂತೆ. ಆ ತುಪ್ಪ ಕೋಟೆಯಲ್ಲಿ ನೆಲೆಸಿದ್ದ ಎಲ್ಲಾ ರಾಜ ಹಾಗೂ ಸೈನಿಕ ಕುಟುಂಬಕ್ಕೂ ಅದನ್ನೇ ಬಳಸುತ್ತಿದ್ದರು. ಅಷ್ಟೇ ಅಲ್ಲದೆ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳು ಯಾವುದೂ ತುಕ್ಕು ಹಿಡಿಯಬಾರದೆಂದು ಅದಕ್ಕೆ ಲೇಪಿಸುತ್ತಿದ್ದರಂತೆ. 

ಅಲ್ಲಿ ಅತೀ ಎತ್ತರದ ಕಲ್ಲು ಬಂಡೆಗಳಿದ್ದು ಸೈನಿಕರು ಅದರ ಮೇಲೆಯೇ ನಿಂತು ಕೋಟೆ ಕಾಯುತ್ತಿದ್ದರು. ಕೋಟೆಯ ಮೇಲೆ ನಿಂತಾಗ ಅವರಿಗೆ ಎಷ್ಟೇ ದೂರದಿಂದ ಶತ್ರು ಸೈನಿಕರು ಬಂದರೂ ಗೊತ್ತಾಗಿಬಿಡುತ್ತಿತ್ತು. ಆಗ ಅವರಲ್ಲಿದ್ದ ಕಹಳೆಯನ್ನು ಜೋರಾಗಿ ಊದಿ ಎಲ್ಲಾ ಸೈನಿಕರಿಗೆ ವಿಷಯ ತಿಳಿಸಲಾಗುತ್ತಿ¤ತ್ತು.ಅಲ್ಲಿ ಸೈನಿಕರು ವಾಸವಿದ್ದರು ಎಂಬುದಕ್ಕೆ ಸಾಕ್ಷಿಯೇ ಅಲ್ಲಿನ ಕಲ್ಲು ಬಂಡೆಗಳ ಮೇಲೆ ಕೆತ್ತಿರುವ ರೇಖೆಗಳು. ಜೋರಾಗಿ ಮಳೆ ಸುರಿದಾಗ ಆ ನೀರು ತಮ್ಮ ತಲೆಯ ಮೇಲೆ ಸುರಿಯದಿರಲಿ ಎಂಬ ಕಾರಣಕ್ಕಾಗಿ ಆ ರೇಖೆಗಳನ್ನು ಕೆತ್ತಿ ನೀರು ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದರು. ನಮ್ಮ ಮಂಗಳೂರಿನ ಕಡೆ ಮಳೆ ನೀರು ಹೋಗಲು ಮನೆಯ ತಾರಸಿಯ ಕೆಳಗೆ ದಂಬೆ ಕಟ್ಟುತ್ತಾರಲ್ಲ? ಹಾಗೆಯೇ. ಆಗ ನಮಗೆ ಅನಿಸಿದ್ದು ಒಂದೇ… ಎಂಥ ಬುದ್ಧಿವಂತರು ಆಗಿನ ಕಾಲದ ಸೈನಿಕರು ಎಂದು. ನಾವು ಈಗ ಕಂಡುಹುಡುಕಿದ ಕೆಲವು ಮಾರ್ಗಗಳನ್ನು ಅವರು ಆ ಕಾಲದಲ್ಲೇ ಹುಡುಕಿಕೊಂಡಿದ್ದರು.

ಅಲ್ಲಿಂದ ಮುಂದೆ ತೆರಳಿದಾಗ ಸಿಕ್ಕಿದ್ದೇ ಐತಿಹಾಸಿಕ ಧೀರೆ, ಹಲವಾರು ಸೈನಿಕರ ಮಾರಣಹೋಮ ಮಾಡಿದ ಓಬ್ಬವ್ವನ ಕಿಂಡಿ. ಒಬ್ಬ ಸಾಮಾನ್ಯ ಸೈನಿಕನ (ಮದಕರಿನಾಯಕ) ಹೆಂಡತಿಯಾದ ಓಬ್ಬವ್ವ ಎಷ್ಟರ ಮಟ್ಟಿಗೆ ಧೈರ್ಯವಂತೆಯಾಗಿದ್ದಳು ಎಂಬ ಸಾಹಸಗಾಥೆ ಕೇಳಿದಾಗ ನಿಜವಾಗಲು ಮೈ ರೋಮಾಂಚನವಾಗುತ್ತದೆ. ನಾವು ಕೂಡ ಅದರ ಒಳಗೆ ನುಗ್ಗಿ ಕಿಂಡಿಯ ಮೂಲಕ ಹೊರಬಂದು ಇನ್ನು ಕೆಲವರು ಒನಕೆ ಓಬ್ಬವ್ವನನಂತೆ ಒನಕೆಯ ಬದಲು ಕೊಡೆ ಹಿಡಿದುಕೊಂಡು ನಿಂತಿದ್ದೂ ಆಯಿತು. ಅಲ್ಲಿಂದ ಮುಂದೆ ಹೋದಾಗ ನಾವು ಒಂದು ಎತ್ತರದ ಬೆಟ್ಟ ಕಂಡೆವು. ಅದು ಯಾವುದು ಎಂದು ಕೇಳಿದಿರಾ? ಅದೇ “ನಾಗರಹಾವು’ ಚಿತ್ರದಲ್ಲಿ ವಿಷ್ಣುವರ್ಧನ್‌ “ಮೇಷ್ಟ್ರೇ’ ಎಂದು ಕೂಗಿ ಸಾಯಲು ಹೊರಟಿದ್ದ ಬೆಟ್ಟ. “ರಾಮಾಚಾರಿ’ ಚಿತ್ರಲ್ಲಿ ಯಶ್‌ ಸಾಯಲು ಹೊರಟಿದ್ದ ಬೆಟ್ಟ. ಆ ಬೆಟ್ಟ ಹತ್ತಲು ಸುಸ್ತಾಗಿ ಕೆಳಗೆ ನಿಂತು ರಾಮಾಚಾರಿ, ಮಾರ್ಗಿ, ಮೇಷ್ಟ್ರೇ ಎಂದೆಲ್ಲಾ ಕೂಗಲು ಶುರುಮಾಡಿದೆವು. ಬೆಟ್ಟದ ಮೇಲೆ ಇದ್ದವರು ಅದಕ್ಕೆ ಪ್ರತ್ಯುತ್ತರವನ್ನೂ ನೀಡಿದರು. ಬೆಟ್ಟ ಹತ್ತುವುದು ಸುಲಭ ಆದರೆ ಇಳಿಯುವುದು ಕಷ್ಟ. ಬೆಟ್ಟದ ದಾರಿಯಲ್ಲಿ ಹೆಜ್ಜೆ ಗುರುತುಗಳಿದ್ದು ಅದನ್ನು ಕುದುರೆಹೆಜ್ಜೆ ಎಂದೂ ಕರೆಯುತ್ತಾರೆ.

Advertisement

ಇದೆಲ್ಲವನ್ನೂ ಕಣ್ಣಾರೆ ಕಂಡು ಅದರೊಂದಿಗೆ ಒಂದು ಸೆಲ್ಫಿ ತೆಗೆಯದ್ದಿದ್ದರೆ ಹೇಗೆ? ಸೆಲ್ಫಿ ತೆಗೆದು, ಗ್ರೂಪ್‌ ಫೊಟೋ ಕ್ಲಿಕ್ಕಿಸಿ ಅಲ್ಲಿಂದ ಕೆಳಗಿಳಿದಾಗ ನಮಗೆ ಒಂದು ಆಶ್ಚರ್ಯ ಕಾದಿತ್ತು. ನಮ್ಮನ್ನು ರಂಜಿಸಲು ಅಲ್ಲಿಗೆ ಕೋತಿರಾಜ್‌ ಅಲಿಯಾಸ್‌ ಜ್ಯೋತಿರಾಜ್‌ ಇದ್ದರು. ಅವರು ತಮ್ಮ ಸಾಹಸ ಪ್ರದರ್ಶನವನ್ನು ತೋರಿಸಿದರು. ಅಲ್ಲಿದ್ದ ಎಲ್ಲ ಕಲ್ಲಿನ ಗೋಡೆಗಳನ್ನು ಕ್ಷಣಾರ್ಧದಲ್ಲಿ ಚಕಚಕ ಅಂತ ಹತ್ತಿ ಬಿಟ್ಟರು. ನಮಗೆಲ್ಲ ಅದನ್ನು ಕಂಡು ನಿಜವಾಗಲೂ ಮೈ ಜುಮ್ಮೆನ್ನಿಸಿತ್ತು. ಅವರ ಜೀವನದ ಎಷ್ಟೋ ಅಂಶಗಳನ್ನು ಕೇಳಿದರೆ ಬೆಚ್ಚಿಬೀಳಿಸುತ್ತವೆ. ಸುಮಾರು 27 ಮಕ್ಕಳನ್ನು ಅವರು ದತ್ತು ಪಡೆದಿದ್ದು ಅದರಲ್ಲಿ 14 ಮಕ್ಕಳು ಸೈನ್ಯ ಸೇರಿದ್ದಾರಂತೆ. ಅವರು “ಹಡೆದವರೆಲ್ಲಾ ತಾಯಿಯಲ್ಲ, ಮಕ್ಕಳನ್ನು ನೋಡಿಕೊಂಡವರೂ ತಾಯಿಯೇ’ ಅಂದರು. ಎಷ್ಟೋ ಬಾರಿ ಅವರು ಕಟ್ಟಡದಿಂದ ಬಿದ್ದು ಕೈಕಾಲು ಮುರಿದುಕೊಂಡಿದ್ದಾರಂತೆ. ಅದನ್ನೇ ಅವರು “ನಾನು ಮೈ ಮುರಿದುಕೊಂಡಿದ್ದೇನೆ ಮನಸನ್ನಲ್ಲ’ ಅಂತ ಅಂದಾಗ ಕರತಾಡನ ಮೊಳಗಿತ್ತು. ಬರುವ 2020 ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅವರು ಸಜ್ಜಾಗುತ್ತಿದ್ದಾರಂತೆ. ಅವರಿಗೆ ಶುಭಹಾರೈಸಿ ಬೀಳ್ಕೊಟ್ಟೆವು. ಇದೆಲ್ಲದರ ನಂತರ ಅಲ್ಲಿಂದ ಹೊರಡಲು ಸಿದ್ಧರಾದೆವು. ಭಾರವಾದ ಮನಸ್ಸಿನಿಂದ ಇನ್ನು ಯಾವಾಗ ಮತ್ತೆ ಈ ಕೋಟೆಗೆ ಬರುತ್ತೀವೋ ಎಂದುಕೊಳುತ್ತ ಅಲ್ಲಿಂದ ಹೊರಟೆವು.

ಚಿತ್ರದುರ್ಗ ಕಲ್ಲಿನ ಕೋಟೆಯನ್ನು ಸುತ್ತಿದ್ದು ಒಂದು ಅದ್ಭುತವಾದ ಅನುಭವ. ಮತ್ತೂಮ್ಮೆ ಅವಕಾಶ ಸಿಕ್ಕರೆ ಮತ್ತೆ ಆ ಇಡೀ ಕೋಟೆಯನ್ನು ಸುತ್ತಲು ಆಸೆ ಇದೆ. ನೀವು ಕೂಡ ಸಾಧ್ಯವಾದರೆ ಆ ಕೋಟೆಯನ್ನೊಮ್ಮೆ ಸುತ್ತಿ ಬನ್ನಿ.

– ಪಿನಾಕಿನಿ ಪಿ. ಶೆಟ್ಟಿ 
ಆಕರಂ ನಾಟಕ ತಂಡ 
ಸಂತ ಆಗ್ನೆಸ್‌ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next