Advertisement

ಕಣ್ಣುಗಳಿಗೆ ಹಬ್ಬ ನೀಡುವ ಪಟ್ಟದಕಲ್ಲಿನ ಸೊಬಗು

08:38 PM Apr 17, 2021 | Team Udayavani |

ಪಟ್ಟದಕಲ್ಲು ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಪರಂಪರೆ ತಾಣವಾಗಿದ್ದು, ತಾಲೂಕು ಕೇಂದ್ರ ಬಾದಾಮಿಯಿಂದ 21 ಕಿಮೀ ದೂರದಲ್ಲಿದೆ. ಪಟ್ಟದಕಲ್ಲಿನ ಸ್ಮಾರಕಗಳ ಸಮೂಹವು ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ ಮತ್ತು ಭಾರತದಲ್ಲಿನ ವಿಶ್ವ ಪರಂಪರೆಯ ತಾಣವಾಗಿದ್ದು, ಬಾದಾಮಿ ಮತ್ತು ಐಹೊಳೆ ಚಾಲುಕ್ಯರ ಸಮೂಹಗಳೆಂದು ಕರೆಯಲ್ಪಡುತ್ತದೆ.

Advertisement

ಪಟ್ಟದಕಲ್ಲು ಸ್ಮಾರಕಗಳು ನಾಗರ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಶೈಲಿಗಳನ್ನು ಹೊಂದಿರುವ ಹಿಂದೂ ದೇವಸ್ಥಾನ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿವೆ. ಇದು ಮಲಪ್ರಭಾ ನದಿಯ ದಡದಲ್ಲಿದೆ. ಪಟ್ಟದಕಲ್ಲು ಚಾಲುಕ್ಯರ ರಾಜರುಗಳ ಪಟ್ಟಾಭಿಷೇಕ ನಡೆಯುವ ಸ್ಥಳವಾಗಿದೆ. ಪಟ್ಟದಕಲ್ಲು ಕರ್ನಾಟಕದ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.

ಇತಿಹಾಸದ ಪರಂಪರೆಯಲ್ಲಿ ಶತಮಾನಗಳಿಗೂ ದೀರ್ಘಕಾಲ ಕರ್ನಾಟಕದ ಬಹು ಭಾಗವನ್ನು ತಮ್ಮ ಆಳ್ವಿಕೆಗೊಳಪಡಿಸಿಕೊಂಡು ಸುಭದ್ರ ಆಡಳಿತ ನೀಡಿದ ಚಾಲುಕ್ಯರು ಕಲೆ ಮತ್ತು ವಾಸ್ತು ಶಿಲ್ಪದಲ್ಲಿ ಒಂದು ಹೊಸ ಅಧ್ಯಾಯವನ್ನೇ ಸೃಷ್ಟಿಸಿದರು. ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನ ಶಿಲ್ಪಕಲಾ ದೇವಾಲಯಗಳು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿವೆ.

ಶೈವ ಆರಾಧನೆಯ ಪುಣ್ಯಕ್ಷೇತ್ರ :  

ಇತಿಹಾಸದ ಪುಟಗಳಲ್ಲಿ ಉಲ್ಲೇಖಗೊಂಡಿರುವಂತೆ ಪಟ್ಟದಕಲ್ಲು ಶೈವ ಆರಾಧನೆಯ ಪುಣ್ಯಕ್ಷೇತ್ರ, ‘ಸಿಂಗರಾಜನ ಪುರಾಣ’ ಮತ್ತು ‘ಹಮ್ಮೀರ’ ಕಾವ್ಯಗಳಲ್ಲಿ ಪಟ್ಟದಕಲ್ಲಿನ ಪ್ರಸಿದ್ಧ ಮನೆತನಗಳಾದ ನಂದ, ಮೌರ್ಯ, ಕದಂಬ ಹಾಗೂ ಚಾಲುಕ್ಯ ರಾಜರನ್ನು ಪಟ್ಟಾಭಿಷೇಕ ಮಾಡಿದ್ದರಿಂದ ‘ಪಟ್ಟದಕಲ್ಲು’ ಹೆಸರು ಬಂತೆಂಬ ಉಲ್ಲೇಖವಿದೆ. ಶಾಸನಗಳಲ್ಲಿ ‘ಕಿಸುವೊಳಲ್‌’ ಎಂದೂ ಇದೆ. ಸಾತ್ಯಕವಾಗಿ ಹೀಗೆಂದರೆ ‘ಕೆಂಪುಪಟ್ಟಣ’ ಎಂದರ್ಥ.

Advertisement

ಎರಡನೆಯ ವಿಕ್ರಮಾದಿತ್ಯ ರಾಂಚಿಯ ಮೇಲೆ ಮೂರು ಬಾರಿ ದಾಳಿ ಮಾಡಿ ಪಲ್ಲವರ ಮೇಲೆ ಗಳಿಸಿದ ವಿಜಯದ ಸಾಂಕೇತವಾಗಿ ನಿರ್ಮಾಣಗೊಂಡ ದ್ರಾವಿಡ ಶೈಲಿಯ ವಿರೂಪಾಕ್ಷ ದೇವಾಲಯ ಪ್ರಗತಿ ಮಾರ್ಗದ ಕಲಾ ನೈಪುಣ್ಯತೆಗೆ ಉತ್ತಮ ನಿದರ್ಶನ.

ಏಕಶಿಲಾ ನಂದಿ :

ಈ ದೇವಾಲಯದ ಪ್ರತ್ಯೇಕ ಮಂಟಪವೊಂದರಲ್ಲಿ ಎಂಟು ಅಡಿ ಎತ್ತರದ ಆಕರ್ಷಕ ಏಕಶಿಲಾ ನಂದಿ ಈಗಲೂ ಪೂಜಿಸಲ್ಪಡುತ್ತಿದೆ. ಮತ್ತೊಂದು ಪ್ರಮುಖ ಮಲ್ಲಿಕಾಜರ್ನನ ದೇವಾಲಯದ ವಿನ್ಯಾಸ ಗಾತ್ರದಲ್ಲಿ ಸಣ್ಣದಿದೆ.

ಒಳಭಾಗದ ನವರಂಗದಲ್ಲಿ ಕಂಬಗಳ ಮೇಲೆಲ್ಲ ರಾಮಾಯಣ, ಮಹಾಭಾರತ, ಅಂದಿನ ಕಾಲದ ಸಾಮಾಜಿಕ ಸ್ಥಿತಿ ಚಿತ್ರಿತ ಶಿಲ್ಪಗಳಿವೆ.

ಗಳಗನಾಥ ದೇವಾಲಯಗಳು ಅತ್ಯಂತ ಪ್ರಾಚೀನ ಮತ್ತು ಸುಂದರ ದೇವಾಲಯಗಳು. ದೇವಾಲಯಗಳಲ್ಲಿನ ಮತ್ತೊಂದು ವಿಶೇಷತೆ ಎಂದರೆ ಕಲಾತ್ಮಕ ಕಿಟಕಿಗಳು. ಕಟ್ಟಡದ ಹೊರಗೋಡೆಗಳಲ್ಲಿನ ಉಬ್ಬುಶಿಲ್ಪಗಳಂತೆ ಪ್ರತಿಯೊಂದು ಕಿಟಕಿಗಳಲ್ಲೂ ಶಿಲ್ಪಿಗಳ ಕೈಚಳಕದ ವಿಶಿಷ್ಟತೆ ಗೋಚರವಾಗುತ್ತದೆ. ಅಶೋಕ ಚಕ್ರದಂತಹ ಅಡ್ಡಗೆರೆಯ, ಒಂದಕ್ಕೊಂದು ಥಳಕು ಹಾಕಿಕೊಂಡ ವೃತ್ತಗಳ. ಸಮಾನಾಂತರ ರೇಖೆಯ ಕಿಟಕಿಗಳು ಭಿನ್ನತೆಯ ಪ್ರಮಾಣಬದ್ಧ ಅಳತೆಯಲ್ಲಿವೆ.

ಗಾಳಿ ಬೆಳಕಿನ ಮತ್ತು ಸಂಭಾಂಗಣದಲ್ಲಿಯ ಚಟುವಟಿಕೆಗಳು ಹೊರಗೆ ಕಾಣದಂಥ ವ್ಯವಸ್ಥೆಗೆ ರೂಪಿತಗೊಂಮಡ ಈ ಕಲಾತ್ಮಕ ಕಿಟಕಿಗಳು ಇಂದಿಗೂ ಒಂದೂ ಮುಕ್ಕಾಗದೆ ಭದ್ರವಾಗಿವೆ. ಪಟ್ಟದಕಲ್ಲಿನಲ್ಲಿ ಎಲ್ಲ ದೇವಾಲಯಗಳು ಒತ್ತಟ್ಟಿಗೇ ಇರುವುದರಿಂದ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಸ್ವಲ್ಪವೂ ಬೇಜಾರೆನಿಸುವುದಿಲ್ಲ.

ಸುಂದರ ಪ್ರವಾಸಿ ತಾಣ :  ಪಟ್ಟದಕಲ್ಲು ಸುಂದರವಾದ ಪ್ರವಾಸಿತಾಣ. ನಿತ್ಯ ಸಾವಿರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಕಳೆದ ವರ್ಷ ಕೋವಿಡ್ ಮಹಾಮಾರಿಯಿಂದಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಿತ್ತು, ಆದರೆ, ಕೋವಿಡ್ ಎರಡನೇ ಅಲೆಯ ವಕ್ಕರಿಸಿಕೊಂಡಿದ್ದರ ಪರಿಣಾಮ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

ಬಸ್ ಸೌಲಭ್ಯ : ಬಾಗಲಕೋಟೆಯಿಂದ 21 ಕಿ.ಮೀ ಸಾಗಿದರೆ ಪಟ್ಟದಕಲ್ಲು ಸಿಗುತ್ತದೆ. ಜಿಲ್ಲಾಕೇಂದ್ರದಿಂದ ಬಸ್ ಸೌಲಭ್ಯ ಇದೆ. ಇಲ್ಲವೆ ಸ್ವಂತ ವಾಹನದ ಮೂಲಕವೂ ಇಲ್ಲಿಗೆ ತೆರಳಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next