Advertisement
ಆಷಾಡ ಮಾಸ ಕಳೆದು ಶ್ರಾವಣ ಬಂತೆಂದರೆ ಹಬ್ಬಗಳದ್ದೇ ಸಾಲು ಸಾಲು. ಅದರಲ್ಲಿ ಆರಂಭದ ಸಂಭ್ರಮವೇ “ನಾಗರಪಂಚಮಿ’ಯದ್ದು. ಕುಟುಂಬದ ನೆಮ್ಮದಿ, ಆರೋಗ್ಯ, ಸಂತಾನ ಲಾಭ ಮೊದಲಾದ ಉದ್ದೇಶದಿಂದ ನಾಗರಪಂಚಮಿಗೆ ಸ್ತ್ರೀಯರು ಹೆಚ್ಚು ಆದ್ಯತೆ ನೀಡುತ್ತಾರೆ. ವರ್ಷ ಋತುವಿನ ಶ್ರಾವಣ ಮಾಸದ ತುಂತುರು ಹನಿಯಿಂದ ಭೂಮಿ ತಾಯಿಯು ತನ್ನ ದಾಹವನ್ನು ತೀರಿಸಿಕೊಂಡು, ಮೈ ತುಂಬಾ ಹಸಿರನ್ನುಟ್ಟ ಸುಂದರಿಯಂತೆ ಈ ಹಬ್ಬಕ್ಕೆ ಸಿಂಗಾರಗೊಂಡಿರುತ್ತದೆ.
Related Articles
ಹಿಂದೆ ಪಾಂಡ್ಯ ದೇಶದಲ್ಲಿ ವೇದಶರ್ಮನೆಂಬ ಬ್ರಾಹ್ಮಣನಿದ್ದನು. ಆತನಿಗೆ ಎಂಟು ಗಂಡುಮಕ್ಕಳು ಹಾಗೂ ಒಬ್ಬಳೇ ಮಗಳು. ಅವಳ ಹೆಸರು ಸುಶೀಲೆ. ಒಮ್ಮೆ ಗರುಡ ರಾಜನಿಗೆ ಹೆದರಿ ನಾಗರ ಹಾವೊಂದು ಸುಶೀಲೆಯ ಮನೆಯನ್ನು ಹೊಕ್ಕಿತು. ಸದ್ಗುಣೆಯಾದ ಸುಶೀಲೆ ಆ ಹಾವನ್ನು ಸಲಹಿದಳು. ಸಂತುಷ್ಟಗೊಂಡ ಹಾವು ಪ್ರತಿದಿನ ಒಂದು ತೂಕ ಚಿನ್ನ ತಂದುಕೊಡುತ್ತಿತ್ತು. ಇದರಿಂದ ಮನೆಯ ಬಡತನ ನಿರ್ಮೂಲವಾಯಿತು. ದುರದೃಷ್ಟವಶಾತ್ ಸುಶೀಲೆಯ ಅಣ್ಣಂದಿರಿಗೆ ಹಾವಿನ ವಿಚಾರ ತಿಳಿದು, ಅದನ್ನು ಕೊಲ್ಲಲು ಮುಂದಾಗುತ್ತಾರೆ. ರೋಷಗೊಂಡ ಹಾವು ಎಲ್ಲರನ್ನೂ ಕಚ್ಚಿಬಿಡುತ್ತದೆ.
Advertisement
ಇದರಿಂದ ನೊಂದ ಸುಶೀಲೆ, ಶ್ರೀಮನ್ನಾರಾಯಣನ ಮೊರೆ ಹೋಗುತ್ತಾಳೆ. “ಸರ್ಪರಾಜನೇ, ಸಂಜೀವಿನಿ ರಸ ತಂದು ಬ್ರಾಹ್ಮಣನ ಮಕ್ಕಳನ್ನು ಬದುಕಿಸು’ ಎಂದು ನಾರಾಯಣನ ಸೂಚನೆ ಮೇರೆಗೆ ನಾಗರಾಜನು ಬ್ರಾಹ್ಮಣನ ಪುತ್ರರನ್ನು ಬದುಕಿಸಿ, ಆ ಕನ್ಯೆಗೆ ಅಪರಿಮಿತ ಸಂಪತ್ತು ಕೊಟ್ಟನಂತೆ. ಅಂದಿನಿಂದಲೂ ನಾಗಪೂಜೆಗೆ ವಿಶೇಷ ಮಹತ್ವ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿವಸ ನಾಗ ಪೂಜೆ ಮಾಡಿದರೆ ಸರ್ವಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.
– ಭಾಗ್ಯ ನಂಜುಂಡಸ್ವಾಮಿ