ಅರೇಬಿಯಾದಲ್ಲಿ ಒಬ್ಬ ಶೇಕ್ ಮತ್ತು ಅವನ ಪತ್ನಿ ವಾಸಿಸುತ್ತಿದ್ದರು. ಹಲವು ವರ್ಷ ಕಳೆದರೂ ಆಕೆಗೆ ಮಕ್ಕಳಾಗದ ಕಾರಣ, ಶೇಕ್ ಮತ್ತೂಬ್ಬ ಮಹಿಳೆಯನ್ನು ಮದುವೆಯಾಗುತ್ತಾನೆ. ಎರಡನೇ ಪತ್ನಿಗೆ ಗಂಡು ಮಗು ಹುಟ್ಟುತ್ತದೆ. ಅವನನ್ನು ಶೇಕ್ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ಇದನ್ನೆಲ್ಲ ನೋಡಿದಾಗ ಮೊದಲ ಪತ್ನಿಗೆ ಅಸೂಯೆ ಶುರುವಾಗುತ್ತದೆ.
ಹೇಗಾದರೂ ಮಾಡಿ ಗಂಡನ ಎರಡನೇ ಪತ್ನಿ ಮತ್ತು ಮಗನನ್ನು ಇಲ್ಲವಾಗಿಸಬೇಕು ಎಂದು ಉಪಾಯ ಹೂಡಲು ಶುರುಮಾಡುತ್ತಾಳೆ. ಒಂದು ದಿನ ಶೇಕ್ ದೂರದೂರಿಗೆ ಪ್ರಯಾಣ ಬೆಳೆಸಬೇಕಾಗುತ್ತದೆ. ಪತ್ನಿಯರು ಮತ್ತು ಮಗನನ್ನು ಕರೆದು ಪ್ರಯಾಣದ ವಿಚಾರ ತಿಳಿಸುವ ಶೇಕ್, “ನಾನು ದೂರದ ಊರಿಗೆ ಹೋಗುತ್ತಿದ್ದೇನೆ. ಬಕ್ರೀದ್‌ಗೆ ಮುಂಚೆ ವಾಪಸ್ ಬರುತ್ತೇನೆ. ಬರುವಾಗ ನಿಮಗೆ ಉಡುಗೊರೆಗಳನ್ನೂ ತರುತ್ತೇನೆ,’ ಎಂದು ಹೇಳಿ ಹೊರಡುತ್ತಾನೆ.
ಪತಿ ಮನೆಯಿಂದ ಹೋಗುತ್ತಲೇ ಮೊದಲ ಪತ್ನಿಯು ತನ್ನಲ್ಲಿನ ಮಂತ್ರಶಕ್ತಿ ಪ್ರಯೋಗಿಸಿ, ಎರಡನೇ ಪತ್ನಿ ಮತ್ತು ಮಗನನ್ನು ಕುರಿಯನ್ನಾಗಿ ಬದಲಾಯಿಸಿಬಿಡುತ್ತಾಳೆ. ಇದ್ಯಾವ ವಿಷಯವೂ ಪತಿಗೆ ಗೊತ್ತಿರುವುದಿಲ್ಲ. ಬಕ್ರೀದ್ ಹಬ್ಬ ಸಮೀಪಿಸುತ್ತಿರುವಂತೆ ಮನೆಗೆ ವಾಪಸಾಗುವ ಶೇಕ್, ಮನೆಯಲ್ಲಿ ಮೊದಲ ಪತ್ನಿಯಷ್ಟೇ ಇರುವುದನ್ನು ನೋಡಿ ದಂಗಾಗುತ್ತಾನೆ. 2ನೇ ಪತ್ನಿ-ಮಗ ಎಲ್ಲಿ ಎಂದು ಕೇಳುತ್ತಾನೆ. ದುಷ್ಟ ಪತ್ನಿಯು ಮೊದಲೇ ಯೋಚಿಸಿಟ್ಟ ಉಪಾಯದಂತೆ, “ನೀವು ಬೇರೆ ಊರಿಗೆ ಹೋಗಿದ್ದಾಗ 2ನೇ ಪತ್ನಿಗೆ ಸಾಂಕ್ರಾಮಿಕ ರೋಗವೊಂದು ಬಂದು, ಆಕೆ ಸತ್ತು ಹೋದಳು. ಆಕೆ ಸಾಯುತ್ತಿದ್ದಂತೆ, ಮಗ ಕೂಡ ಮನೆ ಬಿಟ್ಟು ಹೋದ,’ ಎನ್ನುತ್ತಾಳೆ. ಇದನ್ನು ಕೇಳಿ ಶೇಕ್‌ಗೆ ಆಘಾತವಾಗುತ್ತದೆ. ಪ್ರೀತಿಯ ಪತ್ನಿ ಮತ್ತು ಮಗನನ್ನು ಕಳೆದುಕೊಂಡೆನಲ್ಲಾ ಎಂದು ದುಃಖೀತನಾಗುತ್ತಾನೆ. ನಂತರ ಎಲ್ಲ ದೇವರ ಆಟ ಎಂದುಕೊಂಡು ತನ್ನನ್ನು ತಾನು ಸಮಾಧಾನಿಸಿಕೊಂಡು ದಿನ ದೂಡುತ್ತಾನೆ.
ಇದಾದ ಕೆಲವೇ ದಿನಗಳಲ್ಲಿ ಬಕ್ರೀದ್ ಹಬ್ಬ ಬರುತ್ತದೆ. ಬಲಿ ಕೊಡಲು ಕುರಿಯನ್ನು ತರುವಂತೆ ಪತ್ನಿಗೆ ಶೇಕ್ ಸೂಚಿಸುತ್ತಾನೆ. ಕೂಡಲೇ ಆಕೆ ಕುರಿಯಾಗಿ ಬದಲಿಸಿದ ಎರಡನೇ ಪತ್ನಿಯನ್ನು ಕರೆತರುತ್ತಾಳೆ. ಅದನ್ನು ಬಲಿಕೊಡಲೆಂದು ಶೇಕ್ ಮುಂದಾದಾಗ, ಆ ಕುರಿ ಪ್ರೀತಿಯಿಂದ ಶೇಕ್‌ನ ಕಾಲನ್ನು ನೆಕ್ಕಲಾರಂಭಿಸುತ್ತದೆ. ಇದನ್ನು ನೋಡಿ ಮರುಕಪಡುವ ಶೇಕ್, “ಈ ಕುರಿಯನ್ನು ಕೊಲ್ಲೋದು ಬೇಡ.
ಬೇರೊಂದು ಕುರಿಯನ್ನು ತಾ. ಅದನ್ನೇ ಬಲಿಕೊಡೋಣ’ ಎನ್ನುತ್ತಾನೆ. ಕೋಪ ಬಂದರೂ ತೋರಿಸಿಕೊಳ್ಳದ ಮೊದಲ ಪತ್ನಿ ಹೊರಹೋಗಿ, ಕುರಿಯಾಗಿ ಬದಲಾಗಿರುವ ಮಗನನ್ನು ಎಳೆದು ತರುತ್ತಾಳೆ. ಅದು ಕೂಡ ಶೇಕ್‌ನನ್ನು ಕಾಣುತ್ತಲೇ ಓಡಿ ಬಂದು, ಕಾಲನ್ನು ನೆಕ್ಕಲಾರಂಭಿಸುತ್ತದೆ. “ಅರೆ ಏನಾಶ್ಚರ್ಯ? ಈ ಎರಡೂ ಕುರಿಗಳು ಮನುಷ್ಯರಂತೆ ಪ್ರೀತಿ ತೋರಿಸುತ್ತಿವೆ. ಇವುಗಳನ್ನು ಕೊಲ್ಲಲು ಮನಸ್ಸು ಒಪ್ಪುತ್ತಿಲ್ಲ’ ಎನ್ನುತ್ತಾನೆ. ಆಗ ಪತ್ನಿ ಸಿಟ್ಟಿನಿಂದ, “ನೀವು ಹೀಗೇ ಎಲ್ಲ ಕುರಿಗಳನ್ನೂ ಕೊಲ್ಲಲು ನಿರಾಕರಿಸುತ್ತಿದ್ದರೆ, ಬಲಿ ಕೊಡಲು ಸಾಧ್ಯವೇ ಇಲ್ಲ’ ಎಂದು ಗುಡುಗುತ್ತಾಳೆ.
ಅದೇ ಸಮಯಕ್ಕೆ ರಸ್ತೆಯಲ್ಲಿ ಕಟುಕನೊಬ್ಬನ ಪತ್ನಿ ಹೋಗುತ್ತಿರುತ್ತಾಳೆ. ಅವಳಿಗೂ ಕೆಲವೊಂದು ಮಾಂತ್ರಿಕ ಶಕ್ತಿ ಇರುತ್ತದೆ. ಹಾಗಾಗಿ, ಶೇಕ್ ಮನೆಯಲ್ಲಿರುವ ಕುರಿಗಳು ನಿಜವಾದ ಕುರಿಗಳಲ್ಲ. ಅವು ಮನುಷ್ಯರು ಎಂಬುದು ಆಕೆಗೆ ತಿಳಿಯುತ್ತದೆ. ಅವಳು ನೇರವಾಗಿ ಶೇಕ್ ಬಳಿ ಹೋಗಿ, “ನೋಡಪ್ಪಾ ಶೇಕ್, ನೀನು ಬಲಿ ಕೊಡಲು ಹೊರಟಿರುವುದು ಕುರಿಗಳನ್ನಲ್ಲ. ನಿನ್ನ ಎರಡನೇ ಪತ್ನಿ ಮತ್ತು ಮಗನನ್ನು. ನಿನ್ನ ಮೊದಲ ಪತ್ನಿಯು ಅವರಿಬ್ಬರನ್ನೂ ಕುರಿಗಳನ್ನಾಗಿ ಮಾರ್ಪಡಿಸಿದ್ದಾಳೆ’ ಎಂದು ಸತ್ಯ ಹೇಳುತ್ತಾಳೆ.
ಅದಕ್ಕೆ ಶೇಕ್, “ದಯವಿಟ್ಟು ನಿನ್ನ ಶಕ್ತಿ ಬಳಸಿ ನನ್ನ ಪತ್ನಿ ಮತ್ತು ಮಗನನ್ನು ಮತ್ತೆ ಮನುಷ್ಯರನ್ನಾಗಿ ಮಾಡು’ ಎಂದು ಕೇಳಿಕೊಳ್ಳುತ್ತಾನೆ. ಅದರಂತೆಯೇ, ಅವರಿಬ್ಬರೂ ಮನುಷ್ಯರಾಗಿ ಬದಲಾಗುತ್ತಾರೆ. ಕಟುಕನ ಪತ್ನಿಯು ಶೇಕ್‌ನ ಮೊದಲ ಪತ್ನಿಯ ಮೇಲೂ ಶಕ್ತಿ ಪ್ರಯೋಗಿಸಿ, ಆಕೆಯನ್ನು ನಾಯಿಯನ್ನಾಗಿ ಬದಲಿಸುತ್ತಾಳೆ. ನಾಯಿ ಅಲ್ಲಿಂದ ಕಾಲ್ಕಿತ್ತು ಪರಾರಿಯಾಗುತ್ತದೆ. ಶೇಕ್ ತನ್ನ 2ನೇ ಪತ್ನಿ ಮತ್ತು ಮಗನೊಂದಿಗೆ ಸಂತೋಷದಿಂದ ಬಾಳುತ್ತಾನೆ.
– ಹಲೀಮತ್ ಸ ಅದಿಯ