ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ನಡೆಯುವ ಕೌತುಕಗಳು ಒಂದಾ, ಎರಡಾ? ಹಿಂದೆಂದೂ ಕಂಡಿರದಂಥ, ಕೇಳಿರದಂಥ ವಿಸ್ಮಯಗಳು ಅಲ್ಲಿ ಸಂಭವಿಸುತ್ತಲೇ ಇರುತ್ತವೆ. ಅದಕ್ಕೆ ಹೊಸ ಸೇರ್ಪಡೆಯೇ, “ನಕ್ಷತ್ರವೊಂದು ಗ್ರಹವನ್ನು ನುಂಗಿರುವುದು”! ಹೌದು. ಇದೇ ಮೊದಲ ಬಾರಿಗೆ ಅಳಿವಿನಂಚಿನಲ್ಲಿರುವ ನಕ್ಷತ್ರವೊಂದು ಇಡೀ ಗ್ರಹವನ್ನು ನುಂಗುತ್ತಿರುವ ದೃಶ್ಯವನ್ನು ನೋಡಿ ವಿಜ್ಞಾನಿಗಳು ಬೆರಗಾಗಿದ್ದಾರೆ.
ಸೂರ್ಯನಷ್ಟೇ ಗಾತ್ರವಿರುವ ಸಾಯುತ್ತಿದ್ದ ನಕ್ಷತ್ರವೊಂದು ಗುರು ಗ್ರಹದಷ್ಟು ದೊಡ್ಡದಾದ ಗ್ರಹವೊಂದನ್ನು ಕಬಳಿಸಿಬಿಟ್ಟಿದೆ. ಅನಾಮತ್ತಾಗಿ ಗ್ರಹವು ನಕ್ಷತ್ರಕ್ಕೆ ಬಲಿಯಾಗುತ್ತಿರುವ ದೃಶ್ಯವನ್ನು ಮಸ್ಸಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಹಾರ್ವರ್ಡ್ ವಿಶ್ವವಿದ್ಯಾನಿಲಯ ಮತ್ತು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ವೀಕ್ಷಿಸಿದ್ದಾರೆ.
ಖಗೋಳವಿಜ್ಞಾನಿಗಳಿಗೆ ಆರಂಭದಲ್ಲಿ ಈ ವಿದ್ಯಮಾನವು ಬಿಳಿ-ಹಳದಿ ಬಣ್ಣದ ಬೆಳಕಿನ ಸ್ಫೋಟದಂತೆ ಕಂಡಿತ್ತು. ಇದು ಸಂಭವಿಸಿದ್ದು ಸುಮಾರು 12 ಸಾವಿರ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಅಕ್ವಿಲಾ ತಾರಾಪುಂಜದಲ್ಲಿ. 2020ರಲ್ಲೇ ಈ ಘಟನೆ ನಡೆದಿದ್ದರೂ, ವಾಸ್ತವದಲ್ಲಿ ಅಲ್ಲಿ ಆಗಿದ್ದೇನು ಎಂಬುದನ್ನು ತಿಳಿಯಲು ದೀರ್ಘಾವಧಿ ತಗುಲಿತು ಎಂದಿದ್ದಾರೆ ವಿಜ್ಞಾನಿಗಳು.
ಭೂಮಿಗೂ ಅಪಾಯ?
ನಕ್ಷತ್ರವೊಂದು ಗ್ರಹವನ್ನು ನುಂಗುತ್ತದೆ ಎಂದಾದರೆ, ಮುಂದೊಂದು ದಿನ ಭೂಮಿಯೂ ಇಂತಹ ದುರಂತಕ್ಕೆ ಬಲಿಯಾಗಬಹುದೇ ಎಂಬ ಅನುಮಾನ ವಿಜ್ಞಾನಿಗಳನ್ನು ಕಾಡತೊಡಗಿದೆ. ಸೂರ್ಯನು ಕಾಲಕ್ರಮೇಣ ಉಬ್ಬುತ್ತಾ ಸಾಗಿ, ತನ್ನಲ್ಲಿನ ಇಂಧನವೆಲ್ಲ ಖಾಲಿಯಾದಾಗ, ತನ್ನ ಸುತ್ತಮುತ್ತಲಿರುವ ಗ್ರಹಗಳನ್ನು ನುಂಗಿಹಾಕಬಹುದು. ಆ ರೀತಿ ಸೂರ್ಯನ ಕಬಳಿಕೆಗೆ ಮುಂದೊಂದು ದಿನ ಭೂಮಿಯೂ ತುತ್ತಾಗುವ ಅಪಾಯವಿದೆ ಎನ್ನುತ್ತಾರೆ ವಿಜ್ಞಾನಿಗಳು.