Advertisement

ರಸ್ತೆ ಗುಂಡಿ ಮುಚ್ಚಲು ವಿಶೇಷ ತಂಡ ರಚನೆ

11:05 AM Jun 19, 2018 | |

ಮಹಾನಗರ : ಮಳೆಗಾಲ ಪ್ರಾರಂಭಗೊಂಡು ವಾರಗಳು ಕಳೆದಿವೆಯಷ್ಟೇ; ಆಗಲೇ ನಗರದ ಬಹುತೇಕ ಕಡೆಗಳಲ್ಲಿರುವ ಡಾಮರು ರಸ್ತೆಗಳು ಹೊಂಡ ಗುಂಡಿಗಳಾಗಿ ಬದಲಾಗಿದ್ದು, ಆ ಬಗ್ಗೆ ‘ಸುದಿನ’ವು ‘ರಸ್ತೆ ಕಥೆ’ ಹೆಸರಿನಡಿ ವಿಸ್ತೃತ ವರದಿಯೊಂದಿಗೆ ಒಂದು ವಾರದಿಂದ ಅಭಿಯಾನ ನಡೆಸಿತ್ತು. ಈ ಅಭಿಯಾನಕ್ಕೆ ಮಂಗಳೂರು ಪಾಲಿಕೆಯು ಎಚ್ಚೆತ್ತುಕೊಂಡಿದ್ದು, ಪ್ರಯಾಣಕ್ಕೆ ದುಸ್ತರವೆನಿಸಿರುವ ನಗರದ ಆಯ್ದ ರಸ್ತೆಯ ಗುಂಡಿಗಳನ್ನು ಸರಿಪಡಿಸುವ
ಉದ್ದೇಶದಿಂದ ಮನಪಾ ‘ವಿಶೇಷ ತಂಡ’ವನ್ನು ರಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದೆ.

Advertisement

ಈ ಅಭಿಯಾನದ ಕುರಿತು ‘ಸುದಿನ’ ಜತೆಗೆ ಮಾತನಾಡಿದ ಮಂಗಳೂರು ಪಾಲಿಕೆ ಮೇಯರ್‌ ಭಾಸ್ಕರ್‌ ‘ರಸ್ತೆ ಹೊಂಡ-ಗುಂಡಿಗಳ ಬಗ್ಗೆ ಉದಯವಾಣಿಯಲ್ಲಿ ಒಂದು ವಾರದಿಂದ ಬಂದ ವರದಿಯನ್ನು ಗಮನಿಸಿದ್ದೇನೆ. ಪತ್ರಿಕೆ ಬೆಳಕು ಚೆಲ್ಲಿರುವ ಎಲ್ಲ ಸಮಸ್ಯೆಗಳನ್ನು ಪಾಲಿಕೆಯು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳ ಜತೆಗೂ ಈ ಬಗ್ಗೆ ಚರ್ಚಿಸಲಾಗಿದೆ. ಆದರೆ, ಮಳೆ ಬರುವ ಸಮಯದಲ್ಲಿ ಗುಂಡಿ ಬಿದ್ದ ರಸ್ತೆಗೆ ಪೂರ್ಣ ಮಟ್ಟದಲ್ಲಿ ತೇಪೆ ಹಚ್ಚಲು ಕಷ್ಟವಾಗುತ್ತಿದೆ. ಯಾಕೆಂದರೆ ಈ ಹಿಂದೆಯೂ ಮಳೆ ಬಂದ ಸಮಯದಲ್ಲಿ ತೇಪೆ ಹಾಕಿದಾಗಲೂ ಅನಂತರದ ಮಳೆಗೆ ಅದು ಕಿತ್ತು ಹೋಗಿತ್ತು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಹೀಗಾಗಿ, ಸಾಧ್ಯ-ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಗುಂಡಿಬಿದ್ದ ರಸ್ತೆಗಳನ್ನು ಸರಿಪಡಿಸುವುದಕ್ಕೆ ಪಾಲಿಕೆಯ ವಿಶೇಷ ತಂಡ ರಚಿಸಲಾಗುವುದು’ ಎಂದರು.

ಸಾರ್ವಜನಿಕರು ಸಹಕರಿಸಿ
ಒಂದು ವಾರದ ಒಳಗೆ ಪಾಲಿಕೆಯ ವಿಶೇಷ ತಂಡ ರಚಿಸಿ, ಸಾರ್ವಜನಿಕರಿಗೆ ಸಮಸ್ಯೆ ಆಗುವ ಪ್ರಮುಖ ರಸ್ತೆಯ ಹೊಂಡಗಳನ್ನು ಗುರುತಿಸಿ ಅದನ್ನು ತಾತ್ಕಾಲಿಕವಾಗಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಮಳೆಗಾಲ ಮುಗಿದ ಬಳಿಕ ಉಳಿದೆಲ್ಲಾ ರಸ್ತೆಗಳನ್ನು ಹೊಂಡ-ಗುಂಡಿ ಮುಕ್ತ ಮಾಡಲಾಗುವುದು. ಸಾರ್ವಜನಿಕರು ಈ ಕುರಿತಂತೆ ಸಹಕರಿಸಬೇಕು’ ಎಂದು ಅವರು ಭರವಸೆ ನೀಡಿದ್ದಾರೆ.

ಪಾಲಿಕೆ ಅಧಿಕಾರಿಗಳಿಗೆ ಶಾಸಕರ ಸೂಚನೆ
ಮಂಗಳೂರಿನಲ್ಲಿ ಮಳೆಗೆ ಉಂಟಾದ ಹೊಂಡ ಗುಂಡಿಗಳ ಬಗ್ಗೆ ‘ಸುದಿನ’ ಒಂದು ವಾರದಿಂದ ವಿಸ್ತೃತ ವರದಿಯನ್ನು ಪ್ರಕಟಿಸುತ್ತಿರುವುದನ್ನು ಗಮನಿಸಿದ್ದೇವೆ. ಮೊದಲ ದಿನದ ವರದಿ ಬಂದ ತತ್‌ ಕ್ಷಣವೇ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹೊಂಡ ಮುಚ್ಚಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ನಾನೇ ಖುದ್ದು ನಿರ್ದೇಶನ ನೀಡಿದ್ದೆ. ಆದರೆ, ಕೆಲವು ಕಡೆ ಮಳೆಯ ಕಾರಣದಿಂದ ಪೂರ್ಣ ಮಟ್ಟದಲ್ಲಿ ಹೊಂಡ ಮುಚ್ಚುವ ಕೆಲಸ ನಡೆಸುವುದು ಸ್ವಲ್ಪ ಕಷ್ಟ ಸಾಧ್ಯ. ಆದರೂ, ಪ್ರಯಾಣಿಕರಿಗೆ ಸಮಸ್ಯೆ ಆಗುವಂತಹ ಹೊಂಡಗಳನ್ನು ತತ್‌ ಕ್ಷಣವೇ ಮುಚ್ಚಲು ಕ್ರಮ ಕೈಗೊಳ್ಳುವ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ, ಈ ಬಗ್ಗೆ ಕೆಲವೇ ದಿನದಲ್ಲಿ ಪಾಲಿಕೆ ಅಧಿಕಾರಿಗಳಿಂದ ಮತ್ತೆ ವಿವರ ಪಡೆದುಕೊಳ್ಳುವ ಮೂಲಕ ಹೆಚ್ಚಿನ ನಿಗಾವಹಿಸಲಾಗುವುದು ಎಂದರು.

ಸೂಕ್ತ ಕ್ರಮ ಅಗತ್ಯ
ಸ್ಮಾರ್ಟ್‌ಸಿಟಿ ಆಗುತ್ತಿರುವ ಮಂಗಳೂರಿನಲ್ಲಿ ಮೊದಲ ಮಳೆಯ ಸಮಯದಲ್ಲಿಯೇ ರಸ್ತೆಗಳೆಲ್ಲ ಹೊಂಡ ಗುಂಡಿಗಳಾಗುತ್ತಿರುವುದು ಸ್ಥಳೀಯ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ತತ್‌ಕ್ಷಣವೇ ರಸ್ತೆ ಗುಂಡಿ ಸರಿಪಡಿಸುವ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಈ ಕೂಡಲೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

Advertisement

ಮಳೆ ಮುನ್ನ ಎಚ್ಚೆತ್ತುಕೊಳ್ಳಬೇಕಿತು
ಮಳೆ ಶುರು ಆಗುವ ಮುನ್ನವೇ ಹೊಂಡ ಗುಂಡಿಯ ಅಪಾಯದ ರಸ್ತೆಯನ್ನು ತೇಪೆ ಹಚ್ಚಿ ಸನ್ನದ್ಧ ಸ್ಥಿತಿಯಲ್ಲಿಡಬೇಕಿತ್ತು. ಯಾವ ರಸ್ತೆಯ ಯಾವ ಭಾಗದಲ್ಲಿ ಸಮಸ್ಯೆ ಆಗಲಿದೆ ಎಂಬುದು ಪಾಲಿಕೆ ಅಧಿಕಾರಿಗಳಿಗೂ ಸ್ಪಷ್ಟವಾಗಿ ಗೊತ್ತಿರುತ್ತದೆ. ಆದರೆ, ಮಳೆಯ ಮುನ್ನ ಇದನ್ನು ಗಂಭೀರವಾಗಿ ತೆಗೆದುಕೊಳ್ಳದ ಪಾಲಿಕೆ ಈಗ ಹೊಂಡ-ಗುಂಡಿ ರಸ್ತೆಯ ಅಧ್ವಾನ ಸರಿಪಡಿಸಲು ಮಳೆ ನಿಲ್ಲುವವರೆಗೆ ಕಾಯುವಂತಾಗಿರುವುದು ಪಾಲಿಕೆಯ ಆಡಳಿತ ವ್ಯವಸ್ಥೆ ಹೇಗಿದೆ ಎಂಬುದು ಸ್ಪಷ್ಟಪಡಿಸುತ್ತದೆ’ ಎಂದು ಮನಪಾ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ. ‘ಉದಯವಾಣಿ ಸುದಿನ’ವು ರಸ್ತೆ ಹೊಂಡದ ಬಗ್ಗೆ ಬರೆದ ವರದಿಯನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಬೇಕು. ಪ್ರಸ್ತುತ ಬಿದ್ದಿರುವ ಹೊಂಡವನ್ನು ಕೋಲ್‌ ಟಾರ್‌ ಹಾಕುವ ಮೂಲಕ ಮುಚ್ಚಲು ಕ್ರಮ ತೆಗೆದುಕೊಳ್ಳಬೇಕು. ಕಾಂಕ್ರೀಟ್‌ ಮಿಕ್ಸ್‌ ಡಾಮರು ಹಾಕಬಹುದು. ಜತೆಗೆ ಯಾವುದೇ ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳುವ ಕೆಲಸವನ್ನು ಪಾಲಿಕೆ ಮಾಡಬೇಕು ಎಂದವರು ಹೇಳಿದರು.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next