ಬೆಂಗಳೂರು: ಆದಾಯ ತೆರಿಗೆ ರಿರ್ಟನ್ಸ್ ಸಲ್ಲಿಕೆಗೆ ಇನ್ನೆರಡೇ ದಿನ ಬಾಕಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವೇತನದಾರರು ಮತ್ತು ಪಿಂಚಣಿದಾರರಿಗೆ ರಿರ್ಟನ್ಸ್ ಸಲ್ಲಿಕೆಗೆ ಆದಾಯ ತೆರಿಗೆ ಇಲಾಖೆ ಮೂರು ದಿನಗಳ ವಿಶೇಷ ಮೇಳ ಆಯೋಜಿಸಿದೆ. ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಜು.29ರಿಂದ 31ರವರೆಗೆ ನಡೆಯಲಿರುವ ಈ ಮೂರು ದಿನಗಳ ವಿಶೇಷ ಮೇಳಕ್ಕೆ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಕೆ. ಮೇಘನಾಥ್ ಶನಿವಾರ ಚಾಲನೆ ನೀಡಿದರು.
ಆದಾಯ ತೆರಿಗೆ ರಿರ್ಟನ್ಸ್ ಸಲ್ಲಿಕೆಗೆ ಜು.31 ಕೊನೆ ದಿನಾಂಕ. ಆದ್ದರಿಂದ ಇನ್ನೂ ರಿರ್ಟನ್ಸ್ ಸಲ್ಲಿಸದ ವೇತನದಾರರು, ಪಿಂಚಣಿದಾರರಿಗೆ ಅನುಕೂಲವಾಗುವಂತೆ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ 54 ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ಇಲ್ಲಿ ಆನ್‌ಲೈನ್‌ನಲ್ಲಿ ಐಟಿ ರಿಟರ್ನ್ಸ್ ಸಲ್ಲಿಸಲು ಅವಕಾಶ ಮಾಡಿಕೊಡುವುದರ ಜೊತೆಗೆ ತೆರಿಗೆ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನುರಿತ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಮೂರು ದಿನಗಳ ಕಾಲ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಕೌಂಟರ್‌ಗಳು ತೆರೆದಿರುತ್ತವೆ. ಸ್ಥಳದಲ್ಲೇ ತೆರಿಗೆ ಪಾವತಿ ಮಾಡಬಯಸುವ ಗ್ರಾಹಕರಿಗಾಗಿ ಎಟಿಎಂ ಮತ್ತು ಬ್ಯಾಂಕ್ ವಿಸ್ತರಣಾ ಕೌಂಟರ್‌ಗಳನ್ನೂ ಸಹ ತೆರೆಯಲಾಗಿದೆ. ಅಲ್ಲದೇ ಪ್ಯಾನ್‌ಕಾರ್ಡ್ ಸೇವಾ ಕೇಂದ್ರ, ವೈದ್ಯಕೀಯ ನೆರವು ಘಟಕ, ಫುಡ್ ಕೋರ್ಟ್ ಮತ್ತು ಹೆಲ್ಪ್ ಡೆಸ್ಕ್ಗಳ ವ್ಯವಸ್ಥೆ ಮಾಡಲಾಗಿದೆ.
ಹಿರಿಯ ನಾಗರಿಕರು, ವಿಕಲಚೇತನರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಇ-ರೀಟರ್ನ್ಸ್ಗಳ ರಸೀದಿ ಪಡೆದುಕೊಳ್ಳಲು ಸೆಂಟ್ರಲೈಸ್ ಪ್ರೊಸೆಸಿಂಗ್ ಸೆಂಟರ್ ಸಹ ತನ್ನ ಒಂದು ಕೌಂಟರ್ ತೆರಿದಿದೆ. ಇದಕ್ಕೂ ಮೊದಲು ವಿಶೇಷ ಕೌಂಟರ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ, ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆದಾರರನ್ನು ಆಕರ್ಷಿಸುವುದು ನಮ್ಮ ಉದ್ದೇಶ. ತೆರಿಗೆ ಸಂಗ್ರಹಣೆಯಲ್ಲಿ ಮುಂಬೈ, ದೆಹಲಿ ಬಳಿಕ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
ತೆರಿಗೆ ಪಾವತಿಸುವ ಮೂಲಕ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಕಳೆದ ಬಾರಿ ಕರ್ನಾಟಕ-ಗೋವಾ ವಲಯದಲ್ಲಿ 1.04 ಲಕ್ಷ ಕೋಟಿ ರೂ. ಆದಾಯ ತೆರಿಗೆ ವಸೂಲಿ ಆಗಿತ್ತು. ಈ ಬಾರಿ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ವಿಶೇಷ ಕೌಂಟರ್‌ಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.