Advertisement

ವಿಶೇಷ ಪರಿಕಲ್ಪನೆಯ “ಗ್ರಾಮದೆಡೆ ವಿಶ್ವಾಸದ ನಡೆ’: ಪ್ರಮೋದ್‌

03:45 AM Feb 05, 2017 | Team Udayavani |

ಉಡುಪಿ: ದಾಖಲೆ ಪ್ರಮಾಣದ 1,596 ಕೋ. ರೂ. ಅಭಿವೃದ್ಧಿ ಕಾರ್ಯಗಳ ಪರಾಮರ್ಶೆಗಾಗಿ “ಗ್ರಾಮದೆಡೆ ವಿಶ್ವಾಸದ ನಡೆ’ ವಿಶೇಷ ಪರಿಕಲ್ಪನೆಯ ಕಾರ್ಯಕ್ರಮ ಯಶಸ್ವಿಯಾಗಿ ಸಾಗುತ್ತಿದೆ. ವಿವಿಧ ಇಲಾಖಾಧಿಕಾರಿಗಳು ಜನರ ಮನೆ ಬಾಗಿಲಿಗೆ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಲೆಂದೇ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ “ಜನಸಂಪರ್ಕ ಸಭೆ’ ಎನ್ನುವ ಈ ವಿಶಿಷ್ಟವಾದ ಜನೋಪಯೋಗಿ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಪೆರಂಪಳ್ಳಿ ಚರ್ಚ್‌ ಬಳಿಯ ಇನ್‌ಫೆಂಟ್‌ ಮೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಉಡುಪಿ ನಗರಸಭೆ ವ್ಯಾಪ್ತಿಯ ಮೂಡು ಪೆರಂಪಳ್ಳಿ ವಾರ್ಡ್‌ ಮಟ್ಟದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭ್ರಷ್ಟಾಚಾರ ರಹಿತ ಆಡಳಿತ
ಉಡುಪಿ ವಿಧಾನಸಭಾ ವ್ಯಾಪ್ತಿಯ 30 ಗ್ರಾಮ, 35 ನಗರಸಭೆ ವಾರ್ಡ್‌ಗಳಲ್ಲಿ ಸಾರ್ವಜನಿಕರಿಗಾಗಿ ಜನಸಂಪರ್ಕ ಸಭೆ ನಡೆಸಲಾಗುವುದು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಬಡವರಿಗಾಗಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಒಳಚರಂಡಿ, ಕುಡಿಯುವ ನೀರಿನ ವ್ಯವಸ್ಥೆಗೆ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ 320 ಕೋ.ರೂ., ನಗರೋತ್ಥಾನ ಕಾರ್ಯಕ್ಕೆ 35 ಕೋ.ರೂ. ಮಂಜೂರಾಗಿದೆ. ಸರಕಾರಿ ಜಾಗದಲ್ಲಿ ಕುಳಿತವರು 94ಸಿಸಿ ಅಡಿ ಅರ್ಜಿ ಸಲ್ಲಿಸಿದರೆ ಅಂತಹ ಫ‌ಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುವುದು. 

800 ರೂ. ವಿದ್ಯುತ್‌ ಬಿಲ್ಲಿನ ಒಳಗೆ ಪಾವತಿಸುವವರು ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ 15 ದಿನಗಳಲ್ಲಿ ಅಂಚೆ ಮೂಲಕ ಜನರ ಮನೆಗೆ ತಲುಪಿಸುವ ವ್ಯವಸ್ಥೆಗೊಳಿಸಲಾಗಿದೆ. ಲಂಚ, ಭ್ರಷ್ಟಾಚಾರ ರಹಿತ ಆಡಳಿತಾತ್ಮಕ ಕೆಲಸ ಮಾಡಲು ಸದಾ ಬದ್ಧನಿದ್ದೇನೆ ಎಂದು ಸಚಿವರು ಭರವಸೆ ನೀಡಿದರು.

ಸವಲತ್ತು ವಿತರಣೆ
ಇದೇ ಸಂದರ್ಭ ಅರ್ಹ ಫ‌ಲಾನುಭವಿಗಳಿಗೆ ವಿವಿಧ ಪಿಂಚಣಿ, ಸವಲತ್ತು, ಸೌಲಭ್ಯಗಳನ್ನು ವಿತರಿಸಲಾಯಿತು. ಗ್ರಾಮಸ್ಥರಿಂದ ಅಹವಾಲು ಅರ್ಜಿ ಸ್ವೀಕರಿಸಿ ಬಹುತೇಕ ಅರ್ಜಿಗಳಿಗೆ ವಿವಿಧ ಇಲಾಖಾಧಿಕಾರಿಗಳ ಮುಖಾಂತರ ಸಚಿವರು ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

Advertisement

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ, ಉಡುಪಿ ತಹಶೀಲ್ದಾರ್‌ ಮಹೇಶ್ಚಂದ್ರ, ಸ್ಥಾಯೀ ಸಮಿತಿ ಅಧ್ಯಕ್ಷೆ ಶೋಭಾ ಕಕ್ಕುಂಜೆ, ನಗರಾಭಿವೃದ್ಧಿ ಪ್ರಾಧಿಕಾರ ಸಮಿತಿ ಸದಸ್ಯೆ ವೈಲೆಟ್‌ ಡಿ”ಸೋಜಾ, ನಗರಸಭೆ ಸದಸ್ಯರಾದ ಪ್ರಶಾಂತ್‌ ಭಟ್‌, ಸೆಲಿನಾ ಕರ್ಕಡ, ರಮೇಶ್‌ ಕಾಂಚನ್‌, ಗಣೇಶ್‌ ನೇರ್ಗಿ, ನಾರಾಯಣ ಕುಂದರ್‌, ಸತೀಶ್‌ ಪುತ್ರನ್‌, ಜನಾರ್ದನ ಭಂಡಾರ್ಕರ್‌, ಚಂದ್ರಕಾಂತ್‌ ನಾಯಕ್‌, ಶಶಿರಾಜ್‌ ಕುಂದರ್‌ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿ ಪ್ರಸ್ತಾವನೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next