Advertisement

Kerala Kannadigas: ಕೇರಳಿಗರಿಗೆ ಕನ್ನಡ ಕಲಿಸಲು ವಿಶೇಷ ತರಗತಿ

01:33 PM Sep 30, 2024 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ ಕೇರಳಿಗರಿಗೆ ಸುಲಭವಾಗಿ ಕನ್ನಡ ಕಲಿಸಲು ಅಭಿವೃದ್ಧಿ ಪ್ರಾಧಿಕಾರ ಸಜ್ಜಾಗುತ್ತಿದೆ. ಗಾಂಧಿ ಜಯಂತಿ ದಿನ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ.

Advertisement

ಇದಕ್ಕಾಗಿ 72 ನುರಿತ ಸಂಪನ್ಮೂಲ ಶಿಕ್ಷಕರನ್ನು ಸಿದ್ಧಗೊಳಿಸಿದ್ದು, ಸರಳ ರೀತಿಯಲ್ಲಿ ಕನ್ನಡ ಕಲಿಸುವ ಕಾರ್ಯ ನಡೆಯಲಿದೆ.

ನಗರದ 16 ಸೆಂಟರ್‌ಗಳಲ್ಲಿ ಕನ್ನಡ ಕಲಿಕಾ ತರಗತಿಗಳು ಆರಂಭವಾಗಲಿವೆ. ಪ್ರತಿ ಕೇಂದ್ರಗಳಲ್ಲಿ 30 ಜನರಿಗೆ ಅವಕಾಶ ನೀಡಲಾಗುತ್ತದೆ. ಕನ್ನಡ ಕಲಿಯಲು ಕೇರಳಿಗರು ಕೂಡ ಉತ್ಸಾಹ ತೋರುತ್ತಿದ್ದಾರೆ. ತರಗತಿಗಳನ್ನು ನಡೆಸಲು ಅವರೇ ಸ್ಥಳಾವಕಾಶ ನೀಡುತ್ತಿದ್ದಾರೆ. ಜತೆಗೆ ಬೋರ್ಡ್‌, ಮತ್ತಿತರರ ಅಗತ್ಯ ಪರಿಕರಗಳನ್ನು ಒದಗಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಕಲಿಸುವ ನಮ್ಮ ಕಾರ್ಯಕ್ಕೆ ಮತ್ತಷ್ಟು ಹುಮ್ಮಸ್ಸು ಬಂದಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

3 ತಿಂಗಳ ಕೋರ್ಸ್‌: ವಿವಿಧ ಬ್ಯಾಂಕ್‌ ಉದ್ಯೋಗಿಗಳಿಗೆ, ಅನ್ಯ ರಾಜ್ಯದವರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಯೋಜನೆ ರೂಪಿಸಿದೆ. ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಾಧಿಕಾರ ಹಮ್ಮಿಕೊಳ್ಳಲಿರುವ ಕನ್ನಡ ಕಲಿಕಾ ತರಗತಿಗಳು 3 ತಿಂಗಳದ್ದಾಗಿರಲಿದೆ. ವಾರಕ್ಕೆ ಮೂರು ದಿವಸ ಅಂದರೆ 36 ಗಂಟೆ ಮಾತ್ರ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೇಳಿದೆ.

Advertisement

ಸುಲಭವಾಗಿ ಕನ್ನಡ ಕಲಿಸುವ ನಿಟ್ಟಿನಲ್ಲಿ ಪ್ರಾಧಿಕಾರವೇ ಪರಿಷ್ಕೃತ ಪಠ್ಯ ಸಿದ್ಧಗೊಳಿಸಿದೆ. ಸಂವಹನ ಕನ್ನಡವನ್ನು ಮಾತ್ರ ತರಗತಿಗಳಲ್ಲಿ ಶಿಕ್ಷಕರು ಹೇಳಿಕೊಡಲಿದ್ದಾರೆ. ಕನ್ನಡ ಸಾಹಿತ್ಯ ಇತ್ಯಾದಿಗಳನ್ನು ಕಲಿಕೆಯಿಂದ ದೂರವಿಡಲಾಗುವುದು. ದೈನಂದಿನ ವ್ಯವಹಾರಕ್ಕೆ ಏನು ಬೇಕು ಅಂತಹ ಪದಗಳನ್ನು, ಭಾಷೆ ಗಳನ್ನು ಹೇಳಿಕೊಡಲಾಗುತ್ತದೆ. ಕನ್ನಡ ಕಲಿಯುವ ವರಿಗೆ ಎಷ್ಟು ಸುಲಭವೋ, ಅಷ್ಟು ಸುಲಭ ರೀತಿಯಲ್ಲಿ ಕನ್ನಡ ಕಲಿಸುವ ಕೆಲಸ ನಡೆಯಲಿದೆ ಎಂದು ತಿಳಿಸಿದೆ.

ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಪಾಠ: ಚಹ ಅಂಗಡಿಯಿಂದ ಹಿಡಿದು ದೊಡ್ಡ ಕೈಗಾರಿಕೆಗಳಲ್ಲೂ ಕೇರಳಿಗರು ಕೆಲಸ ಮಾಡುತ್ತ ನೂರಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮುಖ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ನರ್ಸ್‌ಗಳಾಗಿ ಸಾಕಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ. ಮಾಗಡಿ ರಸ್ತೆಯ ಸುಕಂದಕಟ್ಟೆ ಸಮೀಪದ ಮಲೆಯಾಳಂನ ನರ್ಸಿಂಗ್‌ ಹೋಮ್‌ ಇದ್ದು, ಇಲ್ಲಿ 120 ನರ್ಸಿಂಗ್‌ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಕನ್ನಡ ಪಾಠ ಹೇಳಿಕೊಡುವ ಕೆಲಸ ನಡೆದಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಶೀಘ್ರದಲ್ಲೇ ಜಾಲಹಳ್ಳಿ, ವೈಟ್‌ ಫೀಲ್ಡ್‌, ಟಿ.ಸಿ.ಪಾಳ್ಯ ರಸ್ತೆ, ಎಂ.ಎಸ್‌.ಪಾಳ್ಯ, ಚಿಕ್ಕಬಾಣಾವರ, ನೆಲಮಂಗಲ ಉತ್ತರ ಭಾಗ, ತಿಪ್ಪಸಂದ್ರ, ಅಲಸೂರು, ವಿಜಯನಗರ, ಕುಂದಾನಹಳ್ಳಿ ಗೇಟ್‌, ಮಹದೇವಪುರ ಪ್ರದೇಶಗಳಲ್ಲಿ ಕನ್ನಡ ಕಲಿಕಾ ತರಗತಿಗಳು ನಡೆಯಲಿವೆ. ಪ್ರಾಧಿಕಾರದಿಂದ ಸಂಪನ್ಮೂಲ ಶಿಕ್ಷಕರಿಗೆ ಗೌರವ ಸಂಭಾವನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಸಂಪನ್ಮೂಲ ಶಿಕ್ಷಕರಿಗಾಗಿ ಪ್ರಾಧಿಕಾರ ಪರೀಕ್ಷೆ ನಡೆಸಿದ್ದು, 200 ಮಂದಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೇರಳಿಗರಲ್ಲಿ ಕೂಡ ಕನ್ನಡ ಬಲ್ಲವರು ಕೂಡ ಇದ್ದಾರೆ. ಮದರಾಸಗಳಲ್ಲಿ ಕೂಡ ಕನ್ನಡ ಕಲಿಸುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.

ಕೇರಳಿಗರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಪ್ರಾಧಿಕಾರ ಮಾಡಿಕೊಂಡಿದೆ. 500 ಕೇರಳಿಗರಿಗೆ ಕನ್ನಡ ಹೇಳಿ ಕೊಡಲಾಗುತ್ತದೆ. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಇದ್ದು ಅವರು ಕನ್ನಡ ಕಲಿತರೆ ನಾವು ಅವರನ್ನು ಹೊರ ನಾಡಿಗರು ಎಂದು ಹೇಳಲಾಗದು. ಇವರಿಗೆ ಕನ್ನಡ ಕಲಿಕಾ ತರಗತಿಗಳು ಅನುಕೂಲ.-ಡಾ.ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ.

 -ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next