Advertisement

‘ಶಿಕ್ಷಕ’ ವೃತ್ತಿಯಲ್ಲಿನ ಮಾನಸಿಕ ಸಂಘರ್ಷಗಳು – ಏಕೆ, ಹೇಗೆ? ಮತ್ತು ಪರಿಹಾರಗಳೇನು?

08:53 AM Sep 05, 2020 | Hari Prasad |

‘ವಿದ್ಯೆ’ ಎಂಬ ಅರಿವನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಜ್ಞಾನದಾಹಿಗಳನ್ನಾಗಿಸಿ ಆ ಮೂಲಕ ಅವರು ಭವಿಷ್ಯದಲ್ಲಿ ತಮ್ಮ ನೆಚ್ಚಿನ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಭದ್ರ ಬುನಾದಿಯೊಂದನ್ನು ಹಾಕಿಕೊಡುವ ‘ಗುರು’ ಅಥವಾ ಶಿಕ್ಷಕರು ಸರ್ವಮಾನ್ಯರು. ಎಲ್ಲಾ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿಯೇ ಶ್ರೇಷ್ಠ ಎಂಬ ಕಾಲ ಕಳೆದು ಹೋಗಿ, ಎಲ್ಲಾ ವೃತ್ತಿಗಳಂತೆಯೂ ಶಿಕ್ಷಕ ವೃತ್ತಿಯೂ ಒಂದು ‘ವೃತ್ತಿಯಷ್ಟೇ’ ಎಂಬ ಕಾಲಘಟ್ಟದಲ್ಲಿ ನಾವಿದ್ದೇವೆ. ಬೇರೆಲ್ಲಾ ಕೆಲಸಗಳಲ್ಲಿ ಇರುವಂತೆ ಶಿಕ್ಷಕ ವೃತ್ತಿಯವರೂ ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಮಕ್ಕಳು ಎದುರಿಗಿದ್ದರೆ, ಅವರ ನಗು, ತುಂಟಾಟ, ಮುಗ್ಧ ನೋಟ, ‘Yes Miss/Yes Sir’ ಎಂಬ ಮುದ್ದಾದ ಮಾತು.. ಇವೆಲ್ಲವೂ ಶಿಕ್ಷಕರ ಒತ್ತಡವನ್ನು ಕ್ಷಣ ಮಾತ್ರದಲ್ಲಿ ಇಲ್ಲವಾಗಿಸುತ್ತದೆ. ಆದರೆ ವಿಶ್ವವ್ಯಾಪಿಯಾಗಿರುವ ಕೋವಿಡ್ 19 ಎಂಬ ಮಹಾಮಾರಿ ಈ ಸಲ ಅದಕ್ಕೂ ಕಲ್ಲು ಹಾಕಿದೆ. ಮಕ್ಕಳು ಎದುರಿಗಿಲ್ಲದೆ ಅವರಿಗೆ ಪಾಠವನ್ನು ಹೇಳಿಕೊಡಬೇಕಾದ ಸಂದಿಗ್ಧತೆ ನಮ್ಮ ಶಿಕ್ಷಕರದ್ದಾಗಿದೆ. ಹೀಗೆ ಒಟ್ಟಿನಲ್ಲಿ ನಮ್ಮ ಶಿಕ್ಷಕ ವರ್ಗದವರು ಯಾವೆಲ್ಲಾ ರೀತಿಯ ಮಾನಸಿಕ ಒತ್ತಡಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಾಗುತ್ತದೆ ಮತ್ತು ಇದಕ್ಕಿರುವ ಪರಿಹಾರಗಳೇನು? ಎಂಬುದನ್ನು ಸರಳವಾಗಿ ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ ಕೆ.ಎಂ.ಸಿ. ಮಣಿಪಾಲದ ಕ್ಲಿನಿಕಲ್ ಸೈಕಾಲಜಿ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿರುವ ಡಾ. ಶ್ವೇತಾ ಟಿ.ಎಸ್. ಅವರು…

Advertisement

ಶೈಕ್ಷಣಿಕ ವರ್ಷದ ಪ್ರಾರಂಭವು ಶಾಲೆಯ ಪ್ರತೀ ತರಗತಿಯೂ ಹೊಸ ಮಕ್ಕಳ ಕಲರವದಿಂದ ತುಂಬಿಕೊಳ್ಳುತ್ತದೆ. ಹಿಂದಿನ ವರ್ಷ ಒಂದು ತರಗತಿ ಕಿರಿದಾಗಿದ್ದ ವಿದ್ಯಾರ್ಥಿಗಳು ಈ ವರ್ಷ ಅದೇ ಶಾಲೆಯ ಮುಂದಿನ ತರಗತಿಗೆ ಹೊಸ ಕನಸು, ನಿರೀಕ್ಷೆಗಳ ಚೀಲವನ್ನು ಹೊತ್ತು ಬಂದಿರುತ್ತಾರೆ.

ಮಕ್ಕಳಿಗೇನೋ ಪ್ರತೀ ವರ್ಷವೂ ಹೊಸ ತರಗತಿ, ಹೊಸ ಶಿಕ್ಷಕರು. ಆದರೆ ಶಿಕ್ಷಕರಿಗೆ ಪ್ರಥೀ ವರ್ಷವೂ ಹೊಸ ಸವಾಲಿನ ವರ್ಷವಾಗಿರುತ್ತದೆ ಎನ್ನುವುದನ್ನು ನಾವು ಮರೆತೇಬಿಟ್ಟಿರುತ್ತೇವೆ.

ಅನುಭವೀ ಶಿಕ್ಷಕರೂ ಸಹ ಪ್ರತೀ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಹೊಸ ವಿಚಾರಗಳೊಂದಿಗೆ ಮತ್ತು ಹೊಸ ಸವಾಲುಗಳೊಂದಿಗೆ ತಮ್ಮ ವಿದ್ಯಾರ್ಥಿಗಳನ್ನು ಎದುರುಗೊಳ್ಳಬೇಕಾಗಿರತ್ತದೆ.

ಮತ್ತು ಈ ಸವಾಲುಗಳನ್ನು ಎದುರಿಸುವ ಮಾರ್ಗೋಪಾಯಗಳನ್ನೂ ಸಹ ಶಿಕ್ಷಕರು ಅರಿತುಕೊಂಡಿರುವುದೂ ಸಹ ಅತ್ಯವಶ್ಯವೇ!

Advertisement

ಶಿಕ್ಷಕ ವೃತ್ತಿಯ ಸಮಸ್ಯೆಗಳೆಂದರೆ ಅದು ಕೇವಲ ಪಠ್ಯ ಅಥವಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳಷ್ಟೇ ಆಗಿರುವುದಿಲ್ಲ. ಬದಲಾಗಿ, ಶಿಕ್ಷಕ ವರ್ಗ ತಾವು ಕೆಲಸ ಮಾಡುವ ಸ್ಥಳದಲ್ಲಿ ಎದುರಾಗುವ ಬಿಕ್ಕಟ್ಟುಗಳು ಹಾಗೂ ಸಂಘರ್ಷಗಳೂ ಸಹ ಸೇರಿರುತ್ತವೆ.

ಈ ರೀತಿಯ ಅನುಭವ ಯಾರಿಗೆ ತಾನೇ ಆಗಿರುವುದಿಲ್ಲ ಹೇಳಿ? ಅಂತಹುದರಲ್ಲಿ, ಶಿಕ್ಷಕರು, ಬೋಧನೇತರ ಸಿಬ್ಬಂದಿಗಳು, ಮೇಲಧಿಕಾರಿಗಳು, ಅನುಭವಿಗಳು, ಹೊಸತಾಗಿ ಕೆಲಸಕ್ಕೆ ಸೇರಿರುವವರು.. ಹೀಗೆ ವಿವಿಧ ರಿತಿಯ ಮನಸ್ಸುಗಳು ಕೆಲಸ ಮಾಡುವ ಸ್ಥಳದಲ್ಲಿ ಉಂಟಾಗಬಹುದಾದ ಸಂಘರ್ಷವನ್ನು ನಿಭಾಯಿಸುವುದು ಕಷ್ಟಸಾಧ್ಯವೇ ಸರಿ!

ಸಂಘರ್ಷದ ಸ್ವರೂಪ:
ಯಾವಾಗ ಒಂದೇ ವಿಚಾರದ ಕುರಿತಾಗಿ, ಇಬ್ಬರಿಗಿಂತ ಹೆಚ್ಚಿನವರು ತಮ್ಮದೇ ಅದ ವಾದ, ಪ್ರತಿವಾದ, ಅಭಿಪ್ರಾಯಗಳನ್ನು ಮಂಡಿಸುತ್ತಾ, ತಮ್ಮ ವಾದಕ್ಕೆ ಒಪ್ಪಿಗೆ ಸಿಗಬೇಕೆಂದು ಪಟ್ಟುಹಿಡಿದು ಕುಳಿತುಕೊಳ್ಳುವ ಸಂದರ್ಭದಲ್ಲಿ ಅಲ್ಲೊಂದು ಸಂಘರ್ಷದ ಬೀಜ ಮೊಳಕೆಯೊಡಲಾರಂಭಿಸುತ್ತದೆ.

ಮತ್ತು ಈ ಸನ್ನಿವೇಶ, ಸಂದರ್ಭದ ಭಾಗೀದಾರ ವ್ಯಕ್ತಿಗಳೆಲ್ಲರ ಮನಸ್ಸಿನಲ್ಲೂ ರೂಪುಗೊಳ್ಳುವ ಭಾವನೆಗಳು ಅಂತಿಮವಾಗಿ ಒತ್ತಡದ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆಗಳು ತೀರಾ ಹೆಚ್ಚಾಗಿರುತ್ತದೆ.

ಸಂಘರ್ಷಗಳನ್ನು ಉಂಟುಮಾಡುವ ಕೆಲವೊಂದು ಸಾಮಾನ್ಯ ಕಾರಣಗಳು:
1. ಅವಶ್ಯಕತೆ ಅಥವಾ ಬೇಡಿಕೆಗಳು

2. ಗ್ರಹಿಸುವ ಶಕ್ತಿ

3. ಒತ್ತಡಗಳು

4. ಮೌಲ್ಯಗಳು

5. ವಿಷಯ ನಿರೂಪಣಾ ಶೈಲಿ

6. ನೀತಿ ನಿರೂಪಗಳು

ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ನೆಲೆಯಲ್ಲಿ ಯೋಚಿಸಿದ ಸಂದರ್ಭದಲ್ಲಿ ಈ ಮೇಲಿನ ಅಂಶಗಳಿಗೆ ಅವುಗಳದ್ದೇ ಆದ ಅರ್ಥ ಹೊರಹೊಮ್ಮುತ್ತದೆ.

ಹಾಗಾದರೆ, ಅಸಲಿಗೆ ಶಿಕ್ಷಣ ವೃತ್ತಿಯಲ್ಲಿ ಈ ಸಂಘರ್ಷಗಳು ಹುಟ್ಟಿಕೊಳ್ಳುವುದಾದರೂ ಎಲ್ಲಿಂದ ಎಂಬ ಕುರಿತಾಗಿ ವಿಚಾರ ನಡೆಸಿದಾಗ, ನಾವು ಮುಖ್ಯವಾಗಿ ಈ ಕೆಳಗಿನ ಅಂಶಗಳನ್ನು ಪಟ್ಟಿ ಮಾಡಬಹುದಾಗಿರುತ್ತದೆ.

– ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯ

– ವಿದ್ಯಾರ್ಥಿಗಳೊಂದಿಗಿನ ವಾಗ್ವಾದ

– ಪೋಷಕರೊಂದಿಗಿನ ವಾದ-ವಿವಾದಗಳು

– ತರಬೇತಿ ಹೊಂದಿದ ಮತ್ತು ತರಬೇತಿ ಹೊಂದದ ಶಿಕ್ಷಕರ ನಡುವಿನ ಮೇಲಾಟ

– ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನಡುವಿನ ಭಿನ್ನಾಭಿಪ್ರಾಯಗಳು

– ವೈಯಕ್ತಿಕ ಜೀವನದಲ್ಲಿನ ಕಲಹಗಳ ಪ್ರತಿಫಲನ

ಹೀಗೆ, ಶಿಕ್ಷಕ ವೃತ್ತಿಯನ್ನು ನಿಭಾಯಿಸಬೇಕಾದವರು ಬೇರೆ ಬೇರೆ ಕಡೆಗಳ ಸಮಸ್ಯೆಗಳಿಗೆ ತಲೆಕೊಡಲೇ ಬೇಕಾದ ಅನಿವಾರ್ಯತೆ ಇರುತ್ತದೆ. ಹೀಗೆ ಒತ್ತಡಗಳ ಪ್ರಮಾಣ ಏರಿಕೆಯಾದಂತೆ ಸಂಘರ್ಷದ ತೀವ್ರತೆಯೂ ಜಾಸ್ತಿಯಾಗುತ್ತದೆ ಮತ್ತು ಇದು ನೇರವಾಗಿ ಅವರ ಕಾರ್ಯಶೈಲಿಯ ಮೇಲೆ ಪರಿಣಾಮವನ್ನು ಬೀರುತ್ತದೆ.

ಕೆಲವೊಮ್ಮೆ ನಾವು ಬಳಸುವ ಪದಗಳೂ ಸಹ (ನೆಗೆಟಿವ್) ವ್ಯಕ್ತಿಯನ್ನು ಪ್ರಚೋದಿಸುತ್ತವೆ. ಉದಾ., ನೆವರ್ ಮೈಂಡ್, ಐ ಟೋಲ್ಡ್ ಯೂ…, ಹಾಗೆ ಗೊತ್ತಿಲ್ಲ, ನಿನಗೆ ಎಷ್ಟು ಹೇಳಿದರೂ ಅಷ್ಟೇ… ; ಎಂಬಿತ್ಯಾದಿ ಪದಗಳ ಬಳಕೆ ಎದುರಿಗಿರುವವರ ಮೂದಲಿಕೆಗೆ ಕಾರಣವಾಗಿ ಅನಿವಾರ್ಯ ಸಂಘರ್ಷ ಮನಸ್ಥಿತಿಯೊಂದು ಹುಟ್ಟಿಕೊಳ್ಳಲು ಕಾರಣವಾಗುವ ಸಾಧ್ಯತೆಗಳಿರುತ್ತವೆ.

ಅದೇ ರೀತಿ, ನಾವು ಬಳಸುವ ಪದಗಳು ಪಾಸಿಟಿವ್ ಆಗಿದ್ದಾಗ ಈ ರೀತಿಯ ಸಂಘರ್ಷಗಳನ್ನು ನಿಯಂತ್ರಿಸಬಹುದು. ಉದಾಹರಣೆಗೆ ಹೇಳುವುದಿದ್ದಲ್ಲಿ., ‘Let me explain it to you…’, ‘we understand..’, ‘ನಿಮಗೆ ಬೇಜಾರಿಲ್ಲ ಎಂದರೆ ಕೆಲವು ಸಲಹೆಗಳನ್ನು ನೀಡಬಹುದೇ..?’ ‘ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ…’ ಹೀಗೆ…

ಮತ್ತು ಯಾವಾಗ ನಾವು ಈ ರೀತಿಯಾಗಿ ಉತ್ತೇಜನಾತ್ಮಕ ಪದಗಳನ್ನು ಪ್ರಯೋಗಿಸುತ್ತೇವೆಯೋ ಆಗ ಎದುರಿಗಿರುವ ವಿದ್ಯಾರ್ಥಿ ಅಥವಾ ಯಾರೇ ವ್ಯಕ್ತಿ ಸಿಟ್ಟಿಗೇಳುವ ಬದಲು ವಿಚಾರವನ್ನು ಚರ್ಚಿಸಲು ಮತ್ತು ನಾವು ಹೇಳುವುದನ್ನು ಕೇಳಲು ಸಿದ್ಧರಿರುತ್ತಾರೆ. ಹಾಗಾಗಿ ಸಂವಹನ ವಿಚಾರವು ಶಿಕ್ಷಕ ವೃತ್ತಿಯಲ್ಲಿ ಬಹುಮುಖ್ಯ ಅಸ್ತ್ರವಾಗಿರುತ್ತದೆ ಎಂಬುದು ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿ ಸಾಬೀತುಗೊಳ್ಳುತ್ತಿದೆ.

ವೃತ್ತಿ ಕ್ಷೇತ್ರದಲ್ಲಿ ಹೀಗೆ ಸಂಭವಿಸಬಹುದಾಗಿರುವ ಸಂಘರ್ಷಗಳು ಪಾಸಿಟಿವ್ ಮತ್ತು ನೆಗೆಟಿವ್ ಮುಖಗಳನ್ನೂ ಸಹ ಹೊಂದಿರುತ್ತದೆ ಎಂಬುದು ಓರ್ವ ಚಿಕಿತ್ಸಕ ಮನಶ್ಯಾಸ್ತ್ರಜ್ಞೆಯಾಗಿ ನಾನು ಕಂಡುಕೊಂಡಿರುವ ವಿಚಾರವಾಗಿದೆ.

ಪಾಸಿಟಿವ್ ಅಥವಾ ಸಕಾರಾತ್ಮಕ ವಿಚಾರಗಳು:

– ಪರಸ್ಪರ ವಾದಗಳಿಂಧ ಹೊಸ ಕಲ್ಪನೆಗಳು, ವಿಚಾರಗಳು ಮತ್ತು ವಿಧಾನಗಳು ಹೊರಹೊಮ್ಮುತ್ತವೆ.

– ನಿರ್ಧಾರಗಳ ಗುಣಮುಟ್ಟ ಸುಧಾರಣೆಯಾಗುತ್ತದೆ

– ಸೃಜನಶೀಲತೆ ಹೆಚ್ಚಾಗುವುದರೊಂದಿಗೆ ಹೊಸ ಆವಿಷ್ಕಾರಗಳಿಗೆ ದಾರಿಯಾಗುತ್ತದೆ.

– ವೈಯಕ್ತಿಕವಾಗಿ ಮತ್ತು ಸಮೂಹಗಳ ನಡುವೆ ಸೌಹಾರ್ಧ ಬದಲಾವಣೆ ಸಾಧ್ಯವಾಗುತ್ತದೆ.


ನೆಗೆಟಿವ್ ಅಥವಾ ನಕಾರಾತ್ಮಕ ವಿಚಾರಗಳ ಸಾಧ್ಯತೆಗಳೆಂದರೆ…:

– ವ್ಯಕ್ತಿ, ವ್ಯಕ್ತಿಗಳ ನಡುವೆ ಅಸಮಧಾನವನ್ನು ಹುಟ್ಟುಹಾಕುವುದು

– ಸಂವಹನ ಹಾಗೂ ತಂಡದಲ್ಲಿ ಬಿರುಕು ಮೂಡುವುದು

– ಮಾನಸಿಕ ಸದೃಢತೆ ಕಡಿಮೆಯಾಗುವುದು

– ಒಟ್ಟು ವೃತ್ತಿ ಪರಿಸದಲ್ಲಿ ನೆಗೆಟಿವ್ ವಾತಾವರಣ ಮೂಡುವುದು

ಸಂಘರ್ಷ ಪರಿಹಾರಕ್ಕೆ ಕೆಲವು ಸರಳ ಸೂತ್ರಗಳು:
– ಶಾಲೆ ಎಂಬುದು ಒಂದು ವ್ಯವಸ್ಥೆ (ಸಂಸ್ಥೆಯೂ ಅನ್ನಬಹುದು). ಅಲ್ಲಿ ಅದರದ್ದೇ ಆದ ನೀತಿ ನಿಯಮಗಳಿರುತ್ತವೆ ಮತ್ತು ಅವುಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯವೂ ಹೌದು.

– ಈಗಾಗಲೇ ಎಲ್ಲರಿಂದಲೂ ಒಪ್ಪಿತವಾಗಿ ನಡೆದುಕೊಂಡುಬಂದಿರುವ ಕೆಲವೊಂದು ಮೌಖಿಕ ನಿಯಮಗಳನ್ನು ಪಾಲಿಸಲೇಬೇಕು. ಮತ್ತು ಈ ನಿಯಮಗಳು ಆಯಾ ಪ್ರದೇಶಗಳ ಭೌಗೋಳಿಕ, ಸಾಮಾಜಿಕ ಮತ್ತು ಸಾಂಸ್ಥಿಕ ಹಿನ್ನಲೆಯಲ್ಲಿ ರೂಢಿಗೆ ಬಂದಿರುವಂತಾದ್ದಾಗಿರುತ್ತವೆ.

– ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಎಲ್ಲರ ಅಭಿಪ್ರಾಯಗಳನ್ನು ಗಮನದಲ್ಲಿರಿಸಿಕೊಂಡು ಸರ್ವಸಮ್ಮತವಾಗಿ ಮುಂದುವರಿಯುವುದು.

– ಹೊಸ ಬದಲಾವಣೆಗಳನ್ನು ಒಮ್ಮತದಿಂದ ಒಪ್ಪಿಕೊಳ್ಳುವುದು.

– ಸಹ ಶಿಕ್ಷಕರ ಅಭಿಪ್ರಾಯಗಳನ್ನು ಗೌರವಿಸುವುದು.

– ನಮ್ಮ ಗ್ರಹಿಕೆಯೇ ತಪ್ಪಾಗಿದ್ದಲ್ಲಿ ತಿದ್ದಿಕೊಳ್ಳುವ ಮನೋಭಾವ.

– ಸಹ ಶಿಕ್ಷಕರಿಂದ ವಿಚಾರಗಳನ್ನು ಕಲಿಯುವ ಅವಕಾಶ ಸಿಕ್ಕಿದ ಸಂದರ್ಭದಲ್ಲಿ ಸಂತೋಷದಿಂದ ಒಪ್ಪಿಕೊಂಡು ಮುನ್ನಡೆಯುವುದು.

– ಶಾಲೆಯಲ್ಲಿ ಸೌಹಾರ್ಧಯುತ ವಾತಾವರಣವನ್ನು ಕಾಪಾಡಿಕೊಳ್ಳುವುದು.

– ಜ್ಞಾನದಲ್ಲಿ, ಅನುಭವದಲ್ಲಿ ನನಗಿಂತ ಕಿರಿಯರಿಲ್ಲ ಎಂಬ ಸತ್ಯವನ್ನು ಮನಸ್ಸಿನಲ್ಲಿರಿಸಿಕೊಂಡು ಮುನ್ನಡೆಯುವುದು.

ತನ್ನನ್ನು ತಾನು ಸದಾ ‘ವಿದ್ಯಾರ್ಥಿ’ ಎಂದುಕೊಳ್ಳುವವರೇ ನಿಜವಾದ ಯಶಸ್ವೀ ಶಿಕ್ಷಕರಾಗುತ್ತಾರೆ. ಹಾಗೆಯೇ ತನ್ನ ವೃತ್ತಿ ಕ್ಷೇತ್ರದಲ್ಲಿ ಸಂಘರ್ಷರಹಿತ ವಾತಾವರಣವನ್ನು ಸೃಷ್ಟಿಸಿಕೊಂಡರೆ ಶಿಕ್ಷಣ ಕ್ಷೇತ್ರ ಸಂತೋಷದಾಯಕ ಮತ್ತು ಭವಿಷ್ಯದ ಸತ್ಪ್ರಜೆಗಳನ್ನು ದೇಶಕ್ಕೆ ನೀಡುವ ಅಮೂಲ್ಯ ಕ್ಷೇತ್ರವಾಗುವುದರಲ್ಲಿ ಸಂಶಯವಿಲ್ಲ. ‘ಗುರು’ವಿನ ಮೌಲ್ಯ ಎಂದೂ ‘ಲಘು’ವಾಗದಿರಲಿ, ಶಿಕ್ಷಣ ವ್ಯವಸ್ಥೆ ಬದಲಾಗುತ್ತಿರುವ ಈ ಕಾಲಘಟದಲ್ಲಿ ಗುರುವಿನ ಗುರುತರ ಜವಾಬ್ದಾರಿ ಇನ್ನಷ್ಟು ಔನ್ನತ್ಯಕ್ಕೇರಲಿ ಎಂಬ ಆಶಯ ನಮ್ಮದು.


– ಶ್ವೇತಾ ಟಿ.ಎಸ್.
ಸಹಾಯಕ ಪ್ರಾದ್ಯಾಪಕರು,
ಕ್ಲಿನಿಕಲ್ ಸೈಕಾಲಜಿ ವಿಭಾಗ, KMC, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next