ವಿಧಾನಮಂಡಲ: ಇತ್ತೀಚೆಗೆ ನಿಧನರಾದ ಎಂಟು ಮಂದಿ ಮಾಜಿ ಶಾಸಕರಿಗೆ ಉಭಯ ಸದನಗಳಲ್ಲಿ ಭಾವಪೂರ್ಣ
ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಧಾನಸಭೆಯಲ್ಲಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಮಾಜಿ ಶಾಸಕರಾದ ನಾಗಪ್ಪ, ಆರ್. ನಾರಾಯಣಪ್ಪ, ಮುಕ್ತರುನ್ನೀಸಾ ಬೇಗಂ, ಕುಮಾರಗೌಡ ಪಾಟೀಲ್, ಪ್ರಹ್ಲಾದ್ ರೆಮಾನಿ ಮತ್ತು ಯು.ಎಂ.ಮಾದಪ್ಪ ಅವರಿಗೆ ಸಂತಾಪ ನಿರ್ಣಯ ಮಂಡಿಸಿದರೆ, ವಿಧಾನ ಪರಿಷತ್ತಿನಲ್ಲಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಎಸ್. ಡಿ.ಕರ್ಪೂರಮಠ, ಮುಕ್ತಾರುನ್ನೀಸಾ ಬೇಗಂ ಹಾಗೂ ಎ.ಬಿ.ಪಾಟೀಲ್ ಅವರಿಗೆ ಸಂತಾಪ ಸೂಚನೆ ನಿರ್ಣಯ ಮಂಡಿಸಿದರು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಹಾಗೂ ಇಬ್ಬರು ಶಾಸಕರು ನಿರ್ಣಯದ ಪರ ಮಾತನಾಡಿದರು. ಮೇಲ್ಮನೆಯಲ್ಲಿ ಸಭಾಪತಿಯವರು ಮಂಡಿಸಿದ ಸಂತಾಪ ಸೂಚನೆ ಬೆಂಬಲಿಸಿ ಸಭಾನಾಯಕ ಎಂ.ಆರ್.ಸೀತಾರಾಂ, ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು.
ಹುತಾತ್ಮ ಯೋಧರಿಗೆ ಸಂತಾಪ: ವಿಧಾನಪರಿಷತ್ತಿನಲ್ಲಿ ಮಂಡಿಸಿದ ಸಂತಾಪ ಸೂಚನೆ ನಿರ್ಣಯದ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಕೆ. ಎಸ್.ಈಶ್ವರಪ್ಪ, ಭಾನುವಾರ ಜಮ್ಮು ಕಾಶ್ಮೀರ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆ ನಡೆಸಿದ ಶೆಲ್ ದಾಳಿಗೆ ಹುತಾತ್ಮರಾದ ದೇಶದ ನಾಲ್ವರು ವೀರ ಯೋಧರ ಹೆಸರಗಳನ್ನು ಪ್ರಸ್ತಾಪಿಸಿ, ಅವರಿಗೂ ಶ್ರದ್ಧಾಂಜಲಿ ಸಲ್ಲಿಸಿದರು. ಹುತಾತ್ಮ ವೀರ ಯೋಧರ ಕುಟುಂಬಗಳಿಗೆ ತಾಳ್ಮೆಯ ಶಕ್ತಿ ನೀಡಲೆಂದು ಅವರು ಪ್ರಾರ್ಥಿಸಿದರು.