Advertisement

ಬಳಸುವವರಿಲ್ಲದೆ ಮೂಲೆಗುಂಪಾದ ಶುದ್ಧ ನೀರಿನ ಘಟಕ

11:01 PM May 13, 2019 | Team Udayavani |

ತೆಕ್ಕಟ್ಟೆ: ಕುಂಭಾಸಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ವಿನಾಯಕ ನಗರದಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆಯಾಗಿ ವರ್ಷ ಕಳೆಯಿತು. ಆದರೆ ಅದರ ಬಳಕೆ ನಿರೀಕ್ಷಿತ ಪ್ರಮಾಣದಲ್ಲಿರದೆ ಯೋಜನೆ ವ್ಯರ್ಥವಾಗಿದೆ.

Advertisement

ಶುದ್ಧ ಕುಡಿಯುವ ನೀರಿನ ಯೋಜನೆ
ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ 2 ಸಾವಿರ ಲೀ. ಸಾಮರ್ಥ್ಯ ಹೊಂದಿದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಇಲ್ಲಿ 600 ಮಂದಿ ನಿವಾಸಿ ಗಳಿದ್ದು ಪ್ರಯೋಜನವಾಗಬಹುದು ಎನ್ನಲಾಗಿತ್ತು. ಇದಕ್ಕಾಗಿ ಲಕ್ಷಾಂತರ ರೂ. ವಿನಿಯೋಗಿಸಲಾಗಿತ್ತು. ಆದರೆ ಇದನ್ನು ಈಗ ಬಳಸುವವರಿಲ್ಲ.

ನಾಣ್ಯ ಹಾಕಿದರೆ ನೀರು ಬರುತ್ತಿಲ್ಲ!
ಘಟಕದಲ್ಲಿ 1 ರೂ. ನಾಣ್ಯ ಹಾಕಿದರೆ 10 ಲೀ. ಶುದ್ಧ ನೀರು ಲಭ್ಯವಾಗುತ್ತದೆ. ಈ ಬಗ್ಗೆ ಬೋರ್ಡ್‌ ಕೂಡ ಇಲ್ಲಿದೆ. ಆದರೆ ನಾಣ್ಯ ಹಾಕಿದರೆ ಪ್ರಯೋಜನವಿಲ್ಲವಾಗಿದೆ. ನಾಣ್ಯವನ್ನು ಮೆಶೀನ್‌ ಸ್ವೀಕರಿಸದೇ ಇರುವುದರಿಂದ ನೀರು ಬರದೇ ಇರುವುದು ಕಂಡುಬಂದಿದೆ.

ನಿತ್ಯ 75 ಸಾವಿರ ಲೀ.ನೀರು ಪೂರೈಕೆ
ಕುಂಭಾಸಿ ಗ್ರಾ.ಪಂ.ವ್ಯಾಪ್ತಿಯ ವಿನಾಯಕ ನಗರದಲ್ಲಿ ಸುಮಾರು 40 ಬಾವಿಗಳು , 3 ಹ್ಯಾಂಡ್‌ ಪಂಪ್‌ ಹಾಗೂ ನಿತ್ಯ ಬಳಕೆಗಾಗಿ ಪ್ರತಿ ಮನೆಗಳಿಗೂ ಕೂಡಾ ಪೈಪ್‌ ಲೈನ್‌ ವ್ಯವಸ್ಥೆ ಕಲ್ಪಿಸಲಾಗಿದ್ದು ಹಳೆ ಗ್ರಾ.ಪಂ.ಕಟ್ಟಡದ ಸಮೀಪದ ತೆರೆದ ಬಾವಿಯಿಂದ ನಿತ್ಯ 75 ಸಾವಿರ ಲೀ.ನೀರು ಪೂರೈಕೆ ಮಾಡಲಾಗುತ್ತಿದೆ.

ಬಳಸಲು ಹಿಂದೇಟು
ಈ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕದಿಂದ ಸಂಗ್ರಹಿಸಿದ ನೀರು ಕಂದು ಬಣ್ಣ ಬಂದಿದೆ ಎನ್ನುವ ಕಾರಣಕ್ಕೆ ಕೆಲವರು ಈ ನೀರನ್ನು ಉಪಯೋಗಿಸಲು ಸಾರ್ವಜನಿಕರು ಹಿಂದೇಟು ಹಾಕು ತ್ತಿದ್ದಾರೆ. ಈಗಾಗಲೇ ಘಟಕದ ಸಮೀಪದ ಬಾವಿಯಿಂದ ನೀರು ಸರಬರಾಜಾಗುತ್ತಿದ್ದು ಮೋಟರ್‌ ಸುಟ್ಟು ಹೋಗಿರುವುದರಿಂದ ದುರಸ್ತಿಗೆ ಕಳುಹಿಸಲಾಗಿದೆ.
– ಲಕ್ಷ್ಮಣ ಕಾಂಚನ್‌, ಸದಸ್ಯರು, ಗ್ರಾ.ಪಂ. ಕುಂಭಾಸಿ

Advertisement

ಅಗತ್ಯ ಇರುವಲ್ಲಿ ನಿರ್ಮಿಸಿ
ಸರಕಾರ ಲಕ್ಷಾಂತರ ರೂ. ವ್ಯಯಿಸಿ ಇಂತಹ ಶುದ್ಧ ನೀರಿನ ಘಟಕ ನಿರ್ಮಿಸಿದೆ. ಅನಗತ್ಯ ಪ್ರದೇಶಗಳಲ್ಲಿ ಇಂತಹ ಘಟಕ ನಿರ್ಮಿಸುವ ಬದಲು ಕುಡಿಯುವ ನೀರಿಗೆ ಸಮಸ್ಯೆಗಳಿರುವ ಸ್ಥಳದಲ್ಲಿ ನಿರ್ಮಿಸಿದ್ದರೆ ಸಾರ್ವಜನಿಕರು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದರು.
– ವಿಶ್ವನಾಥ ಹಂದೆ,
ಮಾಜಿ ಸೈನಿಕರು

ಬಳಕೆಯಾಗದಿರುವುದು ಬೇಸರದ ಸಂಗತಿ
ಕುಂಭಾಸಿ ಮೂಡುಗೋಪಾಡಿಯ ಸುಮಾರು 40 ಮನೆಗಳಿಗೆ ಈಗಾಗಲೇ ಕುಡಿಯುವ ನೀರಿನ ಸಮಸ್ಯೆಗಳಿದ್ದು ಟ್ಯಾಂಕರ್‌ ಮೂಲಕ ಎರಡು ದಿನಗಳಿಗೊಮ್ಮೆ ಸುಮಾರು 18 ಸಾವಿರ ಲೀಟರ್‌ ನೀರು ಟ್ಯಾಂಕರ್‌ ಮೂಲಕ ಪೂರೈಕೆ ಮಾಡುತ್ತಿದ್ದೇವೆ. ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದೇವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗದಿರುವುದು ಬೇಸರದ ಸಂಗತಿ.
– ಜಯರಾಮ ಶೆಟ್ಟಿ , ಪಿಡಿಒ ಕುಂಭಾಸಿ

Advertisement

Udayavani is now on Telegram. Click here to join our channel and stay updated with the latest news.

Next