Advertisement

ಬೆಂಗಳೂರಿನಲ್ಲಿ ಕರಾವಳಿ ಮೂಲದ ತಂದೆ-ತಾಯಿ ಕೊಂದ ಪುತ್ರ

12:09 AM Jul 19, 2023 | Team Udayavani |

ಬೆಂಗಳೂರು8: ಜನ್ಮ ಕೊಟ್ಟ ತಂದೆ-ತಾಯಿಯನ್ನು ಮಾನಸಿಕ ಅಸ್ವಸ್ಥ ಪುತ್ರನೊಬ್ಬ ಕಬ್ಬಿಣ ರಾಡ್‌ ಮತ್ತು ಸುತ್ತಿಗೆಯಿಂದ ಹೊಡೆದು ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.

Advertisement

ಬ್ಯಾಟರಾಯನಪುರದ ಸೌದೆಮಂಡಿ ಸಮೀಪದ ನಿವಾಸಿ ಭಾಸ್ಕರ್‌ (61) ಮತ್ತು ಅವರ ಪತ್ನಿ ಶಾಂತಾ (60) ಕೊಲೆಯಾದವರು. ದಂಪತಿಯ ದ್ವಿತೀಯ ಪುತ್ರ ಶರತ್‌ (26) ಕೃತ್ಯವೆಸಗಿ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ತಲಪಾಡಿ ಸಮೀಪದ ಉದ್ಯಾವರದ ಭಾಸ್ಕರ್‌ ಮತ್ತು ಶಾಂತಾ 12 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಬ್ಯಾಟರಾಯನಪುರದ ಸೌದೆಮಂಡಿ ಸಮೀಪದಲ್ಲಿ ಇಬ್ಬರು ಮಕ್ಕಳ ಜತೆ ವಾಸವಾಗಿದ್ದರು. ಭಾಸ್ಕರ್‌ ಹೊಟೇಲ್‌ವೊಂದರಲ್ಲಿ ಕ್ಯಾಶಿಯರ್‌ ಆಗಿದ್ದರು. ಶಾಂತಾ ಕೇಂದ್ರ ಸರಕಾರದ ಐಟಿಐ ಲಿಮಿಟೆಡ್‌ನ‌ಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳ ಹಿಂದೆ ನಿವೃತ್ತಿಯಾಗಿದ್ದಾರೆ. ದಂಪತಿಗೆ ಸಚಿತ್‌ ಮತ್ತು ಶರತ್‌ ಎಂಬ ಇಬ್ಬರು ಮಕ್ಕಳು. ಈ ಪೈಕಿ ಶರತ್‌ ವಿದ್ಯಾಭ್ಯಾಸ ಸ್ಥಗಿತಗೊಳಿಸಿದ್ದು, ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಜತೆಗೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ನಿತ್ಯ ಪೋಷಕರ ಮತ್ತು ಸಹೋದರನ ಜತೆ ಕುಡಿದು ಗಲಾಟೆ ಮಾಡುತ್ತಿದ್ದ. ಜತೆಗೆ ಮನೆಯ ಟೆರೇಸ್‌ ಮೇಲಿರುವ ಕೋಣೆಯಲ್ಲಿ ಒಬ್ಬನೇ ವಾಸವಾಗಿದ್ದ. ವಿದೇಶಿ ಮೂಲದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಚಿತ್‌ ತಿಂಡ್ಲುವಿನಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ರಾಡ್‌, ಸುತ್ತಿಗೆಯಿಂದ ಕೊಲೆ
ಪುತ್ರನ ವರ್ತನೆ ಹಾಗೂ ದುಶ್ಚಟಗಳಿಗೆ ಬೇಸತ್ತಿದ್ದ ಶರತ್‌ನ ಪೋಷಕರು ಮಗನನ್ನು ಪರಿವರ್ತಿಸಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಪದೇ ಪದೇ ಪೀಡಿಸುತ್ತಿದ್ದ. ಹಣ ಕೊಡಲು ನಿರಾಕರಿಸಿದರೆ ಜಗಳ ಹಾಗೂ ಹಲ್ಲೆಗೆ ಮುಂದಾಗುತ್ತಿದ್ದ. ಸೋಮವಾರ ಸಂಜೆ ಕೂಡ ಮದ್ಯದ ಅಮಲಿನಲ್ಲಿ ಬಂದು ಪೋಷಕರ ಜತೆ ಜಗಳ ಮಾಡಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಕಬ್ಬಿಣದ ರಾಡ್‌ ಹಾಗೂ ಸುತ್ತಿಗೆಯಿಂದ ಮೊದಲಿಗೆ ತಂದೆ ಭಾಸ್ಕರ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಅದನ್ನು ತಡೆಯಲು ಹೋದ ತಾಯಿ ಶಾಂತಾ ಮೇಲೂ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಇಬ್ಬರು ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ರಾತ್ರೋರಾತ್ರಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

ಮತ್ತೂಬ್ಬ ಮಗ ಬಂದಾಗ ಬೆಳಕಿಗೆ
ತಿಂಡ್ಲುವಿನಲ್ಲಿರುವ ಸಚಿತ್‌ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಪೋಷಕರಿಗೆ ಕರೆ ಮಾಡಿದ್ದಾನೆ. ಆದರೆ, ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಸ್ಥಳೀಯರಿಗೆ ಫೋನ್‌ ಮಾಡಿ ಮನೆ ಬಳಿ ಹೋಗುವಂತೆ ಕೇಳಿದ್ದಾರೆ. ಅಕ್ಕ-ಪಕ್ಕದವರು ಬಂದಾಗ ಮನೆಯಲ್ಲಿ ಲೈಟ್‌ ಆಫ್ ಮಾಡಿದ್ದರಿಂದ ಮಲಗಿದ್ದಾರೆ ಎಂದಿದ್ದಾರೆ. ಮಂಗಳವಾರ ಬೆಳಗ್ಗೆ ಮತ್ತೆ ಕರೆ ಮಾಡಿದಾಗಲೂ ಯಾರೂ ಸ್ವೀಕರಿಸಲಿಲ್ಲ. ಅನುಮಾನಗೊಂಡು 11 ಗಂಟೆ ಸುಮಾರಿಗೆ ಮನೆ ಬಳಿ ಬಂದಾಗ ಬಾಗಿಲು ಹಾಕಿತ್ತು. ಬಳಿಕ ಸ್ಥಳೀಯರ ನೆರವಿನಿಂದ ಬಾಗಿಲು ಒಡೆದು ನೋಡಿದಾಗ ಮನೆಯ ಮಧ್ಯದ ಕೋಣೆಯಲ್ಲಿ ತಂದೆ-ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಸ್ಥಳೀಯರು ಸಹೋದರ ಶರತ್‌ ಜಗಳ ಮಾಡುತ್ತಿರುವ ವಿಚಾರ ತಿಳಿಸಿದ್ದಾರೆ. ಹೀಗಾಗಿ ಆತನೇ ಕೊಲೆ ಮಾಡಿದ್ದಾನೆ ಎಂದು ಸಚಿತ್‌ ಅನುಮಾನ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದ್ದಾರೆ. ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕೆಲವು ದಿನಗಳ ಹಿಂದೆಯಷ್ಟೇ ದಂಪತಿ ದೈವದ ಕೋಲ ಕಾರ್ಯಕ್ಕೆ ಊರಿಗೆ ಬಂದಿದ್ದು, ತಾಯಿ ಕೆಲವು ಸಮಯ ಕಳೆದಿದ್ದರು. ಶರತ್‌ ಪಿಯುಸಿ ವ್ಯಾಸಂಗ ಮಾಡಿದ್ದು, ಮುಂದೆ ವ್ಯಾಸಂಗ ಮಾಡಲಿಲ್ಲ. ಸರಿಯಾಗಿ ಕೆಲಸಕ್ಕೆ ಹೋಗದೆ, ಸೈಕೋ ರೀತಿ ವರ್ತಿಸುತ್ತಿದ್ದ. ಖರ್ಚಿಗೆ ಹಣ ಕೊಡುವಂತೆ ಪೋಷಕರಿಗೆ ಪೀಡಿಸುತ್ತಿದ್ದ. ಆದರೆ, ಪುತ್ರನೇ ಕೊಲೆಗೈದಿರುವ ವಿಷಯ ಬೇಸರವಾಗಿದೆ. ಇಬ್ಬರ ಮೃತದೇಹಗಳನ್ನು ಹುಟ್ಟೂರು ತಲಪಾಡಿಗೆ ಕೊಂಡೊಯ್ಯಲಾಗುತ್ತದೆ.
– ಬಾಬು ತಲಪಾಡಿ, ಮೃತ ಭಾಸ್ಕರ್‌ ಸಹೋದರ.

Advertisement

Udayavani is now on Telegram. Click here to join our channel and stay updated with the latest news.

Next