Advertisement

ನ್ಯಾಯದಾನ ವಿಳಂಬಕ್ಕೆ ಪರಿಹಾರ ಅಗತ್ಯ

12:54 PM Mar 24, 2017 | Team Udayavani |

ದಾವಣಗೆರೆ: ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಧೀಶರ ಕೊರತೆ ಮತ್ತು ಸುಧೀರ್ಘ‌ ಪ್ರಕ್ರಿಯೆ ಮುಂತಾದ ಕಾರಣಗಳಿಂದ ನ್ಯಾಯದಾನದಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಪರ್ಯಾಯ ವ್ಯವಸ್ಥೆ ಅತ್ಯಂತ  ಸೂಕ್ತ ಎಂದು ರಾಜ್ಯ ಉತ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್‌. ಬಿಲ್ಲಪ್ಪ ಅಭಿಪ್ರಾಯಪಟ್ಟಿದ್ದಾರೆ. 

Advertisement

ಆರ್‌.ಎಲ್‌. ಕಾನೂನು ಕಾಲೇಜಿನಲ್ಲಿ ಗುರುವಾರ ಪರ್ಯಾಯ ವ್ಯವಸ್ಥೆಗಳ ಮೂಲಕ ನ್ಯಾಯದಾನ ಪದ್ಧತಿ…ವಿಷಯ ಕುರಿತ ಒಂದು ದಿನದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ವಿದೇಶದಲ್ಲಿ 10 ಲಕ್ಷ ಜನರಿಗೆ 42 ಜನ ನ್ಯಾಯಾಧೀಶರಿದ್ದರೆ, ಭಾರತದಲ್ಲಿ 13 ರಿಂದ 15 ನ್ಯಾಯಾಧೀಶರಿದ್ದಾರೆ. 

ಸಾಕಷ್ಟು ಸಂಖ್ಯೆಯಲ್ಲಿ ಹುದ್ದೆ ಖಾಲಿ ಇವೆ. ಜನರು ಸಹ ಪುಟ್ಟ ಕಾರಣಕ್ಕೂ ನ್ಯಾಯಾಲಯದ ಮೆಟ್ಟಿಲೇರುವುದು ಕಂಡು ಬರುತ್ತದೆ. ಹಾಗಾಗಿ ಭಾರತದಲ್ಲಿ 3 ಕೋಟಿಗೂ ಅಧಿಕ ಪ್ರಕರಣ ಬಾಕಿ ಇವೆ ಎಂದರು. ಎಲ್ಲಾ ಹಂತದ ನ್ಯಾಯಾಲಯದಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಅಧಿಕವಾಗಿವೆ. ಇತ್ಯರ್ಥ ಪಡಿಸಲು ಅಗತ್ಯವಿರುವ ನ್ಯಾಯಾಧೀಶರ ಕೊರತೆಯ ಜೊತೆಗೆ ಸುದೀರ್ಘ‌ವಾದಂತಹ ನ್ಯಾಯಿಕ ಪ್ರಕ್ರಿಯೆ ನ್ಯಾಯದಾನದ ವಿಳಂಬಕ್ಕೆ ಕಾರಣವಾಗುತ್ತಿದೆ.

ವಿಳಂಬ ಕೆಲವೊಮ್ಮೆ ನ್ಯಾಯದಾನದ ಮೂಲ ಉದ್ದೇಶವನ್ನೇ ಮರೆ ಮಾಡಿಬಿಡುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು. 1970ರಲ್ಲಿ ಅಮೆರಿಕಾದಲ್ಲೂ ನ್ಯಾಯಾಧೀಶರ ಕೊರತೆಯಿಂದಾಗಿ ನ್ಯಾಯದಾನದಲ್ಲಿ ಸಾಕಷ್ಟು ವಿಳಂಬ ಆಗುತ್ತಿರುವುದನ್ನು ಮನಗಂಡು ಅಲ್ಲಿನ ನ್ಯಾಯಾಂಗ ವ್ಯವಸ್ಥೆ ಪರ್ಯಾಯ ಪದ್ಧತಿಗೆ ಹೆಚ್ಚಿನ ಒಲವು ನೀಡಿತು.

ಈಗ ಶೇ.90ರಷ್ಟು ಪ್ರಕರಣ ನ್ಯಾಯಾಲಯದ ಹೊರಗಡೆ ಅಂದರೆ ನ್ಯಾಯಾಂಗ ವ್ಯವಸ್ಥೆ ಪರ್ಯಾಯ ಪದ್ಧತಿಯ ಮೂಲಕ ಬಗೆಹರಿಯುತ್ತಿವೆ. ಸರ್ವೋತ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ವಿ.ಎಸ್‌. ಮಳೀಮs… ಸಮಿತಿಯ ಶಿಫಾರಸಿನಂತೆ ಭಾರತದಲ್ಲೂ ರಾಜೀ ಸಂಧಾನ, ಲೋಕ ಅದಾಲತ್‌, ಮಧ್ಯಸ್ಥಿಕೆ ಕೇಂದ್ರದಂತಹ ಪರ್ಯಾಯ ವ್ಯವಸ್ಥೆ ಜಾರಿಗೆ ಬಂದಿವೆ.

Advertisement

ಪರ್ಯಾಯ ವ್ಯವಸ್ಥೆಗೆ ಕಾನೂನು ಮಾನ್ಯತೆ ಇದೆ. ಹಾಗಾಗಿ ನ್ಯಾಯಾದಾನ ಮಾಡುವರು ಅರ್ಹ ಪ್ರಕರಣಗಳನ್ನು ಹೆಚ್ಚಾಗಿ ಈ ಪದ್ಧತಿಯ ಮೂಲಕ ಇತ್ಯರ್ಥಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸಾರ್ವಜನಿಕರು ಸಹ ಹೆಚ್ಚಿನ ಸಹಕಾರ ನೀಡಬೇಕು ಎಂದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಎಂ. ಶ್ರೀದೇವಿ ಮಾತನಾಡಿ, ಕಾನೂನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ವ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಶ್ರಮಿಸಬೇಕು.

2015 ರಿಂದ 15,926 ಪ್ರಕರಣಗಳನ್ನು ಲೋಕ ಅದಾಲತ್‌ ಮೂಲಕ ಇತ್ಯರ್ಥಪಡಿಸಲಾಗಿದೆ. ಆದರೂ, 16,635 ಸಿವಿಲ್‌, 13,725 ಕ್ರಿಮಿನಲ್‌ ಪ್ರಕರಣ ಬಾಕಿ ಇವೆ. ಲೋಕ ಅದಾಲತ್‌ ಮೂಲಕ ಅರ್ಹ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದಿಂದ ಇಬ್ಬರ ಸಮಯ, ಹಣ ಉಳಿಯುವ ಜೊತೆಗೆ ಒಳ್ಳೆಯ ತೀರ್ಪು ದೊರೆಯುತ್ತದೆ. ನ್ಯಾಯಾಲಯದಲ್ಲಿ ಪ್ರಕರಣಗಳ ಬಾಕಿ ಹೊರೆಯೂ ಕಡಿಮೆ ಆಗುತ್ತದೆ ಎಂದು ತಿಳಿಸಿದರು. 

ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕ ಅಥಣಿ ಎಸ್‌. ವೀರಣ್ಣ, ಅನೇಕ ಕಾರಣದಿಂದ ನ್ಯಾಯದಾನದಲ್ಲಿ ವಿಳಂಬ ಆಗುತ್ತಿದೆ. ವ್ಯಕ್ತಿ ಮೃತಪಟ್ಟ ನಂತರ ತೀರ್ಪು ನೀಡಿರುವುದು ನಮ್ಮ ಕಣ್ಣ ಮುಂದೆ ಇದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಿತಾ ಅವರ ಮರಣಾ ನಂತರ ತೀರ್ಪು ಹೊರ ಬಂದಿದ್ದು, ಈಗ ಕಟ್ಟಬೇಕಾಗಿರುವ 100 ಕೋಟಿ ದಂಡ ಪಾವತಿಗೆ ಸಂಬಂಧಿಸಿದಂತೆ ಮತ್ತೂಂದು ಪ್ರಕರಣ ನಡೆಯಲಿದೆ ಎಂದು ತಿಳಿಸಿದರು.

ಕಾಲೇಜು ಪ್ರಾಚಾರ್ಯ ಡಾ| ಬಿ.ಎಸ್‌. ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ರೇವಯ್ಯ ಒಡೆಯರ್‌ ಇತರರು ಇದ್ದರು. ವಿವಿಧ ಗೋಷ್ಠಿ ನಡೆದವು. ದಿವ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಜಿ.ಎಸ್‌. ಯತೀಶ್‌ ಕುಮಾರ್‌ ಸ್ವಾಗತಿಸಿದರು. ಪ್ರೊ| ಎಂ. ಸೋಮಶೇಖರ್‌ ವಂದಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next