Advertisement

ಯೋಧನನ್ನು ಥಳಿಸಿ PFI ಎಂದು ಬರೆದರು!- ಕೊಲ್ಲಂ ಜಿಲ್ಲೆಯಲ್ಲಿ ಆರು ಕಿಡಿಗೇಡಿಗಳಿಂದ ಕೃತ್ಯ

08:59 PM Sep 25, 2023 | Team Udayavani |

ಕೊಲ್ಲಂ/ತಿರುವನಂತಪುರ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಆರು ಮಂದಿ ಕಿಡಿಗೇಡಿಗಳು ದೇಶ ಕಾಯುವ ಯೋಧರೊಬ್ಬರನ್ನು ನಿರ್ದಯವಾಗಿ ಥಳಿಸಿ, ಬೆನ್ನಿನ ಮೇಲೆ ಪಿಎಫ್ಐ ಎಂದು ಬರೆದಿದ್ದಾರೆ. ಜಿಲ್ಲೆಯ ಚನಪ್ಪರ ಎಂಬಲ್ಲಿ ಯೋಧ ಹಲ್ವಿಲ್‌ ಶೈನ್‌ ಕುಮಾರ್‌ ಅವರ ಮನೆಯ ಪಕ್ಕದಲ್ಲಿಯೇ ಇರುವ ರಬ್ಬರ್‌ ತೋಟದಲ್ಲಿ ರವಿವಾರ ರಾತ್ರಿ ಈ ಹೇಯ ಕೃತ್ಯ ನಡೆದಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಶೈನ್‌ ಕುಮಾರ್‌, ಆರು ಮಂದಿ ಕಿಡಿಗೇಡಿಗಳು ತನ್ನನ್ನು ಮನೆಯಿಂದ ಹೊರಕ್ಕೆ ಎಳೆದುಕೊಂಡು ಹೋದರು. ರಬ್ಬರ್‌ ತೋಟದಲ್ಲಿ ತನ್ನ ಕೈಗಳನ್ನು ಹಿಂದಕ್ಕೆ ಕಟ್ಟಿ, ನೆಲದಲ್ಲಿ ಮಲಗಿಸಿ ಮನ ಬಂದಂತೆ ಥಳಿಸಿತರು. ಅನಂತರ ಬೆನ್ನಿನ ಮೇಲೆ “ಪಿಎಫ್ಐ’ ಎಂದು ಬರೆದರು. ಬಟ್ಟೆ ಹರಿದು ಹಾಕಿದರು. ಥಳಿಸಿದ ಬಳಿಕ ಕೇಕೆ ಹಾಕಿ ಪರಾರಿಯಾದರು. ಅವರೆಲ್ಲರೂ ಪಾನಮತ್ತರಾಗಿದ್ದರು ಎಂದು ಆರೋಪಿಸಿದ್ದಾರೆ.

Advertisement

ಶೈನ್‌ ಕುಮಾರ್‌ ಅವರು ರಾಜಸ್ಥಾನದಲ್ಲಿ ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್‌ ಮತ್ತು ಮೆಕ್ಯಾನಿಕಲ್‌ ವಿಭಾಗದಲ್ಲಿ ಕರ್ತವ್ಯದಲ್ಲಿದ್ದಾರೆ. ಕೇರಳದಲ್ಲಿ ನಿಷೇಧಿತ ಪಿಎಫ್ಐ ಜತೆಗೆ ನಂಟು ಹೊಂದಿರುವ ವ್ಯಕ್ತಿಗಳ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಕೊಲ್ಲಂ ಮತ್ತು ತಿರುವನಂತಪುರ ಜಿಲ್ಲೆಗಳ ಪ್ರಮುಖ ಆರೆಸ್ಸೆಸ್‌ ನಾಯಕರ ವಿವರಗಳನ್ನು ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ಎನ್‌ಐಎ ತಂಡ ಮೊಹಮ್ಮದ್‌ ಸಾದಿಕ್‌ ಎಂಬಾತನನ್ನು ಜನವರಿಯಲ್ಲಿ ಬಂಧಿಸಿತ್ತು. ಸೋಶಿಯಲ್‌ ಡೆಮಾಕ್ರಾಟಿಕ್‌ ಪಾರ್ಟಿ ಆಫ್ ಇಂಡಿಯಾಕ್ಕೆ ಆರೆಸ್ಸೆಸ್‌ ನಾಯಕರ ಬಗೆಗಿನ ಮಾಹಿತಿಯನ್ನು ರಹಸ್ಯವಾಗಿ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ 2022ರ ಫೆಬ್ರವರಿಯಲ್ಲಿ ಇಡುಕ್ಕಿ ಜಿಲ್ಲೆಯ ಠಾಣೆ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರನ್ನು ವಜಾ ಮಾಡಲಾಗಿತ್ತು.

ಪಿಎಫ್ಐ ಸ್ಥಳಗಳ ಮೇಲೆ ಇ.ಡಿ. ದಾಳಿ
ಕೇರಳದ ನಾಲ್ಕು ಜಿಲ್ಲೆಗಳ 12 ಸ್ಥಳಗಳಲ್ಲಿ ಪಿಎಫ್ಐ ಜತೆಗೆ ನಿಕಟ ಸಂಪರ್ಕ ಇರಿಸಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ. ಮಲಪ್ಪುರಂ, ವಯನಾಡ್‌, ತ್ರಿಶ್ಶೂರ್‌, ಎರ್ನಾಕುಳಂ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ನಿಷೇಧಿತ ಸಂಘಟನೆಯ ಜತೆಗೆ ಅಕ್ರಮವಾಗಿ ಹಣಕಾಸು ವ್ಯವಹಾರಗಳನ್ನು ನಡೆಸಲಾಗಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಂಘಟನೆಯ ನಾಯಕರಾಗಿರುವ ಅಬ್ದುಲ್‌ ಸಮದ್‌, ಲತೀಫ್ ಎಂಬುವರ ನಿವಾಸಗಳ ಮೇಲೆ ಕೂಡ ದಾಳಿ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next