ಕೆ.ಆರ್.ಪುರ: ಅಪಾರ್ಟ್‌ಮೆಂಟ್‌ನ 33ನೇ ಮಹಡಿಯಿಂದ ಆಯಾ ತಪ್ಪಿ ಬಿದ್ದು ಸಾಫ್ಟ್‌ವೇರ್ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಟ್ಟರಹಳ್ಳಿ ಸಮೀಪದ ಪಾಶ್ಮಿನಾ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ಜರುಗಿದ್ದು, ಉತ್ತರಪ್ರದೇಶ ಮೂಲದ ದಿಪಾಂಶು ಶರ್ಮಾ(27) ಮೃತ ಟೆಕಿ. ನಿವೃತ್ತ ಭಾರತೀಯ ವಾಯುಪಡೆಯ ಅಧಿಕಾರಿ ಚಮನ್ ಶರ್ಮಾ ಅವರ ಪುತ್ರ. ಮೃತ ಟೆಕಿ ಪೋಷಕರು ಹೊರಮಾವು ಬಳಿ ವಾಸವಾಗಿದ್ದರು.
ದಿಪಾಂಶು ಶರ್ಮಾ ಅಯ್ಯಪ್ಪನಗರ ಸಮೀಪದ ಕೊಡಿಗೇಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದ. ವೈಟ್‌ಫೀಲ್ಡ್ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿಪಾಂಶು, ಶುಕ್ರವಾರ ಕೆಲಸ ಮುಗಿಸಿಕೊಂಡು ರಾತ್ರಿ ಮೋನಿಕಾ, ಅಂಜಲಿ ಮತ್ತು ಬೃನಾಲಾ ಎಂಬ ಸ್ನೇಹಿತರೊಂದಿಗೆ ಪಾರ್ಟಿ ಸಲುವಾಗಿ ಮಹದೇವಪುರದ ಫೀನಿಕ್ಸ್ ಮಾಲ್‌ಗೆ ತೆರಳಿ ಅಲ್ಲಿ ಮದ್ಯ ಸೇವನೆ ಮಾಡಿದ್ದ.
ನಂತರ ಅಲ್ಲಿಂದ ನಗರದ ಇಂದಿರಾನಗರ ಪಬ್‌ಗ ಹೋಗಿ ಪಾರ್ಟಿ ಮಾಡಿ ಬೆಳಗಿನ ಜಾವ 3 ಗಂಟೆಗೆ ಮತ್ತೆ ಸ್ನೇಹಿತೆ ಮೋನಿಕಾ ತಂಗಿದ್ದ ಭಟ್ಟರಹಳ್ಳಿಯ ಪಶ್ಮಿನಾ ಅಪಾರ್ಟ್ ಮೆಂಟ್ ಬಂದು ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಬೆಳಗ್ಗೆ 7 ಗಂಟೆಯಲ್ಲಿ ಮದ್ಯದ ನಶೆಯಲ್ಲಿ ಅಪಾರ್ಟ್‌ಮೆಂಟ್‌ನ ಬಾಲ್ಕನಿಗೆ ಬಂದು ಸಿಗರೇಟ್ ಸೇದುವಾಗ ಆಯಾ ತಪ್ಪಿ 33ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ.
ಕೆಳಗೆ ಬಿದ್ದ ರಭಸಕ್ಕೆ ದೀಪಾಂಶು ಶರ್ಮಾ ತಲೆಗೆ ಗಂಭೀರವಾದ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದ ಸಾಫ್ಟವೇರ್ ಉದ್ಯೋಗಿ ಸ್ಥಳದಲ್ಲೇ ಕೊನೆಯುಸಿರು ಎಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕೆ.ಆರ್.ಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಿದ್ದಾರೆ. ಮೃತ ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.