ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾನವೀಯತೆಯ ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನಾರಾಯಣ ಗುರುಗಳ ತತ್ವ ಸಂದೇಶದಂತೆ ಕಾರ್ಯ ನಿರ್ವಹಿಸುವ ಸಂಸ್ಥೆ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಕೊರೊನಾ ಹಿನ್ನೆಲೆ ಜನರು ಸಣ್ಣ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ಹೋಗಲು ಭಯ ಪಡುತ್ತಿದ್ದಾರೆ. ಈ ಹಿನ್ನೆಲೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಆರೋಗ್ಯ ಪೂರ್ಣ ಸಮಾಜ ಭಾಂದವರೇ ಈ ದೇಶದ ಆಸ್ತಿ ಎಂದು ಅಸೋಸಿಯೇಶನ್‌ನ ಅಧ್ಯಕ್ಷ ಹರೀಶ್ ಜಿ. ಅಮೀನ್ ನುಡಿದರು.
ತುಳು ಕನ್ನಡಿಗರ ಪ್ರತಿuತ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕೇಂದ್ರ ಕಚೇರಿ ಬಿಲ್ಲವ ಭವನದಲ್ಲಿ ಖಾನಾ ಚಾಹಿಯೇ ಫೌಂಡೇಶನಿನ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಯಿತು. ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾಥನಾಡಿದ ಅವರು, ಈ ಶಿಬಿರದಲ್ಲಿ ಬೇರೆ ಬೇರೆ ಸಮಾಜದ ಜನರು ಪಾಲ್ಗೊಂಡಿರುವುದು ನಮಗೆ ಸಂತಸ ತಂದಿದೆ. ನಾವೆಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಸಮಾಜ ಸೇವಕ ಡಾ| ಪ್ರಕಾಶ್ ಮೂಡುಬಿದ್ರೆ ಅವರು ಮಾತನಾಡಿ, ಅಸೋಸಿಯೇಶನ್‌ನ ಪ್ರತಿಯೊಂದು ಕಾರ್ಯಕ್ರಮವನ್ನು ಅತೀ ಹತ್ತಿರದಿಂದ ನಾನು ಬಲ್ಲವನು. ಇಂದು ಈ ಕಾರ್ಯಕ್ರಮದಲ್ಲಿ ನನ್ನ ಸಹಯೋಗ ನನಗೆ ತುಂಬ ಆನಂದ ನೀಡಿದೆ. ಪ್ರಸ್ತುತ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರ ವಿಚಾರಧಾರೆ ನಿಜವಾಗಿಯೂ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಅಸೋಸಿಯೇಶನಿನ ಉಪಾ ಧ್ಯಕ್ಷ ಶಂಕರ್ ಡಿ. ಪೂಜಾರಿ, ಶ್ರೀನಿವಾಸ್ ಆರ್. ಕರ್ಕೇರ, ದಯಾನಂದ್ ಆರ್. ಪೂಜಾರಿ, ಜಯಂತಿ ವರದ ಉಳ್ಳಾಲ್, ರಾಜೇಶ್ ಜೆ. ಬಂಗೇರ, ಡಾ| ಆಝರ್, ಡಾ| ಆಲ್ತಾಫ್, ಡಾ| ಪ್ರಕಾಶ್ ಮೂಡುಬಿದ್ರೆ, ಭಾರತ್ ಬ್ಯಾಂಕ್‌ನ ನಿರ್ದೇಶಕ ಪುರೋಷತ್ತಮ್ ಕೋಟ್ಯಾನ್ ಉಪಸ್ಥಿತರಿದ್ದರು.
ಉಚಿತ ವೈದ್ಯಕೀಯ ಶಿಬಿರದ ಯಶಸ್ವಿಗೆ ಅಸೋಸಿಯೇಶನ್‌ನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಶ್ರಮಿಸಿದರು 150ಕ್ಕೂ ಅಧಿಕ ಸದಸ್ಯರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಜತೆ ಕಾರ್ಯದರ್ಶಿ ಕೇಶವ್ ಕೆ. ಕೋಟ್ಯಾನ್ ವಂದಿಸಿದರು.