Advertisement
ಬಾಯಿಯ ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳುವುದು ಆರೋಗ್ಯಯುತ, ಶುಭ್ರ ನಗುವನ್ನು ಸೂಸುವುದಕ್ಕೆ ನಿರ್ಣಾಯಕವಾಗಿದೆ. ನಮ್ಮ ಬಾಯಿಯ ಆರೋಗ್ಯ, ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹಳ ಮುಖ್ಯವಾದ ಸಲಕರಣೆ ನಮ್ಮ ಹಲ್ಲುಜ್ಜುವ ಬ್ರಶ್. ಮಾರುಕಟ್ಟೆಯಲ್ಲಿ ವೈವಿಧ್ಯಮಯವಾದ ಬ್ರಶ್ ಗಳು ಲಭ್ಯವಿರುವುದರಿಂದ ನಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ತಕ್ಕುದಾದ ಬ್ರಶ್ ಆರಿಸಿಕೊಳ್ಳುವುದು ಸವಾಲೇ ಸರಿ. ಬೇರೆ ಬೇರೆಯದಾದ ಬಾಯಿಯ ಆರೋಗ್ಯ- ಆರೈಕೆ ಅಗತ್ಯಗಳಿಗಾಗಿ ಬೇರೆ ಬೇರೆಯದೇ ಆದ ಹಲ್ಲುಜ್ಜುವ ಬ್ರಶ್‌ಗಳು ಮಾರುಕಟ್ಟೆಯಲ್ಲಿವೆ. ಬ್ರಶ್‌ಗಳ ಪ್ರಧಾನ ಗುಣಲಕ್ಷಣಗಳು ಮತ್ತು ನಮ್ಮ ನಿರ್ದಿಷ್ಟ ಹಲ್ಲು ಮತ್ತು ಬಾಯಿಯ ಅಗತ್ಯಗಳನ್ನು ಆಧರಿಸಿಕೊಂಡು ನಾವು ಹಲ್ಲುಜ್ಜುವ ಬ್ರಶ್ ಆರಿಸಿಕೊಂಡರೆ ಬಾಯಿ, ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಶುಭ್ರ ನಗುವನ್ನು ಸೂಸುವುದಕ್ಕೆ ಸಾಧ್ಯ.
- ಸಾಫ್ಟ್ ಬ್ರಿಸ್ಟಲ್‌ಗಳು: ಸಾಫ್ಟ್ ಬ್ರಿಸ್ಟಲ್ ಗಳು ವಸಡು, ಹಲ್ಲು ಎನಾಮಲ್‌ಗಳ ಮೇಲೆ ಮೃದುವಾಗಿ ವರ್ತಿಸುತ್ತವೆ; ಹೀಗಾಗಿ ಸೂಕ್ಷ್ಮ ಸಂವೇದಿ ಹಲ್ಲುಗಳು ಮತ್ತು ವಸಡುಗಳನ್ನು ಹೊಂದಿರುವವರಿಗೆ ಇವು ಸೂಕ್ತ. ಕಿರಿಕಿರಿ, ನೋವು ಉಂಟು ಮಾಡದೆ ಇವು ಪ್ಲೇಕ್ ಮತ್ತು ಕೊಳೆಯನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತವೆ.
- ಮೀಡಿಯಂ ಬ್ರಿಸ್ಟಲ್‌ಗಳು: ಮೃದುತ್ವ ಮತ್ತು ಗಡಸುತನಗಳ ನಡುವಣ ಸಮತೋಲನವನ್ನು ಮೀಡಿಯಂ ಬ್ರಿಸ್ಟಲ್‌ಗಳು ಸಾಧಿಸುತ್ತವೆ. ಇವು ಸಾಫ್ಟ್ ಬ್ರಿಸ್ಟಲ್‌ಗಳಿಗಿಂತ ಸ್ವಲ್ಪ ಗಡಸು, ಹೀಗಾಗಿ ಶುಚಿಗೊಳಿಸುವ ಸಾಮರ್ಥ್ಯ ಸಾಫ್ಟ್ ಬ್ರಿಸ್ಟಲ್‌ಗಳಿಗಿಂತ ಕೊಂಚ ಹೆಚ್ಚು. ಆದರೆ ಇವು ಸೂಕ್ಷ್ಮ ಸಂವೇದಿ ಹಲ್ಲುಗಳು ಮತ್ತು ವಸಡು ಹೊಂದಿರುವವರಿಗೆ ಸೂಕ್ತವಾದುವಲ್ಲ.
- ಹಾರ್ಡ್ ಬ್ರಿಸ್ಟಲ್‌ಗಳು: ಹಾರ್ಡ್ ಬ್ರಿಸ್ಟಲ್‌ಗಳು ಹೆಚ್ಚು ಗಡುಸಾಗಿದ್ದು, ಹೆಚ್ಚು ತೀವ್ರತರಹದ ಶುಚಿಗೊಳಿಸುವ ಕೆಲಸ ಮಾಡುತ್ತವೆ. ಹೆಚ್ಚು ಗಟ್ಟಿಯಾದ ಪ್ಲೇಕ್ ಮತ್ತು ಕೊಳೆಯನ್ನು ತೆಗೆದುಹಾಕಲು ಇವು ಪ್ರಯೋಜನಕಾರಿ. ಆದರೆ ಇವುಗಳ ಬಳಕೆಯಲ್ಲಿ ಜಾಗರೂಕರಾಗಿರಬೇಕು ಏಕೆಂದರೆ ವಸಡುಗಳು ಮತ್ತು ಹಲ್ಲುಗಳ ಎನಾಮಲ್ ಗಳಿಗೆ ಹಾನಿಯಾಗಬಹುದು. ಹೀಗಾಗಿ ದೈನಿಕ ಬಳಕೆಗೆ ಅದರಲ್ಲೂ ಸೂಕ್ಷ್ಮ ಸಂವೇದಿ ವಸಡು ಮತ್ತು ಹಲ್ಲುಗಳನ್ನು ಹೊಂದಿರುವವರಿಗೆ ಇವು ಸೂಕ್ತವಲ್ಲ.
- ಎಕ್ಸ್‌ಟ್ರಾ ಸಾಫ್ಟ್ ಬ್ರಿಸ್ಟಲ್ ಗಳು: ಇವು ಸಾಫ್ಟ್ ಬ್ರಿಸ್ಟಲ್ ಬ್ರಶ್ ಗಳಿಗಿಂತಲೂ ಮೃದುವಾಗಿದ್ದು, ಹಲ್ಲುಗಳು ಮತ್ತು ವಸಡು ತೀರಾ ಸೂಕ್ಷ್ಮ ಸಂವೇದಿಯಾಗಿರುವವರಿಗೆ ಇವುಗಳನ್ನು ಶಿಫಾರಸು ಮಾಡಲಾಗುತ್ತದೆ. ಇವುಗಳನ್ನು ತೀರಾ ಮೃದು ಮತ್ತು ನವಿರಾಗಿದ್ದೂ ಕೊಳಚೆಯನ್ನು ಪರಿಣಾಮಕಾರಿಯಾಗಿ ನಿರ್ಮೂಲಗೊಳಿಸುವಂತೆ ವಿನ್ಯಾಸ ಮಾಡಲಾಗಿರುತ್ತದೆ.
- ಟೇಪರ್ಡ್ ಬ್ರಿಸ್ಟಲ್ಸ್: ಪರ್ಡ್ ಬ್ರಿಸ್ಟಲ್ಸ್ ದುಂಡನೆಯ ಅಥವಾ ಮೊನೆಯುಳ್ಳ ತಲೆಯನ್ನು ಹೊಂದಿರುತ್ತವೆ. ಹಲ್ಲುಗಳ ನಡುವೆ, ವಸಡಿನ ಒಳಭಾಗದಂತಹ ಸ್ಥಳಗಳಿಗೂ ತಲುಪಿ ಶುಚಿಗೊಳಿಸುವ ಕೆಲಸ ಇವುಗಳಿಂದ ಸಾಧ್ಯ. ಪ್ಲೇಕ್ ನಿರ್ಮೂಲಗೊಳಿಸಿ ವಸಡಿನ ಕಾಯಿಲೆಗಳು ಉಂಟಾಗುವ ಅಪಾಯವನ್ನು ದೂರ ಮಾಡುವಲ್ಲಿ ಇವು ಪರಿಣಾಮಕಾರಿ.
- ಕ್ರಿಸ್‌ಕ್ರಾಸ್ ಬ್ರಿಸ್ಟಲ್ಸ್: ಬ್ರಿಸ್ಟಲ್ ಗಳು ಬೇರೆ ಬೇರೆ ಕೋನಗಳಲ್ಲಿ ಇರುವಂತೆ ವಿನ್ಯಾಸಗೊಂಡಿರುವ ಬ್ರಶ್‌ಗಳಿವು. ಹಲ್ಲುಗಳನ್ನು ಹಲವು ಕೋನಗಳಿಂದ ತಿಕ್ಕಿ ಶುಚಿಗೊಳಿಸುವುದು ಇವುಗಳಿಂದ ಸಾಧ್ಯ.
- ಮಲ್ಟಿ-ಲೆವೆಲ್ ಬ್ರಶ್: ಇವುಗಳಲ್ಲಿ ಬ್ರಿಸ್ಟಲ್‌ಗಳು ಬೇರೆ ಬೇರೆ ಹಂತಗಳಲ್ಲಿ ಮೆಟ್ಟಿಲುಗಳಂತೆ ಜೋಡಣೆಗೊಂಡಿರುತ್ತವೆ. ಹಲ್ಲುಗಳ ವಿವಿಧ ಎತ್ತರ-ತಗ್ಗುಗಳನ್ನು, ಮುಂಭಾಗ, ಹಿಂಭಾಗ ಮತ್ತು ಜಗಿಯುವ ಭಾಗ ಸಹಿತ ಏಕಕಾಲದಲ್ಲಿ ಶುಚಿಗೊಳಿಸುವುದು ಇದರಿಂದ ಸಾಧ್ಯ.
Related Articles
Advertisement
ಅಸೋಸಿಯೇಟ್ ಪ್ರೊಫೆಸರ್ ಓರಲ್ ಸರ್ಜರಿ ವಿಭಾಗ,
ಎಂಸಿಒಡಿಎಸ್, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ದಂತ ವೈದ್ಯಕೀಯ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)