Advertisement
ಆತ ಅವಳಿಗಾಗಿ ಹುಡುಕಾಟ ನಡೆಸತೊಡಗಿದ. ತನಗೆ ಪರಿಚಯವಿದ್ದಲ್ಲೆಲ್ಲ ಹೋಗಿ ವಿಚಾರಿಸಿದ. ಅವಳ ಸಂಬಂಧಿಕರು, ಪರಿಚಿತರು, ಗೆಳತಿಯರು – ಎಲ್ಲರ ಮನೆಗೂ ಹೋಗಿಬಂದ. ಸಂಜೆಯ ಹೊತ್ತಿಗೆ ಯಾವುದೋ ಕಾಡಬದಿಯ ಊರನ್ನು ತಲುಪಿದ. ದಣಿದು ಹೈರಾಣಾಗಿದ್ದ ಅವನಿಗೆ, ಕಾಡಿನ ಹಾದಿ ಆರಂಭವಾಗುವಲ್ಲೇ ಸನ್ಯಾಸಿಯೊಬ್ಬ ಕುಟೀರ ಕಟ್ಟಿಕೊಂಡು ನೆಲೆಸಿದ್ದ ವಿಚಾರ ತಿಳಿಯಿತು. ಸರಿ, ಕೊನೆಯ ಪ್ರಯತ್ನವೆಂದು ಆತ ಕಾಲೆಳೆದುಕೊಂಡು ಕುಟೀರದ ಬಳಿ ಬಂದ. ಸನ್ಯಾಸಿಯನ್ನು ಕಂಡು ಉದ್ದಂಡ ನಮಸ್ಕಾರ ಮಾಡಿ ನಿಡುಸುಯುತ್ತ ನಿಂತ.
“”ಯಾರಪ್ಪ ನೀನು?” – ಸಂನ್ಯಾಸಿ ಕರುಣೆಯಿಂದ ಕೇಳಿದ.
“”ನಾನೊಬ್ಬ ನತದೃಷ್ಟ ಸ್ವಾಮಿ. ನಾನೊಂದು ಅಮೂಲ್ಯವಾದ ವಸ್ತುವನ್ನು ಕಳೆದುಕೊಂಡಿದ್ದೇನೆ”.
“”ಹೌದೆ? ಏನದು?”
“”ಅದು ಅಲ್ಲ ಸ್ವಾಮಿ! ಅವಳು! ನನ್ನವಳು! ಇಂದು ಮುಂಜಾನೆಯಿಂದ ಕಾಣೆಯಾಗಿದ್ದಾಳೆ. ಅವಳನ್ನು ಇಡೀ ದಿನ ಹುಡುಕಿದೆ. ಸಿಗಲಿಲ್ಲ. ಕಡೆಗೆ ನಿಮ್ಮನ್ನೊಮ್ಮೆ ನೋಡಿ ವಿಚಾರಿಸೋಣವೆಂದು ಬಂದೆ. ಹೇಳಿ, ಯಾವುದಾದರೂ ಹೆಂಗಸು ಈ ದಾರಿಯಾಗಿ ಬಂದು ಹೋದದ್ದನ್ನು ಕಂಡಿರಾ?”
“”ಇಲ್ಲಪ್ಪ . ಏನವಳ ಹೆಸರು?”
“”ಹೆಸರು ಕಟ್ಟಿಕೊಂಡು ಏನು ಮಾಡೋಣ ಸ್ವಾಮಿ. ಅವಳ ಹೆಸರು ಆತಂಕ”. ಸನ್ಯಾಸಿಗೆ ನಗು ಬಂತು. “”ಏನಂದೆ? ಆತಂಕ? ಹೆಣ್ಣನ್ನು ಆತಂಕ ಅಂತ ಕರೆಯುತ್ತಿರುವ ಒಬ್ಬನನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಅಂದ ಹಾಗೆ, ನಿನ್ನ ಹೆಸರೇನು?”
“”ನಾನು ತಿಳಿಗೇಡಿ, ಸ್ವಾಮಿ!”
ಸನ್ಯಾಸಿಗೆ ಈಗ ನಗು ತಡೆಯಾಗಲಿಲ್ಲ. “ಹೋ, ಹೋ’ ಎಂದು ನಗುತ್ತಲೇ ಹೇಳಿದ – “”ಅಯ್ನಾ ತಿಳಿಗೇಡಿ, ಹಾಗಿದ್ದರೆ ನೀನು ಎಲ್ಲೂ ಹುಡುಕಬೇಕಾಗಿಲ್ಲ. ಸುಮ್ಮಗೆ ಇದ್ದಲ್ಲೇ ಇದ್ದು ಬಿಟ್ಟರೆ ಸಾಕು. ಆತಂಕ ತಾನೇ ನಿನ್ನನ್ನು ಅರಸಿ ಬರುವುದನ್ನು ನೀನೇ ನೋಡುವೆಯಂತೆ. ತಿಳಿಗೇಡಿಯನ್ನು ಆತಂಕ ಎಂದಾದರೂ ಹೆಚ್ಚು ಕಾಲ ಬಿಟ್ಟಿರಲು ಸಾಧ್ಯವೇ?”
Related Articles
Advertisement