Advertisement

ಸಾರಿಗೆ ಇಲಾಖೆ ಆದಾಯದಲ್ಲಿ ತುಸು ಚೇತರಿಕೆ

02:13 PM Jun 29, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ನೆಲಕಚ್ಚಿದ್ದ ಸಾರಿಗೆ ಇಲಾಖೆಯ ಆದಾಯದಲ್ಲಿ ಕೊಂಚ ಚೇತರಿಕೆ ಕಂಡಿದ್ದು, ಬೆಳಗಾವಿ ವಿಭಾಗ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಹೊಸ ವಾಹನಗಳ ನೋಂದಣಿ ಸೇರಿದಂತೆ ಅಗತ್ಯ ಸೇವೆಗಳಿಗೆ ಜನರು ಮುಂದಾಗಿದ್ದಾರೆ.

Advertisement

ರಾಜ್ಯದ ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯ ನೀಡುವ ಇಲಾಖೆಗಳ ಪೈಕಿ ನಾಲ್ಕನೇ ಸ್ಥಾನ ಸಾರಿಗೆ ಇಲಾಖೆಯದ್ದು. ಆದರೆ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಿದ ಲಾಕ್‌ಡೌನ್‌ ಪರಿಣಾಮ ಸಾರಿಗೆ ಇಲಾಖೆಯ ಆದಾಯಕ್ಕೂ ಕೊಕ್ಕೆ ಬಿದ್ದಿತ್ತು. ಆದರೆ ಜೂ.1ರಿಂದ ಆರಂಭವಾದ 5ನೇ ಹಂತದ ಲಾಕ್‌ ಡೌನ್‌ ಸಂದರ್ಭದಲ್ಲಿ ನೀಡಿದ ವಿನಾಯಿತಿಯಿಂದ ಸಾರಿಗೆ ಇಲಾಖೆ ಆದಾಯದಲ್ಲಿ ಕೊಂಚ ಏರಿಕೆ ಕಂಡಿದೆಯಾದರೂ ತಿಂಗಳ ಗುರಿಗೆ ಹೋಲಿಸಿದರೆ ಕಡಿಮೆಯಾಗಿದೆ. ಬೆಳಗಾವಿ ವಿಭಾಗದಲ್ಲಿ ಜೂ.1ರಿಂದ 15ರವರೆಗೆ 21,98,56,125 ರೂ. ಆದಾಯ ಸಂಗ್ರಹವಾಗಿದೆ.

ಬೆಳಗಾವಿ ವಿಭಾಗವೊಂದಕ್ಕೆ 2020-21ನೇ ಸಾಲಿನಲ್ಲಿ 811.44 ಕೋಟಿ ರೂ. ಗುರಿ ನಿಗದಿ ಪಡಿಸಲಾಗಿದ್ದು, ವಿಭಾಗ ವ್ಯಾಪ್ತಿಯ 17 ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ಪ್ರತಿ ತಿಂಗಳು ಸರ್ಕಾರದ ಬೊಕ್ಕಸಕ್ಕೆ 67.62 ಕೋಟಿ ರೂ. ಆದಾಯ ಸಲ್ಲಿಕೆಯಾಗಬೇಕು. ಆದರೆ ಲಾಕ್‌ಡೌನ್‌ ಅವಧಿಯ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಆದಾಯ ಸಂಪೂರ್ಣ ನೆಲಕಚ್ಚಿತ್ತು. ಏಪ್ರಿಲ್‌ ತಿಂಗಳಲ್ಲಿ 8.14 ಕೋಟಿ ರೂ. ಹಾಗೂ ಮೇ ತಿಂಗಳಲ್ಲಿ 26.03 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಹೀಗಾಗಿ ಎರಡು ತಿಂಗಳಲ್ಲಿ 101.06 ಕೋಟಿ ರೂ. ಆದಾಯ ಖೋತಾ ಆಗಿದೆ. ಆರ್ಥಿಕ ಸಂಕಷ್ಟ ಇರುವುದರಿಂದ ರಾಜ್ಯ ಸರ್ಕಾರ ವಾಣಿಜ್ಯ ಬಳಕೆ ವಾಹನಗಳಿಗೆ ಎರಡು ತಿಂಗಳ ತೆರಿಗೆ ವಿನಾಯಿತಿ ನೀಡಿರುವುದು ಆದಾಯ ಕಡಿಮೆಯಾಗಲು ಕಾರಣವಾಗಿದೆ.

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಬಿಎಸ್‌-4 ಮಾದರಿಯ ವಾಹನಗಳ ಮಾರಾಟಕ್ಕೆ ಗಡುವು ನೀಡಿದ ಹಿನ್ನೆಲೆಯಲ್ಲಿ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಈ ವಾಹನಗಳ ನೋಂದಣಿಗೆ ಅವಕಾಶ ನೀಡಲಾಗಿತ್ತು. ಪರಿಣಾಮ ಎರಡು ತಿಂಗಳಲ್ಲಿ ಒಂದಿಷ್ಟು ಆದಾಯದ ಮುಖ ನೋಡುವಂತಾಗಿದ್ದು, ಸಾರಿಗೆ ಅಧಿಕಾರಿಗಳು ನಿರೀಕ್ಷಿಸಿದಷ್ಟು ಆದಾಯ ತಲುಪಿಲ್ಲ. ಒಂದು ವೇಳೆ ಈ ವಾಹನಗಳ ನೋಂದಣಿಗೆ ಅವಕಾಶ ಇರದಿದ್ದರೆ ಇಲಾಖೆಯ ಆದಾಯ ಶೂನ್ಯವಾಗುತ್ತಿತ್ತು.

ಸುಧಾರಣೆ ನಿರೀಕ್ಷೆ: 2019-20ನೇ ಸಾಲಿನಲ್ಲಿ ವಿಭಾಗಕ್ಕೆ 801.55 ಕೋಟಿ ರೂ. ಗುರಿ ನಿಗದಿಪಡಿಸಲಾಗಿತ್ತು. 774.71 ಕೋಟಿ ರೂ. ಆದಾಯ ಸಂಗ್ರಹವಾಗುವ ಮೂಲಕ ಶೇ.97 ಸಾಧನೆಯಾಗಿತ್ತು. ಆದರೆ ಈ ಬಾರಿಯ ಎರಡು ತಿಂಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳ ಮೇಲೆ ಆರ್ಥಿಕ ಸಮಸ್ಯೆ ಉಂಟಾಗಿದ್ದರಿಂದ ಈ ಆರ್ಥಿಕ ವರ್ಷಕ್ಕೆ ನೀಡಿದ ಗುರಿಯಲ್ಲಿ ಶೇ.70 ಸಾಧಿಸುವುದು ಕಷ್ಟ ಎನ್ನುವ ಅಭಿಪ್ರಾಯಗಳಿವೆ.

Advertisement

ಆದರೆ ಕಳೆದ ಎರಡು ತಿಂಗಳಿಗೆ ಹೋಲಿಸಿದರೆ ಜೂನ್‌ ಮೊದಲ ವಾರದಿಂದ ಸಾರಿಗೆ ಇಲಾಖೆ ಸೇವೆಗೆ ಜನರು ಮುಂದಾಗುತ್ತಿದ್ದು, ಪ್ರಮುಖವಾಗಿ ಹೊಸ ವಾಹನಗಳ ನೋಂದಣಿ ಸೇರಿದಂತೆ ಇನ್ನಿತರೆ ಅಗತ್ಯ ಸೇವೆಗಳನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜೂನ್‌ ತಿಂಗಳ ಮೊದಲ 15 ದಿನಗಳಲ್ಲಿ 21.98 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, ಇದು ಸುಧಾರಣೆಯ ಮುನ್ಸೂಚನೆ ಎನ್ನುವ ಲೆಕ್ಕಾಚಾರ ಅಧಿಕಾರಿಗಳಲ್ಲಿದೆ.

ಲಾಕ್‌ಡೌನ್‌ನಲ್ಲಿ ನೋಂದಣಿ ಗಣನೀಯ ಇಳಿಕೆ : ಲಾಕ್‌ಡೌನ್‌ ಅವಧಿಯ ಎರಡು ತಿಂಗಳಲ್ಲಿ ಬಿಎಸ್‌-4 ಮಾದರಿಯ ವಾಹನಗಳ ನೋಂದಣಿಗೆ ಅವಕಾಶ ಕಲ್ಪಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ವಾಹನಗಳ ನೋಂದಣಿಯಾಗಿಲ್ಲ. ಎರಡು ತಿಂಗಳಲ್ಲಿ 8994 ದ್ವಿಚಕ್ರ ವಾಹನ ಹಾಗೂ 774 ನಾಲ್ಕು ಚಕ್ರದ ವಾಹನಗಳು ಸೇರಿದಂತೆ ಒಟ್ಟು 10,855 ವಾಹನಗಳು ನೋಂದಣಿಯಾಗಿದೆ. ಆದರೆ 2019-20ರ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ 33,872 ದ್ವಿಚಕ್ರ ಹಾಗೂ 3208 ನಾಲ್ಕು ಚಕ್ರದ ವಾಹನ ಸೇರಿದಂತೆ 43,898 ಹೊಸ ವಾಹನಗಳು ನೋಂದಣಿಯಾಗಿದ್ದು, ಎರಡು ತಿಂಗಳ ಅವಧಿಯಲ್ಲಿ ಹೊಸ ವಾಹನಗಳ ನೋಂದಣಿಯಲ್ಲೂ ಭಾರೀ ಪ್ರಮಾಣದ ಇಳಿಕೆಯಾಗಿದೆ.

ತಗ್ಗಿದ ಫ್ಯಾನ್ಸಿ ನಂಬರ್‌ ಬೇಡಿಕೆ : ಹೊಸ ವಾಹನಗಳ ನೋಂದಣಿ ಸೇರಿದಂತೆ ಅಗತ್ಯ ಪ್ರಮಾಣಪತ್ರ ಪಡೆಯಲು ಮಾತ್ರ ಕಚೇರಿಗಳತ್ತ ಆಗಮಿಸುತ್ತಿದ್ದು, ಚಾಲನಾ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಸೇರಿದಂತೆ ಇನ್ನಿತರ ಸೇವೆಗಳಿಗೆ ಜನರು ಹಿಂದೇಟು ಹಾಕುತ್ತಿದ್ದು, ಕೋವಿಡ್ ಸೋಂಕಿನ ಭಯದಿಂದ ಸಾರಿಗೆ ಕಚೇರಿಗಳತ್ತ ಮುಖ ಮಾಡುತ್ತಿಲ್ಲ. ಇನ್ನು ಫ್ಯಾನ್ಸಿ ನೋಂದಣಿ ಸಂಖ್ಯೆ ಬೇಡಿಕೆ ಕಡಿಮೆಯಾಗಿದೆ.

ಲಾಕ್‌ಡೌನ್‌ ಪರಿಣಾಮ ಎಲ್ಲಾ ಕ್ಷೇತ್ರಗಳಂತೆ ಸಾರಿಗೆ ಇಲಾಖೆಯ ಆದಾಯ ಸಂಗ್ರಹಣೆಗೆ ಹಿನ್ನಡೆಯಾಗಿದೆ. ಹೊಸ ವಾಹನಗಳ ನೋಂದಣಿಯಲ್ಲೂ ಸಾಕಷ್ಟು ಇಳಿಮುಖವಾಗಿದೆ. ಏಪ್ರಿಲ್‌ ಮತ್ತು ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ ತಿಂಗಳ ಮೊದಲ 15 ದಿನಗಳ ಆದಾಯ ಸಂಗ್ರಹದಲ್ಲಿ ಚೇತರಿಕೆ ಎನ್ನಬಹುದಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣೆಯಾಗುವ ನಿರೀಕ್ಷೆಗಳಿವೆ. -ಜೆ.ಪುರುಷೋತ್ತಮ, ಜಂಟಿ ಸಾರಿಗೆ ಆಯುಕ್ತ, ಬೆಳಗಾವಿ ವಿಭಾಗ

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next