Advertisement

ಬಂಟ್ವಾಳ: ಒಂಟಿ ಮಹಿಳೆಯನ್ನು ಕಟ್ಟಿ ಹಾಕಿ ದರೋಡೆ

09:20 AM Dec 23, 2022 | Team Udayavani |

ಬಂಟ್ವಾಳ: ಒಬ್ಬಂಟಿಯಾಗಿ ಮನೆಯಲ್ಲಿದ್ದ ವೇಳೆ ಮಹಿಳೆಯೊರ್ವಳನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿ ಬಳಿಕ ದರೋಡೆ ಮಾಡಿದ ಘಟನೆ ತಾಲೂಕಿನ ಬರಿಮಾರು ಗ್ರಾಮದ ಕಾಗೆಕಾನದಲ್ಲಿ ಡಿ.22 ರಂದು ಗುರುವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ನಡೆದಿದೆ.
ಬರಿಮಾರು ಗ್ರಾಮದ ಕಡೆಕನ ನಿವಾಸಿ ರೋಹಿತ್ ಎಂಬವರ ಪತ್ನಿ ಪವಿತ್ರ ಎಂಬಾಕೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಮನೆಯಿಂದ ರಾಬರಿ ಮಾಡಲಾಗಿದೆ ಎಂಬ ದೂರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಘಟನೆ ವಿವರ:
ರೋಹಿತ್ ಕುಮಾರ್ ಅವರು ಐಸ್ ಕ್ರೀಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸಕ್ಕೆ ಹೋಗಿದ್ದರು. ಪತ್ನಿ ಪವಿತ್ರ ಮನೆಯಲ್ಲಿರುತ್ತಿದ್ದರು. ಮಕ್ಕಳಿಬ್ಬರು ಗುರುವಾರ ಮೂಡಬಿದಿರೆಯಲ್ಲಿ ನಡೆಯುವ ಜಾಂಬೂರಿ ಕಾರ್ಯಕ್ರಮಕ್ಕೆ ತೆರಳಿದ್ದರು.
ಸಂಜೆ ಸುಮಾರು 6.30 ರ ವೇಳೆ ಪವಿತ್ರ ಅವರು ಮನೆಯ ಬಾತ್ ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮನೆಯ ಮಾಡಿಗೆ ಕಲ್ಲು ಹೊಡೆದ ಶಬ್ದವಾಯಿತು, ಆ ಬಳಿಕ ಮನೆಯ ಕಿಟಕಿ ಬಾಗಿಲಿನ ಗಾಜಿಗೆ ಕಲ್ಲು ಎಸೆಯಲಾಗಿತ್ತು. ಸ್ನಾನ ಮಾಡಿ ಹೊರಬಂದು ನೋಡಿದಾಗ ಯಾರು ಕಾಣಲಿಲ್ಲ, ಯಾರು ಇಲ್ಲ ಅಂತ ವಾಪಾಸು ಬಾತ್ ರೂಮ್ ನ ಬಾಗಿಲು ಹಾಕಲು ಬರುವ ವೇಳೆ ಇಬ್ಬರು ಮುಸುಕುದಾರಿ ಅಪರಿಚಿತ ವ್ಯಕ್ತಿಗಳು ಏಕಾಏಕಿ ಪವಿತ್ರರನ್ನು ಎಳೆದುಕೊಂಡು ಹೋಗಿ ಮನೆಯ ಆಂಗಳದಲ್ಲಿದ್ದ ಅಡಿಕೆ ಮರದ ಕಂಬಕ್ಕೆ ನೈಲಾನ್ ಹಗ್ಗದಿಂದ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ.
ಆ ಬಳಿಕ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಕಾಣೆಯಾಗಿದೆ.ಮನೆಯೊಳಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಟೇಬಲ್ ಮೇಲೆ ಇದ್ದ ನಗದು 4 ಸಾವಿರ ಹಾಗೂ ಅಂಗಳದಲ್ಲಿದ್ದ ಅಡಿಕೆ ಗೋಣಿಯನ್ನು ಕೊಂಡುಹೋಗಿದ್ದಾರೆ ಹಾಗೂ ಕಪಾಟು ಒಳಗೆ ಜಾಲಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪವಿತ್ರ ಅವರನ್ನು ಕಟ್ಟಿ ಹಾಕಿದ ಬಗ್ಗೆ ಯಾರು ಕೂಡ ಗಮನಿಸಿಲ್ಲ, ಸುಮಾರು 7 ಅಂದಾಜಿಗೆ ಮನೆಯ ಸಮೀಪದ ಮನೆಯವರು ನೋಡಿ ಕಟ್ಟಿ ಹಾಕಿದನ್ನು ಬಿಚ್ಚಿದ ಬಳಿಕ ಘಟನೆಯ ಬಗ್ಗೆ ತಿಳಿದಿದೆ. ಬಿಜೆಪಿ ಮುಖಂಡ ಗಣೇಶ್ ರೈ ಮಾಣಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್. ಐ.ಹರೀಶ್ ಭೇಟಿ ನೀಡಿದ್ದಾರೆ.ಇಂದು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸುವ ಬಗ್ಗೆ ಎಸ್.ಐ.ಹರೀಶ್ ‌ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next