ವೈದ್ಯಕೀಯ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳ ಅರ್ಜಿ ಸಲ್ಲಿಕೆ ವಿಧಾನವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರಳೀಕರಣ ಮಾಡಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ. ಸದ್ಯ ವೈದ್ಯಕೀಯ ಪರೀಕ್ಷೆಗಾಗಿ ನೀಟ್‌ಗೆ ಒಂದು ಪ್ರವೇಶ ಅರ್ಜಿ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಸಿಇಟಿಗೆ ಬೇರೊಂದು ಅರ್ಜಿ ಸಲ್ಲಿಕೆ ಮಾಡಬೇಕಾಗಿತ್ತು. ಇನ್ನು ಮುಂದೆ ಸಿಇಟಿ, ಪಿಜಿ ಸಿಇಟಿ, ನೀಟ್, ಪಿಜಿ ನೀಟ್‌ಗಳಿಗೆ ಒಂದೇ ಅರ್ಜಿ ಸಲ್ಲಿಸಿದರೆ ಸಾಕು.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ನಿರ್ಧಾರ ಜಾರಿಗೆ ಬರಲಿದ್ದು, ವಿದ್ಯಾರ್ಥಿಗಳ ಸಮಯ ಮತ್ತು ಪರಿಶ್ರಮವೆರಡೂ ಉಳಿತಾಯವಾಗಲಿದೆ. ಶುಲ್ಕ ಪಾವತಿಯೂ ಸರಳೀಕರಣವಾಗಲಿದೆ ಎಂಬುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಂಬೋಣ.
ಸದ್ಯ ತಂತ್ರಜ್ಞಾನ ಅಳವಡಿಕೆ ವಿಚಾರದಲ್ಲಿ ಬೇರೆಲ್ಲ ಇಲಾಖೆಗಳಿಗಿಂತ, ಕೆಇಎ ಮುಂದಿದೆ ಎಂಬುದು ಖುಷಿಯ ವಿಚಾರ. ಕೆಇಎ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿಶಿಷ್ಟ ಸಂಖ್ಯೆಯನ್ನು ನೀಡಲಿದ್ದು, ಇದೇ ನಂಬರ್ ಅನ್ನು ಬಳಸಿ ವಿದ್ಯಾರ್ಥಿ ಸಿಇಟಿ, ನೀಟ್‌ಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ದತ್ತಾಂಶಗಳನ್ನು ಕನಿಷ್ಠ 5 ವರ್ಷದ ವರೆಗೆ ಕಾಪಿಡಲಾಗುತ್ತದೆ. ಈ ಅವಧಿಯಲ್ಲಿ ಪ್ರಾಧಿಕಾರ ನಡೆಸುವ ಎಲ್ಲಾ ಪರೀಕ್ಷೆಗಳಲ್ಲೂ ವಿಶಿಷ್ಟ ಕೋಡ್ ಅನ್ನು ಬಳಸಿಯೇ ಅರ್ಜಿ ಸಲ್ಲಿಕೆ ಮಾಡಬಹುದು. ಅಂದರೆ, ಒಮ್ಮೆ ಯೂನಿಕ್ ನಂಬರ್ ಅನ್ನು ಬಳಕೆ ಮಾಡಿ ಹೆಸರು, ವಿಳಾಸ ಮೊಬೈಲ್ ಸಂಖ್ಯೆ, ಪೋಷಕರ ಹೆಸರು, ಎಸ್‌ಎಸ್
ಎಲ್‌ಸಿ ಅಂಕಪಟ್ಟಿ, ಜಾತಿ, ಮೀಸಲಾತಿ ಸೇರಿದಂತೆ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ. ಜತೆಗೆ ಶುಲ್ಕ ಪಾವತಿ ವಿಧಾನವನ್ನು ಕೂಡ ಸರಳಗೊಳಿಸಿದ್ದು, ಫೋನ್‌ಪೇ, ಗೂಗಲ್ ಪೇ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ಮೂಲಕವೂ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಡೆಬಿಟ್ ಕಾರ್ಡ್ ಅಥವಾ ಬ್ಯಾಂಕ್‌ಗಳ ಮೂಲಕ ಮಾತ್ರ ಪಾವತಿ ಮಾಡಬೇಕಿತ್ತು.
ಈ ಎಲ್ಲ ಸಂಗತಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತಮವಾದ ನಿರ್ಧಾರಗಳೇ ಆಗಿವೆ. ಯಾವುದೇ ಕೋರ್ಸ್‌ಗೆ ಸೇರುವ ಮುನ್ನ ವಿದ್ಯಾರ್ಥಿಗಳ ತಲೆನೋವಿಗೆ ಕಾರಣವಾಗುವುದು ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆಯೇ. ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು, ಇದರಲ್ಲಿ ಏನಾದರೂ ತಿದ್ದುಪಡಿಗಳಿದ್ದರೆ ಅವುಗಳನ್ನು ಸರಿ ಮಾಡಿಸುವ ಯತ್ನ. ಈ ಸಂಗತಿಗಳಲ್ಲೇ ಹೆಚ್ಚಿನ ಕಾಲ ವ್ಯಯವಾಗುತ್ತದೆ. ಅಲ್ಲದೆ, ಕೆಲವೊಂದು ದಾಖಲೆಗಳು ನಿಗದಿತ ಸಮಯಕ್ಕೆ ಸಿಗದೇ ಪರದಾಡುವಂತಾಗುತ್ತದೆ. ಈಗ 5 ವರ್ಷದವರೆಗೆ ದತ್ತಾಂಶಗಳನ್ನು ವೆಬ್‌ಸೈಟ್‌ನಲ್ಲೇ ಸಂಗ್ರಹಿಸಿ ಇಡುವುದರಿಂದ ಪ್ರತೀ ವರ್ಷ ಈ ದಾಖಲೆಗಳಿಗಾಗಿ ಪರದಾಡುವುದು ತಪ್ಪುತ್ತದೆ.
ಹೇಗೂ ಸಿಇಟಿ ಮತ್ತು ನೀಟ್‌ಗೆ ಅರ್ಜಿ ಸಲ್ಲಿಸುವಾಗ ಎಲ್ಲ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದೇ ದಾಖಲೆಗಳು ಪಿಜಿ ಸಿಇಟಿ ಮತ್ತು ಪಿಜಿ ನೀಟ್‌ಗೆ ಹೋಗುವಾಗ ಮತ್ತೂಮ್ಮೆ ನೀಡಬೇಕಾದ ಅಗತ್ಯತೆಯೂ ಬೇಕಾಗಿಲ್ಲ. ಇದಕ್ಕೆ ಬದಲಾಗಿ ವಿಶಿಷ್ಟ ನಂಬರ್ ನೀಡಿದರೆ ಸಾಕು.
ವೇದಿಕೆಯೇನೋ ಚೆನ್ನಾಗಿದೆ. ಆದರೆ ಇದರ ನಿರ್ವಹಣೆಯೂ ಅಷ್ಟೇ ಪರಿಣಾಮಕಾರಿಯಾಗಿ ಮಾಡಬೇಕಾಗುತ್ತದೆ. ಸಿಇಟಿ
ವೇಳೆಯಲ್ಲಿ ಸರ್ವರ್ ಕೈಕೊಡುವುದು ಸೇರಿದಂತೆ ಕೆಲವೊಂದು ಸಮಸ್ಯೆಗಳು ಕಾಣಿಸುತ್ತಲೇ ಇರುತ್ತವೆ. ಇವುಗಳನ್ನು ಸರಿಪಡಿಸಿಕೊಂಡು ಉತ್ತಮವಾಗಿ ವ್ಯವಸ್ಥೆ ನೀಡುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೊಣೆಯಾಗಿದೆ.