ಮುದ್ದೇಬಿಹಾಳ: ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಜಾತ್ರೆ ರದ್ದಾಗಿದ್ದರೂ ಊರ ದೈವದರು, ಜಾತ್ರಾ ಸಮಿತಿ ಪ್ರಮುಖರು ಶುಕ್ರವಾರ ಶ್ರೀದೇವಿಗೆ ಉಡಿ ತುಂಬಿ ಸರಳ ಪೂಜೆ ಸಲ್ಲಿಸಿ ಜಾತ್ರೆಯ ಧಾರ್ಮಿಕ ಸಂಪ್ರದಾಯ ಪಾಲಿಸಿದರು.
ಪ್ರತಿ ಮೂರು ವರ್ಷಕ್ಕೊಮ್ಮೆ ಮೇ ತಿಂಗಳಲ್ಲಿ 5 ದಿನ ವರೆಗೆ ಅತ್ಯಂತ ಅದ್ದೂರಿಯಿಂದ ಜಾತ್ರೆ ನಡೆಯುತ್ತಿತ್ತು. ಜಾತ್ರಾ ಕಮಿಟಿಯವರು ಈ ಬಾರಿಯೂ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಕೋವಿಡ್ ಹಿನ್ನೆಲೆ ಲಾಕ್‌ಡೌನ್ ಘೋಷಣೆ ಆಗಿದ್ದರಿಂದ ಸರ್ಕಾರದ ನಿಯಮ ಪಾಲಿಸಲು ಜಾತ್ರೆ ರದ್ದುಗೊಳಿಸಲಾಗಿತ್ತು. ಆದರೆ, ಊರ ದೈವದ ತೀರ್ಮಾನದಂತೆ ಭಕ್ತರು ದೇವಿಯ ಹೆಸರಲ್ಲಿ 5 ವಾರ ಆಚರಿಸಿದ್ದರು. ಶುಕ್ರವಾರ ಕೊನೆಯ ವಾರ ಆಗಿದ್ದರಿಂದ ಶ್ರೀದೇವಿಗೆ ಉಡಿ ತುಂಬಿ ಜಾತ್ರಾ ಸಂಪ್ರದಾಯ ಸಮಾರೋಪಗೊಳಿಸಲಾಯಿತು.
ಬಸರಕೋಡ ನಾಡಗೌಡರ ಮನೆತನದ ಮಲ್ಲಿಕಾರ್ಜುನ ನಾಡಗೌಡ, ಅಶೋಕ ನಾಡಗೌಡ ಅವರು ತಮ್ಮ ಮನೆತನದ ಸಂಪ್ರದಾಯದಂತೆ ಶ್ರೀದೇವಿಗೆ ಮಂಗಳ ಸೂತ್ರ, ಸೀರೆ, ಕಾಲುಂಗುರ ಸಮೇತ ಉಡಿ ತುಂಬುವ ಸಾಮಗ್ರಿಗಳನ್ನು ತಂದಿದ್ದರೆ ಜಾತ್ರಾ ಕಮಿಟಿ ಪ್ರಮುಖರು ಮಂಗಲದ್ರವ್ಯಗಳನ್ನು ತಂದು ದೇವಿಯ ಉಡಿ ತುಂಬುವ ಕಾರ್ಯ ಸಾಂಗವಾಗಿ ನೆರವೇರುವಂತೆ ನೋಡಿಕೊಂಡರು.
ಜಾತ್ರಾ ಕಮಿಟಿ ಅಧ್ಯಕ್ಷ ಶೃಂಗಾರಗೌಡ ಪಾಟೀಲ್, ಪುರಸಭೆ ಸದಸ್ಯ ಚನ್ನಪ್ಪ ಕಂಠಿ, ಪ್ರಮುಖರಾದ ಎಂ.ಎಸ್.ಬಿರಾದಾರ, ಜಗದೀಶ ಲಕ್ಷಟ್ಟಿ, ಮುದಕಪ್ಪ ಅಮರಣ್ಣವರ, ವಿಶ್ವನಾಥ ಪಾಟೀಲ್, ಬಸಯ್ಯ ನಂದಿಕೇಶ್ವರಮಠ, ಅನಿಲ್ ಹಡಪದ, ಮುತ್ತು ನಾಯ್ಯೋಡಿ, ಊರ ಗೌಡರಾದ ಬಸನಗೌಡ ಪಾಟೀಲ್, ಸಂತೋಷ ಪಾಟೀಲ್, ಗ್ರಾಮದೇವತೆ ಅರ್ಚಕರಾದ ಗುಂಡಪ್ಪ ಬಡಿಗೇರ, ಈರಣ್ಣ ಬಡಿಗೇರ ಮತ್ತಿತರರು ಪಾಲ್ಗೊಂಡಿದ್ದರು. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡೇ ಶ್ರೀದೇವಿಯ ದರ್ಶನ ಪಡೆದರು.
ಜನ, ಜಾನುವಾರುಗಳನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವುದಕ್ಕಾಗಿ ಗ್ರಾಮ ದೇವತೆಯರು ಇದ್ದಾರೆ. ಎನ್ನುವ ನಂಬಿಕೆ ಅನಾದಿಕಾಲದ್ದು. ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಜಾತ್ರೆ ಮಾಡಲು ಆಗಿಲ್ಲ. ಸರಳವಾಗಿ ಪೂಜೆ ಸಲ್ಲಿಸಿದ ಸಂಪ್ರದಾಯ ಪಾಲಿಸಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಬಂದಲ್ಲಿ ಮುಂದಿನ ವರ್ಷ ಎಲ್ಲರೂ ಸೇರಿ ಜಾತ್ರೆಯನ್ನು ಅದ್ಧೂರಿಯಿಂದ ನಡೆಸಲು ತೀರ್ಮಾನಿಸಿದ್ದೇವೆ. –
ಎಸ್.ಜಿ.ಪಾಟೀಲ, ಅಧ್ಯಕ್ಷರು, ಗ್ರಾಮದೇವತೆ ಜಾತ್ರಾ ಸಮಿತಿ, ಮುದ್ದೇಬಿಹಾಳ