ಮಂಗಳೂರು: ಸವಾಲು ಗಳೆನಿಸಿದ ಸಮಸ್ಯೆ ನಿರ್ಮೂಲನೆ ಮಾಡಿ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮಹತ್ತರ. ವೈದ್ಯರು ಯಾವುದೇ ಸನ್ನಿವೇಶದಲ್ಲೂ ತಮ್ಮ ನೈತಿಕತೆ ಹಾಗೂ ಮಾನವೀಯ ಮೌಲ್ಯಗಳಿಂದ ಹಿಂದೆ ಸರಿಯಬಾರದು ಎಂದು ಕೇರಳದ ಸಂಸದ ಕೆ.ಸಿ. ವೇಣುಗೋಪಾಲ್ ಅಭಿಪ್ರಾಯಪಟ್ಟರು.
ಎ.ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಗುರುವಾರ ಏರ್ಪಡಿಸಲಾದ ಫೀನಿಕ್ಸ್- 2017 ಅಂತಾರಾಷ್ಟ್ರೀಯ ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಅಭಿವೃದ್ಧಿಗೊಂಡ ಶಿಕ್ಷಣ,ತಂತ್ರಜ್ಞಾನ ಹಾಗೂ ವಿಜ್ಞಾನ ಯುಗದಲ್ಲಿ ನಾವಿದ್ದು, ಇದನ್ನು ಸದುಪ ಯೋಗಪಡಿಸಿಕೊಂಡು ಕೇವಲ ತರಗತಿಗಳಿಗೆ ಮಾತ್ರ ಸೀಮಿತವಾಗದೆ ಸಮಾಜಮುಖೀಯಾಗಿ ಬೆಳೆಯಬೇಕು. ಹಸಿವು, ಬಡತನ, ಮಕ್ಕಳ ಮರಣ ಪ್ರಮಾಣ, ಮಲೇರಿಯಾ, ಎಚ್‌ಐವಿ ಮುಂತಾದ ಪ್ರಮುಖ ಸಮಸ್ಯೆ ನಿವಾರಿಸುವಲ್ಲಿ ಸರಕಾರ ಸಾಕಷ್ಟು ಕ್ರಮ ಕೈಗೊಂಡಿದ್ದು, ಇದನ್ನು ಮೆಟ್ಟಿ ನಿಲ್ಲಲು ಪೂರಕ ಹೆಜ್ಜೆ ಇಡಬೇಕಾಗಿದೆ ಎಂದು ಅವರು ಹೇಳಿದರು.
ನಮ್ಮ ಶಿಕ್ಷಣ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು. ಇಂದು 1,000 ಜನರಿಗೆ ಶೇ. 0.7ರಷ್ಟು ವೈದ್ಯರು ಲಭ್ಯವಿದ್ದು, ಆರೋಗ್ಯ ವಂತ ಸಮಾಜಕ್ಕಾಗಿ ಹೆಚ್ಚು ವೈದ್ಯರ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳು ಶಿಕ್ಷಣ ದೊಂದಿಗೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ಉತ್ತಮ ಸೌಕರ್ಯ, ಪ್ರಯೋಗಶಾಲೆ ಮುಂತಾದವುಗಳನ್ನು ಒದಗಿಸಬೇಕು ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಹೆಜ್ಜೆಯನ್ನಿರಿಸುವ ಮೂಲಕ ಎ.ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ವಿವಿಧ ರಾಷ್ಟ್ರಗಳ ತಜ್ಞರನ್ನು ಆಹ್ವಾನಿಸುವ ಮೂಲಕ ಈ ಸಮ್ಮೇಳನ ಆಯೋಜಿಸಿದ್ದು, ತಜ್ಞರ ಚಿಂತನೆಗಳ ಮೂಲಕ ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಲಿದೆ ಎಂದರು.
ಶ್ರೇಷ್ಠ ವೃತ್ತಿ
ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ವೈದ್ಯಕೀಯ ವೃತ್ತಿ ಒಂದು ಶ್ರೇಷ್ಠ ವೃತ್ತಿಯಾಗಿದ್ದು, ಹಲವರ ಜೀವ ಉಳಿಸಲು ಒಂದು ವರವಿದ್ದಂತೆ. ಈ ಸಮ್ಮೇಳನದ ಮೂಲಕ ತಜ್ಞರು ತಮ್ಮ ವಿಚಾರ ವ್ಯಕ್ತಪಡಿಸಲಿದ್ದು, ಇವೆಲ್ಲವೂ ಒಟ್ಟುಗೂಡಿದ ಬಳಿಕ ಹೊಸತನಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.
ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್‌ಟ್ರಸ್ಟ್ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸ್‌ನ ನಿರ್ದೇಶಕ ಹಾಗೂ ಹಿರಿಯ ನರಶಾಸ್ತ್ರ ತಜ್ಞ ಡಾ| ತಿಮ್ಮಪ್ಪ ಹೆಗ್ಡೆ, ಸಂಸ್ಥೆ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಡಾ| ಪ್ರಶಾಂತ್ ಮಾರ್ಲ, ಡಾ| ಝುವೊ ಹುವಾ ಪ್ಯಾನ್, ಡಾ| ಆ್ಯಂಥನಿ ವಿ. ಪಾಯಸ್, ಮಲೇಶಿಯಾ ವಿಶ್ವವಿದ್ಯಾನಿಲಯದ ಡಾ| ಚೆಂಗ್ ಹಿÌà ಮಿಂಗ್, ಮೊನ್ಯಾಶ್ ವಿಶ್ವವಿದ್ಯಾನಿಲಯದ ಡಾ| ರೋಜರ್ ಎವಾನ್ಸ್ ಮೊದಲಾದವರು ಉಪಸ್ಥಿತರಿದ್ದರು.