Advertisement

ಕಾಡಿದ ಸರಣಿ ಸಾವು; ಇಡೀ ಊರೇ ಖಾಲಿ !

06:00 AM Sep 03, 2018 | |

ರಾಯಚೂರು: ಇದು ದೈವ ಕಾಟವೋ ಪ್ರೇತಚೇಷ್ಟೆಯೋ ಊರಿ ಗಂಟಿದ ಶಾಪವೋ ಗೊತ್ತಿಲ್ಲ. ಆದರೆ ಈ ತಾಂಡಾದಲ್ಲಿ ಸಂಭವಿಸಿದ ಸರಣಿ ಸಾವಿಗೆ ಕಂಗೆಟ್ಟು ಗ್ರಾಮಸ್ಥರು ಊರನ್ನೇ ತೊರೆದ ವಿಚಿತ್ರ ಘಟನೆ ನಡೆದಿದೆ. ಸುಸಜ್ಜಿತ ಮನೆಗಳನ್ನು ಬಿಟ್ಟು ತಗಡಿನ ಸೂರಿನಲ್ಲಿ ಬದುಕುವ ದುರ್ಗತಿ ಬಂದೊದಗಿದೆ. ಇದು ದೇವದುರ್ಗ ತಾಲೂಕು ಬೊಗಡಿ ಗೋಟ ತಾಂಡಾದ ದುಃಸ್ಥಿತಿ. ಈಗ ಇಡೀ ಊರಿನಲ್ಲಿ ಶ್ಮಶಾನ ಮೌನ ಆವರಿಸಿದೆ. ದೊಡ್ಡ ದೊಡ್ಡ ಮನೆಗಳು ಬಿಕೋ ಎನ್ನುತ್ತಿದ್ದರೆ, ಗುಡಿಸಲುಗಳ ಛಾವಣಿ ಹಾರಿ ಹೋಗಿವೆ. 2 ವರ್ಷಗಳಲ್ಲಿ ಸುಮಾರು 70ಕ್ಕೂ ಅಧಿಕ ಜನ ನಾನಾ ಕಾರಣಕ್ಕೆ ಅಸುನೀಗಿದ್ದಾರೆ. ಅದರಲ್ಲಿ  ಕ್ಷುಲ್ಲಕ ಕಾರಣಗಳಿಂದಲೂ ಸಾವುಗಳಾಗಿವೆ. 35 ಮನೆಗಳಿರುವ ಈ ಪುಟ್ಟ ತಾಂಡಾದಲ್ಲಿ 300ಕ್ಕೂ ಅಧಿಕ ಜನ ವಾಸವಾಗಿದ್ದರು. ಹೆಚ್ಚು ಅವಿಭಕ್ತ ಕುಟುಂಬ ಗಳಿದ್ದವು. ಆದರೆ 2 ವರ್ಷಗಳಲ್ಲಿ ಪ್ರತಿ ತಿಂಗಳು ಮೂರ್‍ನಾಲ್ಕು ಸಾವು ಸಂಭವಿಸಿವೆ. ಆರಂಭದಲ್ಲಿ ಇದು ಆಕಸ್ಮಿಕ ಎಂದೇ ನಂಬಲಾಗಿತ್ತು. ವಯಸ್ಸಿನ ಭೇದವಿಲ್ಲದೆ ಮೃತಪಟ್ಟ ಕಾರಣ ಆತಂಕಗೊಂಡ ಗ್ರಾಮಸ್ಥರು 3 ತಿಂಗಳ ಹಿಂದೆ ಇಡೀ ಊರನ್ನೆ ಖಾಲಿ ಮಾಡಿ ಪಕ್ಕದ ಬೆಟ್ಟದಲ್ಲಿ ವಾಸಿಸುತ್ತಿದ್ದಾರೆ. 

Advertisement

ಸಾವಿಗೆ ಕ್ಷುಲ್ಲಕ ಕಾರಣ 
ಇಲ್ಲಿ ಸಾವಿಗೀಡಾದವರಿಗೆ ಬಲವಾದ ಕಾರಣಗಳಿಲ್ಲ. ಕ್ಷುಲ್ಲಾತಿಕ್ಷುಲ್ಲಕ ಕಾರಣಗಳಿಗೆ ಸಾವುಗಳು ಸಂಭವಿಸಿವೆ. ಕೆಲವರು ಎತ್ತುಗಳ ನೊಗ ತಾಗಿ ಸತ್ತರೆ, ಕೆಲವರು ಸಣ್ಣಪುಟ್ಟ ಜ್ವರ ಬಂದು ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಹೊಟ್ಟೆ, ಮೈ ಕೈ ದಪ್ಪವಾಗಿ ಸತ್ತಿದ್ದಾರೆ. ಮದುವೆಯಾಗಿ ಸಂಸಾರ ಮಾಡಬೇಕಿದ್ದ ಯುವಕರು ಇದಕ್ಕೆ ಹೊರತಾಗಿಲ್ಲ. ಆರೋಗ್ಯವಾಗಿದ್ದ ವೃದ್ಧರೂ ದಿಢೀರ್‌ ಸಾವಿಗೀಡಾಗಿದ್ದಾರೆ. ಜ್ವರ ಎಂದು ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮೃತಪಟ್ಟವರೂ ಇದ್ದಾರೆ. ಪ್ರತಿ ಮನೆಯಲ್ಲಿ ಕನಿಷ್ಠ ಏನಿಲ್ಲ ಎಂದರೂ ಮೂರರಿಂದ ನಾಲ್ಕು ಜನ ಮೃತಪಟ್ಟಿದ್ದಾರೆ.

ತಾಂಡಾವನ್ನೇ ತೊರೆದರು!
ಇದು ಸಂಪೂರ್ಣ ಕೃಷಿ ಅವಲಂಬಿತ ಗ್ರಾಮ. ಬಹುತೇಕ ಅನಕ್ಷರಸ್ಥರೇ ಹೆಚ್ಚು. ಯಾವುದೋ ದುಷ್ಟ ಶಕ್ತಿಯೋ ಇಲ್ಲ, ದೈವ ಶಕ್ತಿಯಧ್ದೋ ಕೈವಾಡ ಎಂದು ಮನಗಂಡ ಗ್ರಾಮಸ್ಥರು ವಿವಿಧ ಸ್ವಾಮೀಜಿಗಳು, ಗುರುಗಳ ಬಳಿ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಎಲ್ಲರಿಂದ ಬಂದ ಒಂದೇ ಉತ್ತರ ಆ ಸ್ಥಳ ಸರಿಯಿಲ್ಲ. ಮೊದಲು ಖಾಲಿ ಮಾಡಿ ಎಂದು. ಹೀಗಾಗಿ ವಿಧಿ ಇಲ್ಲದೇ ತಾಂಡಾದ 35ಕ್ಕೂ ಅಧಿಕ ಕುಟುಂಬಗಳು ಗ್ರಾಮ ತೊರೆದು ಪಕ್ಕದ ಒಂದು ಕಿ.ಮೀ. ದೂರದ ಬೆಟ್ಟದ ಮೇಲೆ ಟಿನ್‌ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿವೆ. ತಾಂಡಾದಲ್ಲಿ ವಾಸಿಸಬೇಕು ಎಂದು ಕಟ್ಟಿಕೊಂಡ ದೊಡ್ಡ ದೊಡ್ಡ ಮನೆಗಳು ಈಗ ಹಾಳು ಬಿದ್ದಿವೆ. ಗ್ರಾಮದಲ್ಲಿ ದೊಡ್ಡ ಮನೆ ಕಟ್ಟುವಾಗಲೂ ಇಬ್ಬರು ದುರ್ಮರಣಕ್ಕೀಡಾಗಿದ್ದರು ಎನ್ನುತ್ತಾರೆ ಗ್ರಾಮಸ್ಥರು.

ರೋಗಬಾಧೆಯಿಲ್ಲ-ಕಷ್ಟದ ಅರಿವಿಲ್ಲ
ಇರುವುದರಲ್ಲಿಯೇ ಉತ್ತಮ ಸೌಲಭ್ಯಗಳಿರುವ ತಾಂಡಾ ಇದಾಗಿತ್ತು. ತಾಲೂಕು ಕೇಂದ್ರದಿಂದ 20 ಕಿ.ಮೀ. ದೂರದ ಈ ಗ್ರಾಮಕ್ಕೆ ಸುಸಜ್ಜಿತ ರಸ್ತೆಯಿದೆ. ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್‌ ಸರಬರಾಜು ಕೂಡ ಇದೆ. ಎಲ್ಲಕ್ಕಿಂತ ಮಿಗಿಲಾಗಿ ತಾಂಡಾ ನಿವಾಸಿಗಳು ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಂಡಿದ್ದಾರೆ. ಇಷ್ಟೆಲ್ಲ ಇದ್ದ ಗ್ರಾಮ ಹೀಗೆ ಯಮಕಾಟಕ್ಕೆ ತುತ್ತಾಗಿರುವುದಕ್ಕೆ ಯಾವುದೇ ರೋಗವೂ ಕಾರಣವಲ್ಲ. ಇಷ್ಟಾದರೂ ತಾಲೂಕು ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ತಾಂಡಾವಾಸಿಗಳ ಸಮಸ್ಯೆಗೆ ಸ್ಪಂದಿಸಿಲ್ಲ. ಪ್ರಚಾರಕ್ಕೆ ಬಂದ ವೇಳೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರೂ ಅವರು ಕ್ರಮ ತೆಗೆದುಕೊಂಡಿಲ್ಲ.

ಯಾವುದೋ ಸ್ವಾಮೀಜಿ ಮಾತು ಕೇಳಿ ಮೌಡ್ಯದಿಂದ ಗ್ರಾಮ ತೊರೆದಿದ್ದಾರೆ. ಅಲ್ಲಿನ ಸಾವುಗಳ ಬಗ್ಗೆ ಮಾಹಿತಿ ಪಡೆಯಲಾಗುವುದು. ಗ್ರಾಮಸ್ಥರ ಮನವೊಲಿಸುವ ಯತ್ನ ಮಾಡಲಾಗುವುದು.
ಶರಣಬಸಪ್ಪ ಕಟ್ಟೋಳಿ, ತಹಶೀಲ್ದಾರ್‌ 

Advertisement

ಸರಣಿ ಸಾವಿನಿಂದ ಕಂಗೆಟ್ಟ ಕಾರಣಕ್ಕೆ ನಾವು ತಾಂಡಾವನ್ನೇ ಖಾಲಿ ಮಾಡಿದೆವು. ಈಗ ತಗಡಿನ ಶೆಡ್‌ ನಿರ್ಮಿಸಿ ಬದುಕುತ್ತಿದ್ದೇವೆ. 
ಮುಕ್ಕಣ್ಣ, ಬೊಗಡಿಗೋಟ ತಾಂಡಾ ನಿವಾಸಿ

 ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next