ಆಲಂಕಾರು: ಉಪ್ಪಿನಂಗಡಿ ಕಡಬ ರಾಜ್ಯ ಹೆದ್ದಾರಿಯ ಕುಂತೂರು ಸೇತುವೆಯಲ್ಲಿ ಜೀಪು, ಕಾರು, ಬೈಕ್‌ಗಳ ನಡುವೆ ಮಂಗಳವಾರ ಅಪರಾಹ್ನ ಸರಣಿ ಅಪಘಾತ ಸಂಭವಿಸಿ 15 ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಕುಂತೂರು ಗ್ರಾಮದ ಸೇತುವೆಯಲ್ಲಿ ಕಡಬ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಬಾಲಕೃಷ್ಣ ಅವರು ಚಲಾಯಿಸುತ್ತಿದ್ದ ಬೈಕನ್ನು ಜೀಪು ಹಿಂದಿಕ್ಕಿ ಸುಬ್ರಹ್ಮಣ್ಯದಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯಿತು. ಢಿಕ್ಕಿ ಹೊಡೆದ ರಭಸಕ್ಕೆ ಜೀಪು ಹಿಂದೆ ಬಂದು ಹಿಂದಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆಯಿತು. ಬಳಿಕ ಜೀಪು ಸೇತುವೆಯ ತಡೆಗೋಡೆಗೂ ಢಿಕ್ಕಿ ಹೊಡೆದು ಟಯರ್ ಕಳಚಿ ನಿಂತಿತು.
ಕಾರಿನಲ್ಲಿದ್ದ ಉಡುಪಿ ಮೂಲದ ನಾಣಯ್ಯ, ಚಂದ್ರಾವತಿ, ಲೋಕಮ್ಮ, ಸುಚಿತ್ರಾ, ಗೀತಾ, ಜಯಂತಿ ಮತ್ತು ಸೌಮ್ಯಾ ಗಾಯಗೊಂಡು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಡಿಂಬಾಳ ಮೂಲದ ಪಳತ್ತೋಡಿಯ ಒಂದೇ ಕುಟುಂಬದ ಸದಸ್ಯರು ಉಪ್ಪಿನಂಗಡಿ ಸಹಸ್ರ ಲಿಂಗೇಶ್ವರ ದೇವಾಲಯದಲ್ಲಿ ಸಂಬಂಧಿಕರ ಉತ್ತರಕ್ರಿಯೆ ಕಾರ್ಯಕ್ರಮವನ್ನು ಮುಗಿಸಿ ಕೊಂಡಿಂಬಾಳಕ್ಕೆ ಹಿಂದಿರುಗುವ ವರಿದ್ದರು. ಜೀಪಿನಲ್ಲಿದ್ದ ಪುಷ್ಪಾ, ವಿವಲಾ, ಭವಾನಿ, ಧರ್ಮಪಾಲ, ತೀರ್ಥಪ್ರಸಾದ್, ನಾರಾಯಣ, ಕುಸುಮಾಧರ, ದೇವಿಪ್ರಸಾದ್, ಸುಶೀಲಾ ಅವರು ಗಾಯಗೊಂಡಿದ್ದು ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಪತ್ರಕರ್ತ ಬಾಲಕೃಷ್ಣ ಅವರ ಕಾಲು ಮುರಿತ ಕ್ಕೊಳಗಾಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಇದೇ ಸ್ಥಳದಲ್ಲಿ ಕಾರು ಮತ್ತು ಲಾರಿ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವರು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದರು. ಕಳೆದ ಸಂಭವಿಸಿದ ಅಪಘಾತದಲ್ಲಿ ತಿಂಗಳು ಇಬ್ಬರು ಮೃತಪಟ್ಟಿದ್ದರು.