ಧಾರವಾಡ: ಜೈಲುವಾಸಿಗಳ ಆರೋಗ್ಯ ನಿರ್ವಹಣೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಆರಂಭಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಅಧ್ಯಕ್ಷ ವಿ.ಶ್ರೀಶಾನಂದ ಹೇಳಿದರು.
ಕೇಂದ್ರ ಕಾರಾಗೃಹ ಇಲಾಖೆ, ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿನ ಬಂಧಿಗಳಿಗೆ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಾರಾಗೃಹದಲ್ಲಿರುವ ಬಂಧಿಗಳನ್ನು ಪ್ರೀತಿ ಮತ್ತು ಮಾನವೀಯತೆಯಿಂದ ಕಾಣಬೇಕು. ಯಾವುದೋ ಆವೇಶದ ಕ್ಷಣದಲ್ಲಿ ಎಸಗಿದ ತಪ್ಪಿಗೆ ಪ್ರಾಯಶ್ಚಿತರಾಗಬೇಕು. ಜೈಲಿನಲ್ಲಿರುವ ವಿಚಾರಣಾಧೀನ ಮತ್ತು ಶಿಕ್ಷೆಗೆ ಒಳಪಟ್ಟಧಿ ಕೈದಿಗಳಿಗೆ ಉತ್ತಮ ಆಹಾರ, ಆರೋಗ್ಯ ಸೌಲಭ್ಯಗಳನ್ನು ದೊರಕಿಸಿಕೊಡಲು ವಿಚಾರಣೆ ಸಂದರ್ಭದಲ್ಲಿ ಎಲ್ಲ ನ್ಯಾಯಾಧೀಶರು ಗಮನ ಹರಿಸುತ್ತಾರೆ.
ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ ವೇಳೆ ಹೆಚ್ಚಿನ ಚಿಕಿತ್ಸೆಯ ಅಗತ್ಯತೆ ಕಂಡು ಬಂದರೆ ತಜ್ಞ ವೈದ್ಯರ ಭೇಟಿಗೆ ಏರ್ಪಾಟು ಮಾಡಲಾಗುವುದು ಎಂದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಗಿರಿಧರ ಕುಕನೂರ ಮಾತನಾಡಿ, ಪ್ರತಿಯೊಬ್ಬರಿಗೂ ದೈಹಿಕ, ಮಾನಸಿಕ ಆರೋಗ್ಯದೊಂದಿಗೆ ಸಾಮಾಜಿಕ ಮತ್ತು ಅಧ್ಯಾತ್ಮ ಶಿಕ್ಷಣ ದೊರೆತಾಗ ಮನಃಪರಿವರ್ತನೆ ಸಾಧ್ಯವಾಗುತ್ತದೆ.
ಆಗಿ ಹೋದ ದುರ್ಘಟನೆ ಮರೆತು ಹೊಸ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಿದ್ಧರಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಅಧೀಕ್ಷಕ ಪಿ.ಎಸ್.ರಮೇಶ ಮಾತನಾಡಿ, ಬಂಧಿಗಳ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೈಗೊಳ್ಳುತ್ತಿರುವುದರಿಂದ ಸಾಕಷ್ಟು ಅನುಕೂಲಗಳಾಗಿವೆ.
ಜಿಲ್ಲಾಸ್ಪತ್ರೆಯಲ್ಲಿ ಭದ್ರತೆಯುಳ್ಳ ವಾರ್ಡ್ ಆರಂಭಿಸಲಾಗುತ್ತಿದೆ ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಎನ್.ಹೆಗಡೆ, ನ್ಯಾಯಾಧೀಶರಾದ ಎಸ್.ಎಸ್. ಬಳ್ಳೊಳ್ಳಿ, ಸುಮಂಗಲಾ ಬಸಣ್ಣವರ, ಕೇಂದ್ರ ಕಾರಾಗೃಹದ ಹಿರಿಯ ವೈದ್ಯಾಧಿಕಾರಿ ಡಾ| ಮಾರುತಿ ಹೆಬ್ಬಳ್ಳಿ,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ. ಡೊಳ್ಳಿನ ಇದ್ದರು. ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಡಾ| ಐ.ಜೆ. ಮ್ಯಾಗೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕೆ.ಜ್ಯೋತಿ ಪ್ರಾರ್ಥಿಸಿದರು. ಪಿ.ಬಿ.ಕುರುಬೆಟ್ಟ ನಿರೂಪಿಸಿ, ವಂದಿಸಿದರು.