Advertisement

ಇಂದಿನಿಂದ ನೆರೆ ಪ್ರದೇಶಕ್ಕೆ ಸಚಿವರ ಪ್ರತ್ಯೇಕ ತಂಡ ಭೇಟಿ

11:14 PM Oct 22, 2019 | Lakshmi GovindaRaju |

ಬೆಂಗಳೂರು: ರಾಜ್ಯದ ಹಲವೆಡೆ ಮತ್ತೆ ನೆರೆ ಕಾಣಿಸಿಕೊಂಡಿರುವ ಪ್ರದೇಶಗಳಿಗೆ ಬುಧವಾರದಿಂದ ಸಚಿವರೆಲ್ಲಾ ಪ್ರತ್ಯೇಕ ತಂಡಗಳಾಗಿ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಈ ಹಿಂದೆ ನೆರೆ ಸಂತ್ರಸ್ತರಿಗೆ ಘೋಷಿಸಿರುವ ಪರಿಹಾರ, ಸೌಲಭ್ಯಗಳು ಈ ಬಾರಿಯ ನೆರೆ ಸಂತ್ರಸ್ತರಿಗೂ ಅನ್ವಯವಾಗಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

Advertisement

ವಿಧಾನಸೌಧದಲ್ಲಿ ಮಂಗಳವಾರ ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ್ತೆ ಕಾಣಿಸಿಕೊಂಡಿರುವ ನೆರೆಗೆ ಈವರೆಗೆ 11 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿಯಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು. ನೆರೆ ಪ್ರದೇಶಗಳಲ್ಲಿ ದೋಣಿ ಸೇರಿ ಪರಿಹಾರ ಸಲಕರಣೆ, ಸಾಧನಗಳಿದ್ದ ಕಾರಣ ಈ ಬಾರಿಯ ನೆರೆಯಿಂದ ಹೆಚ್ಚಿನ ಹಾನಿ ಉಂಟಾಗದಂತೆ ತ್ವರಿತವಾಗಿ ಪರಿಹಾರ ಕಾರ್ಯ ಕೈಗೊಳ್ಳಲು ಸಹಕಾರಿಯಾಯಿತು. ಪರಿಹಾರ ಸಾಧನ, ಸಲಕರಣೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ನೆರೆ ಪ್ರದೇಶಗಳಲ್ಲಿ ತ್ವರಿತವಾಗಿ ಕಾಳಜಿ ಕೇಂದ್ರ ತೆರೆಯುವಂತೆ ಸೂಚಿಸಲಾಗಿದೆ. ಬುಧವಾರ ಸಚಿವರ ತಂಡ ರಚಿಸಿಕೊಂಡು ನೆರೆ ಪ್ರದೇಶಕ್ಕೆ ಭೇಟಿ ನೀಡಲಿದ್ದೇವೆ. ಸಚಿವರು, ಜಿಲ್ಲಾಧಿಕಾರಿಗಳು, ಅಧಿಕಾರಿಗಳೆಲ್ಲ ಒಟ್ಟಿಗೆ ಇದ್ದು, ಪುನರ್ವಸತಿ ಕಾರ್ಯದ ಮೇಲ್ವಿಚಾರಣೆ ನಡೆಸಲಿದ್ದಾರೆ. 2-3 ದಿನಗಳಲ್ಲಿ ಆ ಬಗ್ಗೆ ವರದಿ ಸಿದ್ಧಪಡಿಸಿ ನಂತರ ಒಟ್ಟಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

“ನನ್ನ ಬಳಿ ಮಾಹಿತಿ ಇಲ್ಲ’: ಕೇಂದ್ರ ಸರ್ಕಾರವು ರಾಜ್ಯಕ್ಕೆ ಘೋಷಿಸಿರುವ ನೆರೆ ಪರಿಹಾರ ಬಿಡುಗಡೆಯಾಯಿತೇ ಎಂಬ ಪ್ರಶ್ನೆಗೆ, ತಮ್ಮ ಬಳಿ ಮಾಹಿತಿ ಇಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ಹಾಗಾದರೆ ಈ ವಿಚಾರ ಮಹತ್ವದ್ದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಮಹತ್ವದ ವಿಚಾರ. ಆದರೆ ನಾನು ಸಚಿವ ಸಂಪುಟ ಸಭೆಯ ಮಾಹಿತಿ ನೀಡುತ್ತಿದ್ದೇನೆ. ಮೊದಲೇ ಮಾಹಿತಿ ಕೇಳಿದ್ದರೆ ತಿಳಿದುಕೊಂಡು ಹೇಳುತ್ತಿದ್ದೆ. ಮಾಧ್ಯದವರು ಪ್ರಸ್ತಾಪಿಸಿದ ವಿಚಾರಗಳನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಪ್ರವಾಹ: ಐದು ಮಂದಿ ನಾಪತ್ತೆ
ಬೆಂಗಳೂರು: ರಾಜ್ಯದಲ್ಲಿ ಕಳೆದ 2-3 ದಿನಗಳಿಂದ ಮಳೆ ಹಾಗೂ ಪ್ರವಾಹದಿಂದ 5,444 ಮನೆಗಳು ಕುಸಿದಿದ್ದು, ಏಳು ಮಂದಿ ಮೃತಪಟ್ಟಿದ್ದು, ಇನ್ನೂ ಐವರು ನಾಪತ್ತೆಯಾಗಿದ್ದಾರೆ. ನದಿಗಳು ತುಂಬಿ ನೀರು ಹೊರ ಬಿಡುತ್ತಿರುವುದರಿಂದ ಪ್ರವಾಹದಿಂದ 45 ಜಾನುವಾರುಗಳು ಮೃತಪಟ್ಟಿದ್ದು, ಸಾಕಷ್ಟು ಆಸ್ತಿ-ಪಾಸ್ತಿ, ಬೆಳೆ ಹಾನಿಯುಂಟಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಪ್ರವಾಹ ಹಾನಿ ಕುರಿತ ಮಾಹಿತಿ ಬಿಡುಗಡೆ ಮಾಡಿ ಮಾತನಾಡಿ, ಬೆಳಗಾವಿ, ಬಾಗಲ ಕೋಟೆ, ಚಿಕ್ಕಮಗಳೂರು, ಕೊಡಗು, ಗದಗ, ಚಿತ್ರದುರ್ಗ ಸೇರಿ ಎಂಟು ಜಿಲ್ಲೆಗಳಲ್ಲಿ 12 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು 2,176 ಮಂದಿ ಆಶ್ರಯ ಪಡೆದಿದ್ದಾರೆ. ಜಿಲ್ಲಾಧಿಕಾರಿಗಳಿಗೆ ತುರ್ತು ಪರಿಹಾರ ಕಾಮಗಾರಿಗಳಿಗೆ ಪಿಡಿ ಖಾತೆಯಿಂದ ಹಣ ಬಿಡುಗಡೆ ಮಾಡಲು ಸೂಚಿಸಲಾ ಗಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಇಬ್ಬರು ಮೃತಪಟ್ಟಿದ್ದು, 1,000 ಮನೆ ಗಳ ಹಾನಿಯಾಗಿದೆ. ಕೊಪ್ಪಳದಲ್ಲಿ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದು ಮೃತದೇಹಗಳು ಪತ್ತೆಯಾಗಿಲ್ಲ. ರಾಯಚೂರಿನಲ್ಲೂ ಒಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದು ಮೃತ ದೇಹ ಪತ್ತೆಯಾಗಿಲ್ಲ ಎಂದು ತಿಳಿಸಿದರು. ಬಾಗಲಕೋಟೆಯಲ್ಲಿ 600, ದಾವಣಗೆರೆಯಲ್ಲಿ 210, ಚಿತ್ರದುರ್ಗದಲ್ಲಿ 180, ಧಾರವಾಡದಲ್ಲಿ 1814, ಹಾವೇರಿಯಲ್ಲಿ 1513, ಶಿವಮೊಗ್ಗದಲ್ಲಿ 2, ಉತ್ತರ ಕನ್ನಡದಲ್ಲಿ 10, ದಕ್ಷಿಣ ಕನ್ನಡದಲ್ಲಿ 23, ಉಡುಪಿಯಲ್ಲಿ 2 ಮನೆಗಳು ಹಾನಿಗೀಡಾಗಿವೆ ಎಂದು ಹೇಳಿದರು.

ಮುಖ್ಯಮಂತ್ರಿಯವರು ಹಾಗೂ ನಾನು ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳು ಸೇರಿ ಅಲ್ಲಿನ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ತೊಂದರೆಗೊಳಗಾದವರಿಗೆ ನೆರವು ಕಲ್ಪಿಸಲು ಸಹಾಯವಾಣಿ ಸಹ ತೆರೆಯಲಾಗಿದೆ. ಪರಿಹಾರ ಕಾರ್ಯಗಳಿಗೆ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಇಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next