Advertisement

ಸೈಕಲ್‌ ಸವಾರರಿಗಾಗಿ ಪ್ರತ್ಯೇಕ ಪಥ

12:13 PM Dec 20, 2018 | |

ಬೆಂಗಳೂರು: ರಾಜಧಾನಿಯಲ್ಲಿ ಸೈಕಲ್‌ ಸವಾರರ ಅನುಕೂಲಕ್ಕಾಗಿ ಪಾದಚಾರಿ ಮಾರ್ಗಗಳಿಗೆ ಹೊಂದಿಕೊಂಡಂತೆ ಪ್ರತ್ಯೇಕ ಸೈಕಲ್‌ ಪಥ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ.

Advertisement

ವಾಯುಮಾಲಿನ್ಯ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಸೈಕಲ್‌ ಬಳಕೆದಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಪಾಲಿಕೆ ತೀರ್ಮಾನಿಸಿದ್ದು, ಈಗಾಗಲೇ ಮೈಸೂರು ಮಾದರಿ ಬಾಡಿಗೆ ಸೈಕಲ್‌ ಸೇವೆ ಆರಂಭಿಸಲು ಯೋಜನೆ ಜಾರಿಯಲ್ಲಿದೆ. ಅದಕ್ಕೆ ಪೂರಕವೆಂಬಂತೆ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ಸೈಕಲ್‌ ಪಥ ನಿರ್ಮಿಸಲು ಟೆಂಡರ್‌ ಕರೆದಿದೆ.

ಪರಿಸರ ಸ್ನೇಹಿ ವಾಹನ ಬಳಕೆಗೆ ಪ್ರೋತ್ಸಾಹಿಸಲು ಹಾಗೂ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ನಗರ ಭೂ ಸಾರಿಗೆ ನಿರ್ದೇಶನಾಲಯ ಬೆಂಗಳೂರಿನಲ್ಲಿ ಟ್ರಿಣ್‌ ಟ್ರಿಣ್‌ ಯೋಜನೆ ಜಾರಿಗೊಳಿಸಿದೆ. ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸೈಕಲ್‌ಗ‌ಳನ್ನು ಬಾಡಿಗೆಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ. ಅದರಂತೆ ಯೋಜನೆಗಾಗಿ 125 ಕಿ.ಮೀ. ಉದ್ದದ ರಸ್ತೆಯಲ್ಲಿ ಪ್ರತ್ಯೇಕ ಸೈಕಲ್‌ ಪಥ ನಿರ್ಮಾಣವಾಗಬೇಕಿದೆ. 

ಅದರಂತೆ ಬಿಬಿಎಂಪಿ 75 ಕಿ.ಮೀ. ಉದ್ದದ ಸೈಕಲ್‌ ಪಥ ನಿರ್ಮಿಸಿಕೊಡಲಿದ್ದು, ಪ್ರಮುಖವಾಗಿ ಮೆಟ್ರೋ ಮಾರ್ಗಕ್ಕೆ ಸಂಪರ್ಕಿಸುವ ಪಾದಚಾರಿ ಮಾರ್ಗಗಳಲ್ಲಿ ಆದ್ಯತೆ ಮೇರೆಗೆ ಪಥ ನಿರ್ಮಿಸಲು ಪಾಲಿಕೆ ಸಿದ್ಧತೆ ನಡೆಸಿದೆ. ಇದರಿಂದಾಗಿ ಮೆಟ್ರೋ ಬಳಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಪಾಲಿಕೆಯ ಅಭಿಪ್ರಾಯ.

ಮೊದಲ ಹಂತಕ್ಕೆ 55.50 ಕೋಟಿ ರೂ. ವೆಚ್ಚ: ಪಾದಚಾರಿ ಮೇಲ್ದರ್ಜೆಯೊಂದಿಗೆ ಸೈಕಲ್‌ಪಥ ನಿರ್ಮಿಸಿಕೊಡುವ ಯೋಜನೆಯ ಮೊದಲ ಹಂತಕ್ಕೆ 55.50 ಕೋಟಿ ರೂ. ವೆಚ್ಚವಾಗಲಿದೆ. ಅದರಂತೆ ನಗರದ ಎಂ.ಜಿ.ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ, ಹೊರವರ್ತುಲ ರಸ್ತೆ ಮೂಲಕ ಸುರಂಜನ್‌ ದಾಸ್‌ ರಸ್ತೆಗೆ ಸಂಪರ್ಕಿಸುವಂತೆ ಸೈಕಲ್‌ ಪಥ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಸೈಕಲ್‌ ಪಥ ನಿರ್ಮಾಣ ಹಾಗೂ ಪಾದಚಾರಿ ಅಭಿವೃದ್ಧಿಗೆ ಟೆಂಡರ್‌ ಆಹ್ವಾನಿಸಿದ್ದು, ಒಂದು ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಜತೆಗೆ ಮೂರು ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಅವಕಾಶ ನೀಡಲಾಗುತ್ತದೆ.

Advertisement

2ನೇ ಹಂತಕ್ಕೂ ಡಿಪಿಆರ್‌: ಪಾಲಿಕೆಯಿಂದ ನಿರ್ಮಿಸಲು ಉದ್ದೇಶಿಸಿರುವ ಸೈಕಲ್‌ ಪಥ ನಿರ್ಮಾಣ ಕಾಮಗಾರಿಯ ಮೊದಲ ಹಂತ ಆರಂಭವಾಗುವ ಮೊದಲೇ ಎರಡನೇ ಹಂತಕ್ಕೂ ಅಧಿಕಾರಿಗಳು ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿದ್ದಾರೆ. 55.50 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಕೈಗೊಳ್ಳಲು ಮುಂದಾಗಿರುವ ಪಾಲಿಕೆಯು, ಎರಡನೇ ಹಂತಕ್ಕಾಗಿ 40 ಕೋಟಿ ರೂ. ವ್ಯಯಿಸಲು ನಿರ್ಧರಿಸಿದೆ. 

ಆರು ಸಾವಿರ ಸೈಕಲ್‌ ಖರೀದಿ: ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಬಾಡಿಗೆ ಸೈಕಲ್‌ ಯೋಜನೆ ಜಾರಿಗೊಳಿಸುತ್ತಿರುವ ನಗರ ಭೂ ಸಾರಿಗೆ ನಿರ್ದೇಶನಾಲಯ ಮುಂದಾಗಿದೆ. ಅದರಂತೆ ಪ್ರತಿ 250 ರಿಂದ 350 ಮೀಟರ್‌ ದೂರದಲ್ಲಿ ಒಂದು ಸೈಕಲ್‌ ನಿಲುಗಡೆ ತಾಣವನ್ನು ನಿರ್ಮಿಸುವ ಮೂಲಕ ಒಟ್ಟು 25 ಕಿ.ಮೀ. ವ್ಯಾಪ್ತಿಯಲ್ಲಿ ಯೋಜನೆ ಜಾರಿಯಾಗಲಿದ್ದು,

ಒಟ್ಟು 345 ನಿಲುಗಡೆ ತಾಣಗಳು ಸ್ಥಾಪನೆಯಾಗಲಿವೆ. ಸಾರ್ವಜನಿಕರಿಗೆ ಸೈಕಲ್‌ಗ‌ಳ ಕೊರತೆಯಾಗದಿರಲು 6 ಸಾವಿರ ಸೈಕಲ್‌ಗ‌ಳನ್ನು ಖರೀದಿಗೆ ಇಲಾಖೆ ನಿರ್ಧರಿಸಿದ್ದು, ಪ್ರತಿಯೊಂದು ತಾಣದಲ್ಲಿ ಸ್ವೆ„ಪಿಂಗ್‌ ಕಾರ್ಡ್‌ (ಸ್ಮಾರ್ಟ್‌ಕಾರ್ಡ್‌) ಅಥವಾ ಆ್ಯಪ್‌ ಆಧಾರಿತ ತಂತ್ರಜ್ಞಾನದ ಮೂಲಕ ಸೈಕಲ್‌ ಬಾಡಿಗೆಗೆ ಪಡೆಯಬಹುದು. ಸೈಕಲ್‌ಗ‌ಳನ್ನು ಗಂಟೆ ಲೆಕ್ಕದಲ್ಲಿ ಬಾಡಿಗೆಗೆ ನೀಡಲು ನಿರ್ಧರಿಸಿದ್ದು, ಪ್ರತಿ ಗಂಟೆಗೆ 5 ರೂ. ನಿಗದಿ ಮಾಡಲು ಚಿಂತಿಸಲಾಗಿದೆ.

ನಗರ ಭೂ ಸಾರಿಗೆ ಇಲಾಖೆಯಿಂದ ಜಾರಿಗೊಳಿಸಲು ಉದ್ದೇಶಿಸಿರುವ ಟ್ರಿಣ್‌ ಟ್ರಿಣ್‌ ಯೋಜನೆಗೆ ಪೂರಕವಾಗಿ ಪಾದಚಾರಿ ಮಾರ್ಗಗಳ ಮೇಲ್ದರ್ಜೆಯೊಂದಿಗೆ ಪ್ರತ್ಯೇಕ ಸೈಕಲ್‌ ಪಥ ನಿರ್ಮಿಸಲು ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದಾಗಿ ಸೈಕಲ್‌ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. 
-ಎಂ.ಶಿವರಾಜು, ಆಡಳಿತ ಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next