Advertisement

ನೀರಾವರಿ ಯೋಜನೆಗಳಿಗೆ ಇನ್ಮೇಲೆ ಪ್ರತ್ಯೇಕ ಸಭೆ

07:05 AM Jul 03, 2019 | Team Udayavani |

ಚಾಮರಾಜನಗರ: ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಭೆ ಕರೆದು ವಿವರವಾಗಿ ಚರ್ಚಿಸಲು ಅವಕಾಶ ಮಾಡಿಕೊಡುವುದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರೈತ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಅಸಮಾಧಾನ: ಸಭೆಯ ಆರಂಭದಲ್ಲೇ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌, ಪ್ರಧಾನ ಕಾರ್ಯದಶಿ ಡಾ. ಗುರುಪ್ರಸಾದ್‌, ಚನ್ನಂಜಪ್ಪ, ವಿಭಾಗೀಯ ಕಾರ್ಯದರ್ಶಿ ಮಹೇಶ್‌ ಪ್ರಭು, ಕಡಬೂರು ಮಂಜುನಾಥ್‌, ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಸೇರಿದಂತೆ ಹಲವಾರು ಮುಖಂಡರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೂ ಸೇರಿದಂತೆ ಇತರೆ ನೀರಾವರಿ ಸಂಬಂಧಿ ಯೋಜನೆಗಳು ವಿಳಂಬವಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದರು.

ಯೋಜನೆ ಕುರಿತು ವಿವರಣೆ: ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ಶ್ರೀಕಂಠಪ್ರಸಾದ್‌ ಹಾಗೂ ಕಾರ್ಯಪಾಲಕ ಎಂಜಿನಿಯರ್‌ ರಾಜೇಂದ್ರ ಪ್ರಸಾದ್‌ ಅವರು ಕೆರೆಗೆ ನೀರು ತುಂಬಿಸುವ ಯೋಜನೆಗಳ ಕುರಿತು ವಿವರ ನೀಡಿದರು. ಈ ಹಂತದಲ್ಲಿ ನಿಖರ ಹಾಗೂ ಪರಿಪೂರ್ಣವಾದ ಮಾಹಿತಿಗಳು ಲಭ್ಯವಾಗುತ್ತಿಲ್ಲವೆಂಬ ಅಭಿಪ್ರಾಯವನ್ನು ರೈತ ಮುಖಂಡರು ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ‌ ಸಿ. ಪುಟ್ಟರಂಗಶೆಟ್ಟಿ ಅವರು ಸಹ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯನ್ನು ಕುರಿತು ವಿವರಿಸಿದರು. ಮತ್ತಷ್ಟು ವಿವರವಾಗಿ ಮಾಹಿತಿ ನೀಡಲು ಅನುವಾಗುವಂತೆ ಪ್ರತ್ಯೇಕವಾಗಿ ನೀರಾವರಿ ವಿಷಯಗಳಿಗೆ ಸಂಬಂಧಿಸಿದಂತೆ ಸಭೆ ಕರೆಯಲಾಗುವುದು ಎಂದು ಸಚಿವರು ತಿಳಿಸಿದರು.

Advertisement

ಯಾವುದೇ ಕ್ರಮ ಕೈಗೊಂಡಿಲ್ಲ: ಗಣಿಗಾರಿಕೆಯಿಂದ ಜನರು ತುಂಬ ತೊಂದರೆ ಅನುಭವಿಸುವಂತಾಗಿದೆ ಎಂಬ ವಿಷಯವನ್ನು ರೈತ ಮುಖಂಡರು ಪ್ರಸ್ತಾಪಿಸಿದರು. ಗಣಿಗಾರಿಕೆಗಾಗಿ ನಡೆಸಲಾಗುತ್ತಿರುವ ನ್ಪೋಟಕ, ಇನ್ನಿತರ ಚಟುವಟಿಕೆಗಳು ನಿಯಮಕ್ಕೆ ಅನುಗುಣವಾಗಿ ನಡೆಯುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಅಕ್ರಮವಾಗಿ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಕ್ರಮ ವಹಿಸಬೇಕೆಂದು ಈ ಹಿಂದಿನಿಂದಲೂ ಒತ್ತಾಯ ಮಾಡಲಾಗುತ್ತಿದೆ. ಆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಕ್ರಮದ ಭರವಸೆ: ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಚೆಕ್‌ ಪೋಸ್ಟ್‌ ಗಳನ್ನು ಸಹ ತೆರೆಯಲಾಗುತ್ತಿದ್ದು ಶೀಘ್ರವೇ ಕಾರ್ಯ ಆರಂಭ ಮಾಡಲಿದೆ ಎಂದರು.

ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದೇವೆ: ಅರಣ್ಯ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಮಲೆಮಹದೇಶ್ವರ ಬೆಟ್ಟದ ಭಾಗದಲ್ಲಿ ಸಾಕಷ್ಟು ತೊಂದರೆಗಳಿವೆ ಎಂಬುದನ್ನು ಸಭೆಯ ಗಮನಕ್ಕೆ ತರಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌. ಲತಾಕುಮಾರಿ ಮಾತನಾಡಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದೇವೆ ಎಂದರು.

ನಿಯಮ ಉಲ್ಲಂಘಿಸಿದ್ರೆ ಕ್ರಮ: ಕಾಡುಪ್ರಾಣಿಗಳು ಬೆಳೆಯನ್ನು ನಾಶ ಮಾಡುತ್ತಿದ್ದು ಇದರ ಹಾವಳಿಗೆ ತಡೆ ಹಾಕಬೇಕು. ಬೆಳೆ ಹಾನಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು, ಗಿರಿವಿದಾರರು ಉಲ್ಲಂ ಸುತ್ತಿರುವ ನಿಯಮಗಳ ವಿರುದ್ಧ ಕ್ರಮ ಜರುಗಿಸಬೇಕು, ಸಾರಿಗೆ ಇಲಾಖೆಯಲ್ಲಿ ಮದ್ಯವರ್ತಿಗಳ ಪ್ರವೇಶಕ್ಕೆ ಕಡಿವಾಣ ಹಾಕಬೇಕು ಎಂಬ ವಿಷಯಗಳು ಸಭೆಯಲ್ಲಿ ವಿವರವಾಗಿ ಪ್ರಸ್ತಾಪಿಸಲಾಯಿತು.

ತೋಟಗಾರಿಕೆ, ಕೃಷಿ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ, ಬ್ಯಾಂಕುಗಳು ನೀಡುವ ಸಾಲ, ಬೆಳೆ ವಿಮೆ ಇತರೆ ವಿಷಯಗಳ ಕುರಿತು ವಿವರವಾಗಿ ಚರ್ಚಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ ಸರಿಯಾದ ಕ್ರಮ ಅನುಸರಿಸದೇ ಇರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಎಸ್‌. ಮಹೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದಕುಮಾರ್‌, ಉಪವಿಭಾಗಾಧಿಕಾರಿ ನಿಖೀತಾ, ಜಂಟಿ ಕೃಷಿ ನಿರ್ದೇಶಕ ಎಂ. ತಿರುಮಲೇಶ್‌, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next